Advertisement

ಹೇಗಿದ್ದೀಯಾ ಶರಾವತಿ?  

06:00 AM Apr 09, 2018 | |

ಶರಾವತಿ ನದಿ ಮೂಲದ ಅಂಬುತೀರ್ಥದಲ್ಲಿ ಬಹು ದೊಡ್ಡ ಹಸಿರು ಹತ್ಯಾಕಾಂಡವನ್ನು ಸರಕಾರವೇ ಮಾಡಿಸಿದೆ. ದೇಶಿ ಸಸ್ಯಗಳ ನೆಡುತೋಪಿನ ಆರ್ಭಟಕ್ಕೆ ಶರಾವತಮ್ಮನ ತವರಿನ ಸಸ್ಯ ಸಂಕುಲ ನಾಶವಾಗಿ ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕ ಮೂಲದ ಸಸ್ಯ ನೆಡುತೋಪು ಹೆಚ್ಚಿವೆ. ಮೂರ್ಖರ ಆಡಳಿತದಲ್ಲಿ ನದಿ ಮೂಲದ ಪಶ್ಚಿಮ ಘಟ್ಟದ ಕಾಡೇ ಬುಡಮೇಲಾಗಿದೆ.

Advertisement

ಪಶ್ಚಿಮ ಘಟ್ಟದ ನದಿ ಮೂಲದ ನೆಲೆಯನ್ನು  ಅರ್ಥ ಮಾಡಿಕೊಳ್ಳಲು ಮರಗಳ ಜೊತೆ ಮಾತಾಡಬೇಕು, ಕಾಡೊಳಗೆ ಸುಳಿದಾಡಬೇಕು. ಮರದಡಿಯ ತರಗೆಲೆಯ ಮೇಲೆ ನಿಧಾನಕ್ಕೆ ಬರಿಗಾಲಲ್ಲಿ ಅಡ್ಡಾಡಬೇಕು. ಆಗ ಸಣ್ಣೆಲೆಯ ಕರಿಕುಂಚಿನ ಮೃದುತ್ವ, ದಾಲಿcನ್ನಿಯ ಪರಿಮಳ ಅನುಭವಿಸಬಹುದು. 

ಶರಾವತಿ ನದಿಯ ಮೂಲ ಅಂಬುತೀರ್ಥ. ಇದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿದೆ. ವನವಾಸದ ಸಂದರ್ಭದಲ್ಲಿ ಶ್ರೀರಾಮ ಲಕ್ಷ್ಮಣರು ಸೀತೆಯನ್ನು ಹುಡುಕುತ್ತ ಹೊರಟಾಗ ಮಧ್ಯಾಹ್ನವಾಯಿತು. ಅಂದು ಅಘÂì ಸಲ್ಲಿಸಲು ಶ್ರೀರಾಮನಿಗೆ ನೀರು ಸಿಗಲಿಲ್ಲವಂತೆ. ಆಗ ಬಾಣವೊಂದನ್ನು ನೆಲಕ್ಕೆ ಬಿಟ್ಟ. ಅದು ನೆಲಕ್ಕೆ ನಾಟಿದ ಸ್ಥಳದಲ್ಲಿ ನೀರು ಬುಗ್ಗೆಯಾಗಿ ಚಿಮ್ಮಿತು. ಆ ಸ್ಥಳ ಅಂಬು(ಬಾಣ) ತೀರ್ಥವೆಂದು ಹೆಸರಾಯಿತು. ಶರಾವತಿ ನದಿ ಜನ್ಮ ತಳೆದ ಈ ಕಥೆ ಸಹ್ಯಾದ್ರಿ ಖಂಡದಲ್ಲಿದೆ. ಸೀತೆಯ ಬಾಯಾರಿಕೆ ಪರಿಹರಿಸಲು ರಾಮ ಬಿಟ್ಟ ಬಾಣದಿಂದ ನೀರು ಚಿಮ್ಮಿತೆಂಬ ಇನ್ನೊಂದು ಕಥೆಯೂ ಇದೆ. ನದಿ ಜನಿಸುವಲ್ಲಿ ಶ್ರೀರಾಮೇಶ್ವರ ದೇಗುಲ, ಅದರ ಪಕ್ಕದಲ್ಲಿ ಪುಟ್ಟ ಕೆರೆಯಿದೆ. ಪವಿತ್ರ ನೆಲೆಯಾಗಿ ಸ್ಥಳ ಜನರನ್ನು ಸೆಳೆಯುತ್ತಿದೆ.

