Advertisement

ಎಷ್ಟು ದೊಡ್ಡ ಗಂಟೆ!

06:00 AM Apr 26, 2018 | |

ನಮ್ಮ ಶಾಲೆಗಳಲ್ಲಿ ತರಗತಿಗಳು ಮುಗಿದಾಗ ಬೆಲ್‌ ಹೊಡೆಯುತ್ತಾರೆ. ಆ ಬೆಲ್‌ನ ನಿರೀಕ್ಷೆಯಲ್ಲಿರುತ್ತಿದ್ದ ವಿದ್ಯಾರ್ಥಿಗಳೆಲ್ಲರೂ ಸಂತಸದಿಂದ ಮನೆಗೋಡಲು ಸಿದ್ಧರಾಗುತ್ತಾರೆ. ಶಾಲೆಯ ಬೆಲ್‌ ಸದ್ದು ಕೇಳಲು ಎಲ್ಲರಿಗೂ ಖುಷಿಯೋ ಖುಷಿ, ಏಕೆಂದರೆ ಶಾಲೆ ಮುಗಿಯಿತೆಂದು ಸಾರುವುದರಿಂದ ಆ ಬೆಲ್‌ಅನ್ನು ಇಷ್ಟಪಡದೇ ಇರುವವರು ಇರಲಿಕ್ಕಿಲ್ಲ. ಪುಟ್ಟ ಗಾತ್ರದ ಬೆಲ್‌ ಬಿಡಿ, ಇಲ್ಲಿದೆ ಗಜಗಾತ್ರದ ಗಂಟೆ!

Advertisement

ಎಲ್ಲಿದೆ ಬೃಹತ್‌ ಗಂಟೆ?
ಚೀನಾದ ರಾಜಧಾನಿ ಬೀಜಿಂಗ್‌ಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿರುವ ದೈತ್ಯ ಗಂಟೆಯ ದರ್ಶನ ಪಡೆಯಬಹುದು. ಇಂದಿನ ಪಿನ್ಯಿನ್‌ (ಹಿಂದಿನ ದಾಜೋಂಗ್‌) ನಗರದಲ್ಲಿರುವ ಬೌದ್ಧರ ಜುಯೆಶೆಂಗ್‌ ದೇವಾಲಯದಲ್ಲಿರುವ ಬೃಹತ್‌ ಗಂಟೆಯಿಂದಾಗಿ ಆ ದೇವಾಲಯಕ್ಕೆ “ಯಂಗ್ಲ್ ಬಿಗ್‌ಬೆಲ್‌’ ಎಂಬ ಹೆಸರೇ ಬಂದಿದೆ. ದೇವಾಲಯದ ಮುಖದ್ವಾರದಲ್ಲಿರುವ ಗೋಪುರದಲ್ಲಿ ತೂಗಾಡುತ್ತಿದೆ ಈ ಗಂಟೆ. ಈ ಗಂಟೆ ಕಂಚಿನಿಂದ ತಯಾರಿಸಲ್ಪಟ್ಟಿದೆ. 

ಅಳತೆ ಹಿಡಿದು ನೋಡಿದಾಗ…
ಗಂಟೆ 6. 94 ಮೀಟರ್‌ ಎತ್ತರವಾಗಿದೆ. 3. 3 ಮೀಟರ್‌ ವ್ಯಾಸವಿದೆ. ಸುಮಾರು 46 ಟನ್‌ ಭಾರವಿರುವ ಅದರ ತುಟಿ 18. 6 ಸೆ. ಮೀ. ದಪ್ಪವಿದೆ. ಗಂಟೆಯ ಒಳ ಹೊರಭಾಗಗಳಲ್ಲಿ ಚೀನೀ ಧರ್ಮಗ್ರಂಥಗಳ ಬೋಧನೆಗಳನ್ನು 2. 27 ಲಕ್ಷ ಅಕ್ಷರಗಳಲ್ಲಿ ಕೆತ್ತಲಾಗಿದೆ. ಚೀನಾವನ್ನು ಕ್ರಿ. ಶ. 1644ರಿಂದ 1911ರ ತನಕ ಸತತವಾಗಿ ಆಳಿದ್ದು ಕ್ವಿಂಗ್‌ ರಾಜವಂಶದ ಅರಸರು. ಈ ವಂಶದವನಾದ ಚಕ್ರವರ್ತಿ ಯೊಂಗ್‌ಝಂಗ್‌ ನಿರ್ಮಿಸಿದ ಗಂಟೆ ಇದು. 

