Advertisement

JDS ಅಸ್ತಿತ್ವವನ್ನು ಬಿಜೆಪಿ ಕಿತ್ತುಕೊಳ್ಳಲು ಹೇಗೆ ಸಾಧ್ಯ: ಡಿಸಿಎಂ ಡಿ.ಕೆ.ಶಿವಕುಮಾರ್

05:12 PM Aug 01, 2024 | Team Udayavani |

ಬೆಂಗಳೂರು: ‘ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಅವರ ಅಸ್ತಿತ್ವವನ್ನು ಕಿತ್ತುಕೊಳ್ಳಲು ಬಿಜೆಪಿಗೆ ಹೇಗೆ ಸಾಧ್ಯ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

Advertisement

ಬಿಜೆಪಿ ಪಾದಯಾತ್ರೆ ವಿಚಾರದಲ್ಲಿ ಮೈತ್ರಿಯಲ್ಲಿ ಅಪಸ್ವರ ಮೂಡಿರುವ ಬಗ್ಗೆ ಗುರುವಾರ ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಡಿಸಿಎಂ “ಕುಮಾರಸ್ವಾಮಿ ಆಗಲಿ, ನಾನಾಗಲಿ, ಬಿಜೆಪಿಯವರಾಗಲಿ ಎಲ್ಲರೂ ಅವರವರ ಪಕ್ಷದ ರಾಜಕಾರಣ ಮಾಡುತ್ತಾರೆ. ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಹಾಗೂ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೇನೆ. ಈ ವಿಚಾರಕ್ಕೇ ಮೈತ್ರಿಯಲ್ಲಿ ತಿಕ್ಕಾಟ ನಡೆಯುತ್ತಿರಬಹುದು” ಎಂದರು.

“ಬಿಜೆಪಿಯವರು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಸುಮಾರು 10 ಕ್ಷೇತ್ರಗಳನ್ನು ಗೆದ್ದಿದ್ದಾರೆ. ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಜೆಡಿಎಸ್ ನೆಲೆ ಇರುವ ಪ್ರದೇಶ. ಇಲ್ಲಿ ಬಿಜೆಪಿಯವರು ಜೆಡಿಎಸ್ ನವರನ್ನು ಪರಿಗಣಿಸದೇ ತಮಟೆ ಬಾರಿಸಿಕೊಂಡು ನಾಯಕತ್ವ ಅಪಹರಿಸಲು ಹೋದರೆ ಅದನ್ನು ಸಹಿಸಿಕೊಳ್ಳಲು ಜೆಡಿಎಸ್ ಗೆ ಸಾಧ್ಯವೇ? ಜೆಡಿಎಸ್ ಹಾಗೂ ಬಿಜೆಪಿ ವಿಲೀನವಾಗುವುದಾದರೆ ಈ ರೀತಿ ಮಾಡಬಹುದು” ಎಂದರು.

ಪಾದಯಾತ್ರೆಗೆ ತಿರುಗೇಟು ನೀಡಲು ಸಿದ್ಧತೆ

ಪೆನ್ ಡ್ರೈವ್ ವಿಚಾರವಾಗಿ ನಿಮ್ಮ ಮೇಲೆ ಆರೋಪ ಮಾಡಿದ್ದ ಕುಮಾರಸ್ವಾಮಿ ಅವರು ಈಗ ಪ್ರೀತಂಗೌಡ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, “ಈಗ ಆ ವಿಚಾರ ಬೇಡ, ಆಮೇಲೆ ಮಾತನಾಡೋಣ. ಈಗ ಪಾದಯಾತ್ರೆ ಬಗ್ಗೆ ಚರ್ಚೆ ಮಾಡೋಣ. ನಾವು ಅವರ ಪಾದಯಾತ್ರೆಗೆ ತಿರುಗೇಟು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಿಜೆಪಿ ಸರಕಾರದ ಕಾಲದ 30 ಹಗರಣಗಳಿವೆ. ದಿನಾ ಒಂದೊಂದು ಹಗರಣ ಬಿಚ್ಚಿಡುತ್ತೇವೆ. ಅವರ ಪಾದಯಾತ್ರೆ ಅಂತಿಮ ರೂಪುರೇಷೆ ಬಂದರೆ ನಾವು ನಮ್ಮ ಕಾರ್ಯಸೂಚಿ ತೀರ್ಮಾನ ಮಾಡುತ್ತೇವೆ” ಎಂದರು.

Advertisement

ಕೇಂದ್ರ ಸರ್ಕಾರ ರಾಜಭವನದ ಮೂಲಕ ರಾಜ್ಯ ಸರ್ಕಾರ ಕೆಡವಲು ಪ್ರಯತ್ನಿಸುತ್ತಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ “ಸಚಿವ ಸಂಪುಟ ಸಭೆ ಬಳಿಕ ನಾನು ಬಂದು ವಿವರಣೆ ನೀಡುತ್ತೇನೆ. ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಿದೆ” ಎಂದರು.

ಬೆಂಗಳೂರು ಅಭಿವೃದ್ಧಿ ಬಗ್ಗೆ ಪ್ರಧಾನಮಂತ್ರಿಗಳ ಜತೆ ಚರ್ಚೆ
“ಬೆಂಗಳೂರು ಬಹಳ ಪ್ರಮುಖವಾದ ನಗರ. ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಆದಾಯ ನೀಡುತ್ತಿರುವ ನಗರ. ವಿಶ್ವದ ನಾಯಕರು ಹಾಗೂ ವಿಶ್ವದ ಹೂಡಿಕೆದಾರರು ಬೆಂಗಳೂರಿನ ಮೇಲೆ ಆಸಕ್ತಿ ಹೊಂದಿದ್ದಾರೆ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಬೆಂಗಳೂರು ಅಭಿವೃದ್ಧಿಗೆ ಅನೇಕ ಮೂಲಭೂತ ಸೌಕರ್ಯ ಯೋಜನೆಗಳನ್ನು ನೀಡಲಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ, ವಿಮಾನ ನಿಲ್ದಾಣ ಮೇಲ್ಸೇತುವೆ, ನೆಲಮಂಗಲ ಮೇಲ್ಸೆತುವೆ ಯೋಜನೆಗಳನ್ನು ನೀಡಲಾಗಿತ್ತು. ಈಗ ಜನಸಂಖ್ಯೆ ಹೆಚ್ಚಾಗಿರುವ ಕಾರಣ ವರ್ತುಲ ರಸ್ತೆಗೆ ಮಿಲಿಟರಿ ಭೂಮಿ ಬೇಕಾಗಿದೆ. ಅದನ್ನು ದೊರಕಿಸಿಕೊಡುವಂತೆ ಮನವಿ ಮಾಡಿದ್ದೇವೆ. ಈ ವಿಚಾರವಾಗಿ ರಕ್ಷಣಾ ಸಚಿವರು, ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿದ್ದೇವೆ. ಸುರಂಗ ರಸ್ತೆ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಇದರ ಜತೆಗೆ ಈ ಹಿಂದೆ ಬಜೆಟ್ ನಲ್ಲಿ ಘೋಷಣೆಯಾಗಿರುವ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದೇವೆ. ನಮ್ಮ ಮನವಿ ಪರಿಶೀಲಿಸುವುದಾಗಿ ಪ್ರಧಾನಿಯವರು ಭರವಸೆ ನೀಡಿದ್ದಾರೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next