ನದಿ ಜನನ ಮೂಲದ ಪ್ರಾಕೃತಿಕ ಶಕ್ತಿ ಗುರುತಿಸಿ ಆರಾಧಿಸುವುದು ಪರಂಪರೆಯಾಗಿದೆ. ಕಾಡೇ ನದಿಗಳ ತಾಯಿಯೆಂಬ ಎಚ್ಚರದಲ್ಲಿ ಇಲ್ಲಿನ ಅರಣ್ಯ ಕುರಿತ ಕತೆಗಳನ್ನು ಓದಬೇಕು. ಒಂದು ಕಾಲದಲ್ಲಿ ನೂರಾರು ಅಡಿಯೆತ್ತರದ ಮರಗಳು, ಗಿಡ, ಬಳ್ಳಿ, ಪೊದೆ, ಹುಲ್ಲುಗಳೆಲ್ಲ ಸೇರಿ, ಮಳೆ ನೀರು ಹಿಡಿದು ಇಲ್ಲಿ ತೊರೆ ಜೀವ ತಳೆದಿದೆ. ಪಶ್ಚಿಮ ಘಟ್ಟದ ನದಿ ಮೂಲದ ನೆಲೆಯನ್ನು  ಅರ್ಥ ಮಾಡಿಕೊಳ್ಳಲು ಮರಗಳ ಜೊತೆ ಮಾತಾಡಬೇಕು, ಕಾಡೊಳಗೆ ಸುಳಿದಾಡಬೇಕು. ಮರದಡಿಯ ತರಗೆಲೆಯ ಮೇಲೆ ನಿಧಾನಕ್ಕೆ ಬರಿಗಾಲಲ್ಲಿ ಅಡ್ಡಾಡಬೇಕು. ಆಗ ಸಣ್ಣೆಲೆಯ ಕರಿಕುಂಚಿನ ಮೃದುತ್ವ, ದಾಲಿcನ್ನಿಯ ಪರಿಮಳ ಅನುಭವಿಸಬಹುದು. ಕಾನ್‌ಗೌರಿ, ಸಳ್ಳೆ, ಹಾದರಗಿತ್ತಿ, ಗರುಡಫ‌ಲ, ಹೊಳೆಗೇರು, ಗುಳಮಾವು, ಹೆಬ್ಬಲಸು, ಬಕುಲ, ಹಣ್ಣುಸಂಪಿಗೆ  ಮರಗಳ ಒಣಎಲೆ ಗುಣ ವ್ಯತ್ಯಾಸ ನೋಡಬಹುದು. ಮರದಡಿಯ ಮೆತ್ತನೆಯ ಹಾಸಿಗೆಯಾಗುವ ಎಲೆಗಳು ಮಳೆ ನೀರು ಹಿಡಿಯುವ “ಹ್ಯೂಮಸ್‌’ ಪಾತ್ರೆಯಾಗುತ್ತವೆ. ಮಲೆನಾಡಿನ ಹಳ್ಳಿಗಳಲ್ಲಿ ದೊಡ್ಡಿಗೆ ತೆರಕು (ದರಗು) ಹಾಕಲಾಗುತ್ತದೆ. ನಿತ್ಯಹರಿದ್ವರ್ಣ ಕಾಡಿನ ವೃಕ್ಷಗಳ ತೆರಕನ್ನು ದೊಡ್ಡಿಗೆ ಹಾಸಿದರೆ ವಾತಾವರಣವೇ ತಂಪು ತಂಪೆನಿಸುತ್ತದೆ. ಎಲೆ ಉದುರಿಸುವ ಅರಣ್ಯದ ಮತ್ತಿ, ಕವಲು, ಹುನಾಲು, ಗೇರು, ನಂದಿ, ಅಣಲೆ ಮುಂತಾದ ಮರಗಳ ತೆರಕು ಹಾಸಿದರೆ ಉಷ್ಣತೆಯ ಅನುಭವ ದೊರೆಯುತ್ತದೆ. 

