ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು 2036ರ ಒಲಿಂಪಿಕ್ಸ್ ನಡೆಸಲು ಭಾರತ ಬಿಡ್ ಹಾಕಲಿದೆ ಎಂದು ಘೋಷಿಸಿದ್ದರು. ಈಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕೂಟಗಳಲ್ಲಿ ಭಾರತದ ಸಾಧನೆ ಹೆಚ್ಚಾಗುತ್ತಿದ್ದು, ಹೀಗಾಗಿ ಇಲ್ಲೇ ಒಲಿಂಪಿಕ್ಸ್ ನಡೆಸುವ ಆಲೋಚನೆ ಸರಕಾರದ್ದು. ಹಾಗಾದರೆ ದೇಶಗಳು ಅಥವಾ ನಗರಗಳ ಆಯ್ಕೆ ಹೇಗೆ? ಈ ಕುರಿತ ಮಾಹಿತಿ ಇಲ್ಲಿದೆ.
ಆಯ್ಕೆ ಪ್ರಕ್ರಿಯೆ ಬದಲಾಗಿದೆಯೇ?
ಈಗ ಆಯ್ಕೆ ಪ್ರಕ್ರಿಯೆಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಬದಲಾವಣೆ, ಸಮರ್ಥ ಮತ್ತು ವೆಚ್ಚ ಪರಿಣಾಮಕತ್ವವನ್ನು ನೋಡಿಕೊಂಡು ಈ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಅಲ್ಲದೆ ಇದಕ್ಕೆ ಒಲಿಂಪಿಕ್ಸ್ ಕೂಟವು ಪ್ರದೇಶಗಳಿಗೆ ಹೊಂದಿಕೊಳ್ಳಬೇಕೇ ಹೊರತು, ಪ್ರದೇಶಗಳು ಒಲಿಂಪಿಕ್ಸ್‌ಗೆ ಹೊಂದಿಕೊಳ್ಳಬೇಕಾಗಿಲ್ಲ ಎಂಬ ಉದ್ದೇಶವನ್ನು ಸೇರಿಸಲಾಗಿದೆ.
ದೇಶಗಳ ಆಯ್ಕೆ ಹೇಗೆ?
ಮೊದಲಿಗೆ ಆಯಾ ದೇಶಗಳಲ್ಲಿನ ಒಲಿಂಪಿಕ್ಸ್ ಕಮಿಟಿಗಳು, ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕಮಿಟಿಗೆ ಒಲಿಂಪಿಕ್ಸ್ ನಡೆಸುವ ಉದ್ದೇಶವನ್ನು ಒಳಗೊಂಡ ಪತ್ರವನ್ನು ನೀಡಬೇಕು. ಇದೊಂದು ಬಹು ವರ್ಷಗಳ ಮತ್ತು ಬಹು ಹಂತಗಳ ಪ್ರಕ್ರಿಯೆ. ಬಿಡ್ಡಿಂಗ್ ಹಾಕುವ ದೇಶ ಅಥವಾ ನಗರಗಳಿಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕಮಿಟಿ ಸರಣಿ ಪ್ರಶ್ನೆಗಳನ್ನು ಕಳುಹಿಸುತ್ತದೆ. ಇದಕ್ಕೆ ಉತ್ತರ ಬಂದ ಬಳಿಕ ಫೈನಲ್ ಬಿಡ್‌ಗಾಗಿ ಮತಕ್ಕೆ ಹಾಕಲಾಗುತ್ತದೆ. ಒಲಿಂಪಿಕ್ಸ್ ನಡೆಯುವ ಏಳು ವರ್ಷಗಳ ಮುನ್ನವೇ ನಗರದ ಆಯ್ಕೆಯಾಗಬೇಕು.