Advertisement

ಪರೀಕ್ಷೆಯ ಸಂದರ್ಭ ವಿದ್ಯಾರ್ಥಿಗಳ ಏಕಾಗ್ರತೆ ಹೇಗೆ ಹೆಚ್ಚಿಸಬಹುದು?

10:50 PM Feb 11, 2020 | mahesh |

ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರವಾಗುತ್ತಾ ಬಂತು. ಶಾಲೆ, ಮನೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಒತ್ತಡವೂ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ ಎಷ್ಟೇ ಓದಿದರೂ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಕೊರತೆಯಿದ್ದರೆ ಓದಿದ್ದು ನೆನಪಿನಲ್ಲಿ ಉಳಿಯಲು ಸಾಧ್ಯವಿಲ್ಲ. ಏಕಾಗ್ರತೆಯಿದ್ದರೆ ಮಾತ್ರ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಸಾಧ್ಯ. ಆದ್ದರಿಂದ ಮಕ್ಕಳ ಏಕಾಗ್ರತೆಗೆ ಪೂರಕವಾಗುವಂತಹ ಕೆಲಸವನ್ನು ಮನೆಯವರು, ಶಿಕ್ಷಕರು ಮತ್ತು ಸ್ವತಃ ವಿದ್ಯಾರ್ಥಿಗಳೂ ಅರಿತಿರಬೇಕು.

Advertisement

ಪರೀಕ್ಷೆಗೆ ಅಥವಾ ಯಾವುದೇ ಸಂದರ್ಭದಲ್ಲೂ ಓದುವಾಗ ಏಕಾಗ್ರತೆಯಿದ್ದರೆ ಮಾತ್ರ ಓದಿದ್ದೂ ನೆನಪಿನಲ್ಲಿ ಉಳಿಯುತ್ತದೆ. ವಿದ್ಯಾರ್ಥಿಗಳ ಏಕಾಗ್ರತೆಗಾಗಿ ಒಂದಿಷ್ಟು ಟಿಪ್ಸ್‌ ಇಲ್ಲಿದೆ.

1. ಅಧ್ಯಯನಕ್ಕೆ ಸರಿಯಾದ ಸಿದ್ಧತೆ
ಮನೆಯಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಲು ಪೂರ್ವಸಿದ್ಧತೆ ಅಗತ್ಯವಿದೆ. ಸರಿಯಾದ ಜಾಗದ ಆಯ್ಕೆ, ವಾತಾವರಣ ಚೆನ್ನಾಗಿರಲಿ. ಇದರಿಂದ ಏಕಾಗ್ರತೆಯಿಂದ ಓದಲು ಸಾಧ್ಯ.

2. ಓದಲು ಕುಳಿತುಕೊಳ್ಳುವ ಮೊದಲೇ ಎಲ್ಲ ಪರಿಕರಗಳನ್ನು ತೆಗೆದುಕೊಳ್ಳಿ.
ಓದಲು ಕುಳಿತುಕೊಳ್ಳುವ ಮೊದಲೇ ಎಲ್ಲ ಪರಿಕರಗಳನ್ನು ತೆಗೆದುಕೊಳ್ಳುವುದು ಉತ್ತಮ. ಇದರಿಂದ ಮಧ್ಯೆ ಮಧ್ಯೆ ಓಡಾಡುವ ಸಂದರ್ಭ ಕಡಿಮೆಯಾಗುತ್ತದೆ.

3. ಓದುವ ಜಾಗವನ್ನು ಶುದ್ಧವಾಗಿಟ್ಟುಕೊಳ್ಳಿ.
ಓದುವ ಜಾಗ ಶುಚಿಯಾಗಿದ್ದರೆ ಮನಸ್ಸಿಗೆ ಮುದ ನೀಡುತ್ತದೆ. ಇದರಿಂದ ಏಕಾಗ್ರತೆಯಿಂದ ವಿದ್ಯಾರ್ಥಿಗಳು ಓದಲು ಸಾಧ್ಯ. ಓದುವ ಜಾಗದಲ್ಲಿ ಅನಾವಶ್ಯಕ ವಸ್ತುಗಳು, ಏಕಾಗ್ರತೆಗೆ ಭಂಗ ಉಂಟು ಮಾಡುವಂತಹ ವಾತಾವರಣ ಇರದಂತೆ ನೋಡಿಕೊಳ್ಳುವುದು ಉತ್ತಮ.