ಕಾನ್‌ದೆರಕು ಹಾಗೂ ಬೆಟ್ಟದ ತೆರಕು ಎರಡೂ ಒಣ ಎಲೆಯಾದರೂ ಗುಣದಲ್ಲಿ ಅಪಾರ ವ್ಯತ್ಯಾಸವಿದೆ. ಹೀಗಾಗಿ ನದಿ ಮೂಲದ ನಿತ್ಯಹರಿದ್ವರ್ಣ ಕಾನನ ಮಣ್ಣಿಗೆ ನೀರು ಹಿಡಿಯುವ ತಾಕತ್ತು ಹೆಚ್ಚಿಸಲು ವಿಶೇಷ ಕೊಡುಗೆ ನೀಡುತ್ತದೆ. ಮಳೆಗಾಲದಲ್ಲಿ ಮೈಗಾತ್ರ ಹಿಗ್ಗಿಸಿಕೊಂಡು ಬೇಸಿಗೆಯಲ್ಲಿ ಸಣಕಲಾಗುವ ಶಿವನೆ, ಸೀಗೆ, ಕಾಡು ಮಲ್ಲಿಗೆ, ಗೆಣಸು, ಕುಮಸಲು, ಅಂಕೋಲೆ, ಕಾಡು ಸುವರ್ಣಗಡ್ಡೆ, ಶತಾವರಿ, ಎಕನಾಯಕ, ಬೆತ್ತ, ಕಾನಕಲ್ಲಟೆ, ಆಚಾರಿ ಬಳ್ಳಿ, ಗಣಪೆ ಬಳ್ಳಿಗಳಿವೆ. ಇವು ಭೂಗತಕ್ಕೆ ನೀರಿಳಿಸುವ ಸೋಸುರಂದ್ರ ರೂಪಿಸಿ ಮಾನವ ಲೋಕಕ್ಕೆ ಅರಿಲ್ಲದ ಜಲ ಕಾಯಕವನ್ನು ಜೀವನಪರ್ಯಂತ ಮಾಡುತ್ತವೆ. ನೀರಿನ ಜೊತೆ ನಿಲ್ಲುವ ನೀರತ್ತಿ, ನೀರಂಜಿ, ನೀರ ಕಣಗಿಲು, ನೀರವಾಟೆ, ಮುಂಡಿಗೆ, ಬನಾಟೆ, ವಾಟೆ ಬಿದಿರು, ಸುರಹೊನ್ನೆಗಳೆಲ್ಲ ನದಿ ನೆಲೆಯ ಕಾವಲುಗಾರರು. ನಿಸರ್ಗ ನಿರ್ಮಿಸಿದ ನಿಯತ್ತಿನ ಈ ಹಸಿರು ನೌಕರರನ್ನು ನಾವು ಹೇಳದೇ ಕೇಳದೇ ಕಿತ್ತೆಸೆದರೆ ಏನಾಗುತ್ತದೆ?  ಶರಾವತಿ ನದಿ ಮೂಲದ ಅಂಬುತೀರ್ಥದ ಪರಿಸರದಲ್ಲಿ ಇಂಥ ಅಲ್ಲೋಲ ಕಲ್ಲೋಲ ನಡೆದಿದೆ. 

