ಹೊಸದಿಲ್ಲಿ : ಅಪ್‌ಜಲ್ ಪ್ರೇಮಿ ಗ್ಯಾಂಗ್ ನಡೆಸುತ್ತಿರುವ ಹಲವಾರು ಮಾಧ್ಯಮ ವರದಿಗಳಲ್ಲಿ ತನ್ನನ್ನು ‘ಹೆಮ್ಮೆಯ ಭಾರತೀಯ ಪ್ರಜೆ’ ಎಂದು ಬಿಂಬಿಸಲಾಗಿರುವುದಕ್ಕೆ ಸಂಸತ್ ಭವನದ ಮೇಲಿನ ದಾಳಿಯ ಅಪರಾಧಿ ಅಫ್ಜಲ್ ಗುರು ಪುತ್ರ ಗಾಲಿಬ್ ಗುರು ಕೋಪಾವೇಶ ವ್ಯಕ್ತಪಡಿಸಿರುವುದು ವರದಿಯಾಗಿದೆ.
‘ನನ್ನ ತಂದೆಯನ್ನು ಅವರು ಕೊಂದಿರುವಾಗ ಮತ್ತು ನಮ್ಮ ಇಡಿಯ ಕುಟುಂಬಕ್ಕೆ ಮತ್ತು ಇಡಿಯ ಕಾಶ್ಮೀರಕ್ಕೆ ಅನ್ಯಾಯವಾಗಿರುವಾಗ ನಾನು ಹೇಗೆ ತಾನೇ ಹೆಮ್ಮೆಯ ಭಾರತೀಯ ಪ್ರಜೆಯಾಗಿರಲು ಸಾಧ್ಯ’ ಎಂದು ಉನ್ನತ ಶಿಕ್ಷಣ ಕೈಗೊಳ್ಳಲು ವಿದೇಶಕ್ಕೆ ಹೋಗುವುದಕ್ಕಾಗಿ ಪಾಸ್ ಪೋರ್ಟ್ ಗೆ ಅರ್ಜಿ ಹಾಕಿರುವ ಗಾಲಿಬ್ ಹೇಳಿರುವುದು ವರದಿಯಾಗಿದೆ.
‘ನಾನು ಹೇಳಿರುವುದನ್ನೆಲ್ಲ ತಿರುಚಿ ವರದಿ ಮಾಡಿರುವ ಮಾಧ್ಯಮಗಳ’ ವಿರುದ್ಧ ಗಾಲಿಬ್ ಆಕ್ರೋಶ ವ್ಯಕ್ತಪಡಿಸಿದರು.
‘ನನ್ನ ಬಳಿ ಆಧಾರ್ ಕಾರ್ಡ್ ಇದೆ; ಹಾಗಿರುವಾಗ ನಾನ್ಯಾಕೆ ಪಾಸ್ ಪೋರ್ಟ್ ಪಡೆಯಬಾರದು; ವಿದೇಶದಲ್ಲಿ ಸ್ಕಾಲರ್‌ಶಿಪ್ ಗೆ ಅರ್ಜಿ ಹಾಕಲು ನನಗೆ ಪಾಸ್ ಪೋರ್ಟ್ ಬೇಕಿದೆ, ಅಷ್ಟೇ’ ಎಂದು ಗಾಲಿಬ್ ಹೇಳಿದರು.
2001ರಲ್ಲಿ ನಡೆದಿದ್ದ ಭಾರತೀಯ ಪಾರ್ಲಿಮೆಂಟ್ ಮೇಲಿನ ದಾಳಿಯಲ್ಲಿ ವಹಿಸಿದ್ದ ಪಾತ್ರಕ್ಕಾಗಿ ಅಫ್ಜಲ್ ಗುರುವನ್ನು 2013ರಲ್ಲಿ ನೇಣಿಗೆ ಹಾಕಲಾಗಿತ್ತು. ಅಫ್ಜಲ್ ಗುರುವನ್ನು ನೇಣಿಗೆ ಹಾಕಲಾದಾಗ ಆತನ ಪುತ್ರ ಗಾಲಿಬ್ 12 ವರ್ಷದವನಾಗಿದ್ದ.