Advertisement

4. ಮೊಬೈಲ್‌ ಫೋನ್‌ಗಳನ್ನು ಓದುವ ಜಾಗಕ್ಕೆ ತರಬೇಡಿ
ಇತ್ತೀಚೆಗೆ ವಿದ್ಯಾರ್ಥಿಗಳ ಏಕಾಗ್ರತೆಗೆ ತೊಡಕು ಎಂದರೆ ಅದು ಮೊಬೈಲ್‌ ಫೋನ್‌. ಅದನ್ನು ಓದುವ ಜಾಗದಿಂದ ಮಾರು ದೂರದಲ್ಲಿಡುವುದನ್ನು ರೂಢಿಸಿಕೊಳ್ಳಬೇಕು ಅಥವಾ ಅದನ್ನು ಸ್ವಿಚ್‌ಆಫ್ ಮಾಡಿ ಇಡುವುದರಿಂದ ಏಕಾಗ್ರತೆ ಕಾಯ್ದುಕೊಳ್ಳಲು ಸಾಧ್ಯ.

5. ಟೈಮ್‌ ಟೇಬಲ್‌ ಅಗತ್ಯ
ಪ್ರತಿಯೊಂದು ಕೆಲಸದಲ್ಲಿ ಶಿಸ್ತು ಇದ್ದರೆ ಕೆಲಸ ಹೆಚ್ಚು ಪ್ರಭಾವ ಬೀರುತ್ತದೆ. ಓದಿನಲ್ಲೂ ಹಾಗೆ. ಸರಿಯಾದ ಸಮಯಕ್ಕೆ ಓದು, ಊಟ, ನಿದ್ದೆ ಮಾಡಿದರೆ ಮಾತ್ರ ಏಕಾಗ್ರತೆಯಿರಲು ಸಾಧ್ಯ. ಪರೀಕ್ಷೆಯ ಒತ್ತಡದಲ್ಲಿ ದಿನವಿಡೀ ಊಟ, ನಿದ್ದೆ ಮಾಡದೆ ಓದಲು ಆರಂಭಿಸಿದರೆ ಓದಿದ್ದೂ ಪ್ರಯೋಜನಕ್ಕೆ ಬರುವುದಿಲ್ಲ. ಆದ್ದರಿಂದ ಯಾವ ಸಮಯದಲ್ಲಿ ಓದಬೇಕು, ಎಷ್ಟು ಅವಧಿ ಓದಬೇಕು ಎನ್ನುವುದನ್ನು ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ನಿಗದಿಪಡಿಸಿ ಪ್ರತಿದಿನ ಓದಬೇಕು.

6. ಪ್ರಮುಖ ಅಂಶ ಬರೆದಿಡಿ
ಓದುತ್ತಿರುವಾಗ ಪ್ರಮುಖವಾದ ಅಂಶಗಳನ್ನು ಬರೆದಿಟ್ಟುಕೊಳ್ಳುವುದರಿಂದ ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದು ಮತ್ತು ಪರೀಕ್ಷೆಯ ದಿನ ಆ ಪಾಯಿಂಟ್‌ಗಳ ಮೂಲಕ ಓದಿದ್ದನ್ನು ಮರುಕಳಿಸಿಕೊಳ್ಳಬಹುದು.

7. ಓದುವ ಮಧ್ಯೆ ಬ್ರೇಕ್‌ ತೆಗೆದುಕೊಳ್ಳಿ
ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆಯಿರಬೇಕಾದರೆ ನಿರಂತರವಾಗಿ ಓದುವ ಬದಲು ಮಧ್ಯೆ ಮಧ್ಯೆ ಒಂದಿಷ್ಟೂ ಬ್ರೇಕ್‌ ತೆಗೆದುಕೊಳ್ಳಿ. ಇದರಿಂದ ಹೆಚ್ಚು ಸಮಯ ಓದಲು ಸಾಧ್ಯವಾಗುತ್ತದೆ.

- ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next