Advertisement

ನಮ್ಮ ದನ ಕಾಯುವವರು, ಕೃಷಿಕರು, ಜೇನು ಕೀಳುವವರು, ಕಾಡು ಹಣ್ಣುಗಳನ್ನು ತಿಂದ ಮಕ್ಕಳು, ಮೂಲಿಕಾ ವೈದ್ಯರು, ಬೇಟೆಗಾರರು, ವನವಾಸಿಗೆ ಕಾಡು ಓದುವ ನಿಜವಾದ ಕಣ್ಣಿದೆ. ಮೇಲ್ನೋಟಕ್ಕೆ ಚಾಟರಿಬಿಲ್ಲು ಹಿಡಿದು ಹಕ್ಕಿಗೆ ಗುರಿಯಿಡುವ ಹುಡುಗನಿಗೆ ಹಣ್ಣಿನ ಮರಗಳಿರುವ ನೆಲೆ ಗೊತ್ತಿರುತ್ತದೆ. ಅಲ್ಲಿ ಪಕ್ಷಿಗಳ ಇರುವಿಕೆಯ ಅರಿವಿದೆ. ವರ್ಷವಿಡೀ ಗುಡ್ಡಬೆಟ್ಟ ಸುತ್ತಾಡಿ ದನ ಮೇಯಿಸುವ ಅಜ್ಜನಿಗೆ ಕಾಲಕ್ಕೆ ತಕ್ಕಂತೆ ಮೇವು ದೊರಕುವ ಜಾಗ ತಿಳಿದಿದೆ. ನಡುರಾತ್ರಿ ನರಳಾಡುವ ರೋಗಿಗೆ ಮದ್ದು ನೀಡಲು ಮಿಣಿಮಿಣಿ ದೀಪ ಹಿಡಿದು ಕಾಡಿಗೆ ನುಸುಳುವ ಹಳ್ಳಿ ವೈದ್ಯರಿಗೆ ಸಾವಿರಾರು ಸಸ್ಯಗಳ ನಡುವೆ ಔಷಧ ಮೂಲಿಕೆ ಯಾವುದೆಂದು ನಿಖರವಾಗಿ ಗೊತ್ತು. ಬೇಲಿ ಗೂಟ ತಗುಲಿ ಆದ ಗಾಯದ ಮದ್ದಿಗೆ ಯಾವ ಗಿಡ? ಭತ್ತದ ಕೊಳೆ ರೋಗಕ್ಕೆ ಯಾವ ಸೊಪ್ಪು? ಏಡಿ ನಿಯಂತ್ರಣಕ್ಕೆ ಯಾವ ಎಲೆ ಬಳಸುವುದೆಂದು ಕೃಷಿಕರಿಗೆ ಪರಂಪರೆ ಕಲಿಸಿದೆ. ನಿರಂತರ ಒಡನಾಟದ ಮೂಲಕ ಕಾಡು ಜೀವ ನಂಬಿಕೆಯ ನೆಲೆಯಾಗಿದೆ. ಆದರೆ ಅರಣ್ಯಾಧಾರಿತ ಕೈಗಾರಿಕೆಗಳ ಕಣ್ಣು ಕಾಡಿನ ಮೇಲೆ ಬಿದ್ದ ಬಳಿಕ ಮರ ಸರಕಾರದ ಆದಾಯದ ಮೂಲವಾಗಿದೆ. ಕಾಡು ಮರ ಕಡಿದು ಕ್ರಿ. ಶ. 1948ರ ಕಾಲಕ್ಕೆ ಕೈಗಾರಿಕೆಗೆ ಸರಬರಾಜಾಗುವುದಕ್ಕಿಂತ ಮುಂಚೆ ಕಾಡಲ್ಲಿ ರಸ್ತೆಗಳಿಲ್ಲ. ಕಾಲುದಾರಿಯಲ್ಲಿ ಬದುಕಿದ್ದ ಊರುಗಳು ಅಂದು ನಾಟಾ ಲಾರಿ ಕಂಡು ಬೆರಗಾದವು. ಕೊಳ್ಳವೋ, ನದಿ ಮೂಲವೋ ಸೂಕ್ಷ್ಮತೆ ಗಮನಿಸದೇ ಮರ ದೋಚುವ ಕೆಲಸ ನಡೆಯಿತು. ನಾಟಾ ಲಾರಿಯ ರಸ್ತೆಗಳೇ ಮುಂದೆ ಗ್ರಾಮೀಣ ರಸ್ತೆಗಳಾದವು!  ಹಳ್ಳಿಗಳಲ್ಲಿಯೂ ರಸ್ತೆ, ಆಸ್ಪತ್ರೆ, ಶಾಲೆಗಳು ಆರಂಭವಾಗಿ ಜನಸಂಖ್ಯೆ ಹೆಚ್ಚಿತು. ನೈಸರ್ಗಿಕ ಸಂಪತ್ತಿನ ಮೇಲೆ ಒತ್ತಡ ಹೆಚ್ಚುತ್ತ ಬೆಟ್ಟ ಬೋಳಾಯಿತು. 