ಸದ್ದಿನ ಶಕ್ತಿ
ಇದರಿಂದ ಹೊಮ್ಮುವ ಉಲ್ಲಾಸಭರಿತವಾದ ನಾದ ಇಂಪಾಗಿದ್ದು ಅದರ ಆವರ್ತನ 22ರಿಂದ 800 ಹಟ್ಜ್ì ವರೆಗೆ ಇದೆ ಎಂದು ತಜ್ಞರು ಗುರುತಿಸಿದ್ದಾರೆ. 120 ಡೆಸಿಬಲ್‌ ಪ್ರಮಾಣದಲ್ಲಿರುವ ಗಂಟೆಯ ಧ್ವನಿ 15 ಕಿಲೋಮೀಟರ್‌ ದೂರದ ವರೆಗೆ ಕೇಳಿಸುತ್ತದೆ. ವಿಶೇಷ ದಿನಗಳಲ್ಲಿ ದೇವಾಲಯದ ಸಂಗ್ರಹಾಲಯದಲ್ಲಿರುವ 400 ದೊಡ್ಡ ಮತ್ತು ಸಣ್ಣ ಗಂಟೆಗಳನ್ನು ಇದರೊಂದಿಗೆ ಬಾರಿಸಿದಾಗ 45ರಿಂದ 50 ಕಿಲೋಮೀಟರ್‌ ದೂರದಲ್ಲಿ ಸದ್ದು ಪ್ರತಿಧ್ವನಿಸುತ್ತದಂತೆ.

ಹೊಸ ವರ್ಷದ ವಿಶೇಷ
ಹೊಸವರ್ಷದ ಮೊದಲ ದಿನ ಈ ದೈತ್ಯ ಗಂಟೆಯನ್ನು 108 ಸಲ ಬಾರಿಸುತ್ತಾರೆ. ಮನುಷ್ಯನನ್ನು ಕಾಡುವ ಚಿಂತೆಗಳ ಸಂಖ್ಯೆ ನೂರೆಂಟು ಇದ್ದು ಅದೆಲ್ಲವೂ ಈ ಗಂಟಾನಾದದಿಂದ ದೂರ ಓಡುತ್ತವೆ ಎಂಬ ನಂಬಿಕೆ ಚೀನೀಯರದು.    ದೈತ್ಯ ಗಂಟೆ ತುಂಬ ಕೌಶಲದಿಂದ ತಯಾರಾಗಿದೆ. ಅದು ಪ್ರಾಚೀನ ಗಂಟೆಗಳ ರಾಜ ಎನ್ನಲು ಚೀನೀಯರು ಹೆಮ್ಮೆಪಡುತ್ತಾರೆ. ತಯಾರಾದ ಹತ್ತು ವರ್ಷಗಳ ಕಾಲ ಈ ಬೃಹತ್‌ ಗಂಟೆ ದೇವಾಲಯದ ಹೊರಭಾಗದಲ್ಲಿ ಇತ್ತು. ಚಕ್ರವರ್ತಿ ಚೆಂಗ್‌ ಝ ಎಂಬಾತ ಅದಕ್ಕಾಗಿ ಗೋಪುರ ನಿರ್ಮಿಸಿ ಮರದ ಬೃಹತ್‌ ಗಾತ್ರದ ತೊಲೆಗಳಿಗೆ ಹಗ್ಗದ ಮೂಲಕ ಗಂಟೆಯನ್ನು ತೂಗಾಡಿಸಿದ.

Advertisement

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next