ನಾವು ಶರಾವತಿ ನದಿ ಮೂಲದ ಅಂಬುತೀರ್ಥದಿಂದ ಕೇವಲ ಎರಡು ಕಿಲೋ ಮೀಟರ್‌ ಸುತ್ತಳತೆಯ ಅರಣ್ಯ ಭೂಮಿ ಸುತ್ತಾಡಬೇಕು. ನೀಲಗಿರಿ, ಅಕೇಶಿಯಾ, ಫೈನಸ್‌ ನೆಡುತೋಪುಗಳು ಎಲ್ಲೆಂದರಲ್ಲಿ ನೋಡಬಹುದು. ಮೂಲ ನೆಲದಲ್ಲಿ ಏನಿತ್ತೆಂದು ಗಮನಿಸಿದೇ ಬುಲ್ಡೋಜರ್‌, ರಿಪ್ಪಿಂಗ್‌ ಯಂತ್ರದಲ್ಲಿ ಉಳುಮೆ ಮಾಡಿಸಿ ಸಾಲಿನಲ್ಲಿ ಸಸಿ ಬೆಳೆಸುವ ಕಾಯಕ 35 ವರ್ಷಗಳಿಂದ ನಡೆದಿದೆ. ಕಾಲೇಜಿನಲ್ಲಿ ಕಾಡಿನ ಬಗ್ಗೆ ಓದಿಕೊಂಡ ಅಧಿಕಾರಿಗಳು ಅರಣ್ಯವನ್ನು ಆದಾಯದ ಮೂಲವಾಗಿ ನೋಡಿದ್ದಾರೆ. ಹುಲ್ಲು, ಬಳ್ಳಿ, ಮುಳ್ಳುಕಂಟಿ, ಔಷಧ ಸಸ್ಯ, ಹೆಮ್ಮರಗಳನ್ನು ಹೊಸಕಿ ವಿದೇಶಿ ಸಸ್ಯ ಸಾಮ್ರಾಜ್ಯ ಬೆಳೆದಿದೆ. ಅಬ್ಬರದ ಮಳೆಯಲ್ಲಿ ಮಣ್ಣು ಕೊಚ್ಚಿ ಹೋಗಿ ನದಿ, ಕೆರೆ ಪಾತ್ರಗಳಲ್ಲಿ ಭರ್ತಿಯಾಗಿದೆ. ಅವತ್ತು ರಾಮನ ಬಾಣಕ್ಕೆ ನೀರು ಚಿಮ್ಮಿದ ಆಸುಪಾಸಿನ ಹಳ್ಳಿಗಳಲ್ಲಿ ಈಗ ಸಾವಿರಾರು ಅಡಿ ಆಳದ ಕೊಳವೆ ಬಾವಿಗೂ ನೀರಿಲ್ಲದ ದುಸ್ಥಿತಿಯಿದೆ.

ಅಕೇಶಿಯಾ ನೆಡುತೋಪಿನ ಕೆಳಗಡೆ ಓಡಾಡಿದರೆ ಮಣ್ಣಿಗೆ ಕರಗದ ತೊಟ್ಟೆಲೆಗಳು ಪ್ಲಾಸ್ಟಿಕ್‌ ಹಾಸಿನಂತೆ ಕಾಣುತ್ತಿವೆ. ಉತ್ಕೃಷ್ಠ ಗುಣಮಟ್ಟದ ಕಾಗದ ತಯಾರಿಗೆಂದು  ಸಾವಿರಾರು ಎಕರೆಗಳಲ್ಲಿ “ಫೈನಸ್‌’ ನಾಟಿಯಾಗಿದೆ. ಮೂಲತಃ ಹಿಮಾಲಯದ ಸೂಚಿಪರ್ಣ ಸಸ್ಯವಿದು. ನೋಟಿನ ಗಿಡವೆಂದು ಪರಿಚಿತವಾದ ಇದನ್ನು ಯಾವ ಮೂರ್ಖ ಅಧಿಕಾರಿ ಉಷ್ಣ ವಲಯದ ಪಶ್ಚಿಮಘಟ್ಟದಲ್ಲಿ ಬೆಳೆಸಿದರೋ ಗೊತ್ತಿಲ್ಲ. ಮರವು ಸರಿಯಾಗಿ ಬೆಳೆದಿಲ್ಲ. ಈಗ ಇದನ್ನು ಕಾಗದ ಕಾರ್ಖಾನೆಗಳು ಖರೀದಿಸುತ್ತಿಲ್ಲ. ಫೈನಸ್‌ ನೆಡುತೋಪಿನ ಮರದಡಿ ಓಡಾಡಿದರೆ ಕಾರವಾರದ ಸಮುದ್ರದ ಮರಳು ನೆಲದಲ್ಲಿ ಓಡಾಡಿದಂತಾಗುತ್ತದೆ. ನೂರಾರು ಅಡಿ ಎತ್ತರದ ಮರದಿಂದ ಬಿದ್ದ ಮಳೆ ಹನಿಯ ಪ್ರಹಾರಕ್ಕೆ ಮಣ್ಣು ಬಸಿದು ಹೋಗಿ ಮರದಡಿ ಮರಳಿನ ದಿಬ್ಬ ರಚನೆಯಾಗಿದೆ. ಒಂದು ಸಸ್ಯವನ್ನು ವ್ಯಾಪಕವಾಗಿ ಬೆಳೆಸಿದರೆ ಏನಾಗುತ್ತೆಂದು ಇಲ್ಲಿ ತಿಳಿಯುತ್ತದೆ. ಕರಾವಳಿ ತೀರಗಳಲ್ಲಿ ಗಾಳಿ ತಡೆಗೆಂದು ಆಸ್ಟ್ರೇಲಿಯನ್‌ ಮೂಲದ ಗಾಳಿ (ಕ್ಯಾಸುರಿನಾ) ತರಲಾಗಿತ್ತು. ಈ ಸಸ್ಯ ತೀರ್ಥಹಳ್ಳಿಯಲ್ಲಿ ನೆಡುತೋಪಾಗಿದೆ. ಕಡಿದು ಮಾರುವ ನೆಡುತೋಪಿನ ನೆಲೆಯಾಗಿ ಪರಿಸರವೇ ಆಸ್ಟ್ರೇಲಿಯಾ, ದಕ್ಷಿಣ ಅಮೇರಿಕಾ ಸಸ್ಯಗಳ ಬೀಡಾಗಿದೆ. ಕೃಷಿಕರಿಗೆ, ವನವಾಸಿಗರಿಗೆಲ್ಲ ಬದುಕು ನೀಡಿದ ದೇಸೀ ಕಾಡು ಪರಕೀಯವಾಗಿದೆ. 

ಕ್ರಿ. ಶ. 1919 ಎಪ್ರಿಲ್‌ 13 ರಂದು ಜಲಿಯನ್‌ ವಾಲಾಬಾಗ್‌ದಲ್ಲಿ ಬ್ರಿಟಿಷರು ನಡೆಸಿದ ಮುಗ್ಧ ನಾಗರಿಕರ ಹತ್ಯೆಯಂತೆ ಮಲೆನಾಡಿನ ನದಿ ಮೂಲದಲ್ಲಿ ನಡೆದ ಹಸಿರು ಹತ್ಯಾಕಾಂಡವಿದು. ಶಿವಮೊಗ್ಗ, ಸಾಗರ, ಭದ್ರಾವತಿ, ಕೊಪ್ಪ, ಚಿಕ್ಕಮಗಳೂರು ಅರಣ್ಯ ಭಾಗಗಳ 65,000 ಎಕರೆ ಪ್ರದೇಶ ಮೈಸೂರು ಪೇಪರ್‌ ಮಿಲ್ಸ್‌ ( ಎಂಪಿಎಂ) ನೇತೃತ್ವದಲ್ಲಿ ದೇಶಿ ಸಸ್ಯಗಳ ಪಾಲಾಗಿದೆ. ಶರಾವತಿ ನದಿ ಮೂಲದಿಂದ 80 ಕಿಲೋಮೀಟರ್‌ ದೂರದ ಜೋಗ ಜಲಪಾತದ ಸೀಮೆಯಲ್ಲೂ ಇಂಥದೇ ನೆಡುತೋಪಿನ ಚಿತ್ರಗಳಿವೆ.  ಕಳೆದ 30-35 ವರ್ಷಗಳಿಂದ ಕರ್ನಾಟಕ ಅರಣ್ಯ ಇಲಾಖೆ ಅಕೇಶಿಯಾಕ್ಕೆ ನೇತು ಬಿದ್ದಿದೆ. ಕೀಟ, ಪಕ್ಷಿ, ಪ್ರಾಣಿಗಳಿಗೆ ಸಂಬಂಧವಿಲ್ಲದ ಪ್ಲಾಸ್ಟಿಕ್‌ ಮರಗಳಾಗಿ ಇವು ಕಾಣಿಸುತ್ತಿವೆ. ಆಳಕ್ಕೆ ಬೇರಿಳಿಸದ ಈ ಸಸ್ಯಗಳು ಹತ್ತಾರು ವರ್ಷಕ್ಕೆ ಕಡಿಯುವಂಥವು. ನೆಡುತ್ತ , ಕಡಿಯುತ್ತ, ಸುಡುತ್ತ, ಉಳುಮೆ ಮಾಡುವ ಆರ್ಭಟಕ್ಕೆ ಜಲ ಮೂಲಗಳು ಸೊರಗಿವೆ. 

ಶರಾವತಿ ನದಿ ಕಣಿವೆಯಲ್ಲಿ ಮೊಟ್ಟ ಮೊದಲ ನೆಡುತೋಪನ್ನು ಕ್ರಿ. ಶ. 1865ರಲ್ಲಿ ಕರ್ನಲ್‌ ಪ್ಯಾಟನ್‌ ಆರಂಭಿಸುತ್ತಾರೆ. ಗೇರುಸೊಪ್ಪಾದ ನಗರಬಸ್ತಿಕೇರಿಯ 40 ಎಕರೆಯಲ್ಲಿ 1084 ರೂಪಾಯಿ ವೆಚ್ಚದಲ್ಲಿ  ತೇಗ ನಾಟಿ ಮಾಡುತ್ತಾರೆ. ಕರ್ನಲ್‌ ಪ್ಯಾಟನ್‌ ನೆನಪಿನ ಮರ 13 ಅಡಿ ಸುತ್ತಳತೆಯ ಚಾರಿತ್ರಿಕ ಮರ ಈಗಲೂ ಇದೆ. 136 ಕಿ.ಮೀ ಉದ್ದದ ಶರಾವತಿ ನದಿ ರಾಜ್ಯದಲ್ಲಿ ಅತ್ಯಂತ ಚಿಕ್ಕದು. ಕ್ರಿ. ಶ. 1948ರಲ್ಲಿ ಮಡೇನೂರು ಅಣೆಕಟ್ಟೆಯ ಮೂಲಕ ವಿದ್ಯುತ್‌ ಉತ್ಪಾದನೆ ಆರಂಭಿಸಿದ ನದಿ ನಾಡಿಗೆಲ್ಲ ಚಿರಪರಿಚಿತವಾಗಿದೆ.

ಇಂದಿಗೂ ಲಿಂಗನಮಕ್ಕಿ ಜಲಾಶಯದಲ್ಲಿ ಮಳೆಗಾಲದಲ್ಲಿ ಎಷ್ಟು ನೀರಿದೆ ಎಂಬುದರ ಮೇಲೆ ಬೆಳಕಿನ ಭವಿಷ್ಯವಿದೆ. ಜೋಗ ಜಲಪಾತ ಜಗತ್ತಿನ ಗಮನ ಸೆಳೆದಿದೆ. ಎಲ್ಲದಕ್ಕೂ ನೀರೇ ಮೂಲವಾಗಿದೆ. ವಿದ್ಯುತ್‌ ಉತ್ಪಾದನಾ ಘಟಕ ಬೆಂಕಿ ಆಕಸ್ಮಿಕದಿಂದ ಸುಟ್ಟು ಹೋದಾಗ ಅತ್ಯಂತ ಕಡಿಮೆ ಸಮಯದಲ್ಲಿ ದುರಸ್ತಿ ಮಾಡಿದ್ದೇವೆಂದು ಇಂಧನ ಸಚಿವರು ಪತ್ರಿಕೆಗಳಲ್ಲಿ ಭರ್ಜರಿ ಜಾಹೀರಾತು ನೀಡಿದ್ದಾರೆ. ನೆಡುತೋಪಿನ ನಿರ್ಮಾಣದಿಂದ ವಿರೂಪಗೊಂಡ ನದಿ ಮೂಲ, ಕಣಿವೆಯನ್ನು ಹಸಿರಿನ ಹಳೆಯ ವೈಭವಕ್ಕೆ ಒಯ್ಯಲು ಎಂದಾದರೂ ಸಾಧ್ಯವೇ? ನದಿ ತಿರುವು ಯೋಜನೆಯ ಬಗ್ಗೆ ಮಾತು ಜೋರಾಗಿದೆ. ಅಪರೂಪದ ಮಳೆ ಕಾಡನ್ನು ನದಿ ಮೂಲದಲ್ಲಿ ಬುಡಮೇಲು ಮಾಡಿದ ಫ‌ಲವನ್ನು ನಾಡು ಅನುಭವಿಸುತ್ತಿದೆ. 
ಮುಂದಿನ ಭಾಗ- ಪ್ರವಾಹದ ಗೋಳು ಹಾಗೂ ನದಿಯ ಹೂಳು

– ಶಿವಾನಂದ ಕಳವೆ 

Advertisement

Udayavani is now on Telegram. Click here to join our channel and stay updated with the latest news.

Next