Advertisement

Explainer: M4 ರೈಫಲ್ಸ್‌ ಜಮ್ಮು-ಕಾಶ್ಮೀರ ಉಗ್ರರಿಗೆ ಹೇಗೆ ತಲುಪುತ್ತಿದೆ, M4 ಎಷ್ಟು ಮಾರಕ?

04:19 PM Nov 12, 2024 | ನಾಗೇಂದ್ರ ತ್ರಾಸಿ |

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ನಿರಂತರವಾಗಿ ಭಾರತೀಯ ಯೋಧರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿದ್ದು, ಇತ್ತೀಚೆಗೆ ಅಖ್ನೂರ್‌ ಸಮೀಪ ನಡೆದ ಎನ್‌ ಕೌಂಟರ್‌ ನಲ್ಲಿ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು. ಈ ವೇಳೆ ಅವರ ಬಳಿ ಇದ್ದ ಅಮೆರಿಕ ನಿರ್ಮಿತ M4 ರೈಫಲ್ಸ್‌ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಅತ್ಯಾಧುನಿಕ ಲೆಥಾಲ್‌ ರೈಫಲ್ಸ್‌ ಗಳು ಉಗ್ರರ ಕೈಗೆ ಹೇಗೆ ಲಭ್ಯವಾಗುತ್ತಿದೆ ಎಂಬ ಬಗ್ಗೆ ಭಾರತೀಯ ಸೇನಾ ಪಡೆ ಮಾಹಿತಿ ಕಲೆಹಾಕಿತ್ತು…

Advertisement

ಉ*ಗ್ರರ ಕೈಗೆ ಅತ್ಯಾಧುನಿಕ ಶಸ್ತ್ರಾಸ್ತ್ರ!

ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನಾಪಡೆಯನ್ನು ವಾಪಸ್‌ ಕರೆಯಿಸಿಕೊಂಡ ಸಂದರ್ಭದಲ್ಲಿ ಅವರು ಬಿಟ್ಟು ಹೋಗಿರುವ ಅತ್ಯಾಧುನಿಕ ಎಂ4 ರೈಫಲ್ಸ್‌ ಜಮ್ಮು-ಕಾಶ್ಮೀರದ ಉಗ್ರರ ಕೈಗೆ ತಲುಪುತ್ತಿದೆ!

ಇಂಡಿಯಾ ಟುಡೇಗೆ ದೊರೆತ ಮೂಲಗಳ ಪ್ರಕಾರ, ಗುಂಡು ನಿರೋಧಕ (Bulletproof) ವಾಹನಗಳನ್ನು ಭೇದಿಸಬಲ್ಲ ಸಾಮರ್ಥ್ಯ ಹೊಂದಿರುವ ಈ ಅತ್ಯಾಧುನಿಕ ಎಂ4 ರೈಫಲ್ಸ್‌ ಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ ಐ ಭಾರತದ ಗಡಿ ನುಸುಳುವ ಉಗ್ರರಿಗೆ ಸರಬರಾಜು ಮಾಡುತ್ತಿದೆ. ಎಂ4 ರೈಫಲ್ಸ್‌ ಸ್ಟೀಲ್‌ ಬುಲ್ಲೆಟ್ಸ್‌ ಹೊಂದಿದ್ದು, ಒಂದು ಬಾರಿ ಗುರಿ ಇಟ್ಟು ದಾಳಿ ನಡೆಸಿದಲ್ಲಿ ವಾಹನಗಳು ಭಾರೀ ಪ್ರಮಾಣದಲ್ಲಿ ಜಖಂಗೊಳ್ಳುವಷ್ಟು ಶಕ್ತಿಶಾಲಿಯಾಗಿದೆ.

Advertisement

ಜಮ್ಮು-ಕಾಶ್ಮೀರದ ಗಡಿಯೊಳಗೆ ನುಸುಳಿ ಬರುವ ಬಹುತೇಕ ಭಯೋತ್ಪಾದಕರು ಎಕೆ 47 ಮತ್ತು ಎಂ4 ರೈಫಲ್ಸ್‌ ಹೊಂದಿರುವುದಾಗಿ ಮೂಲಗಳು ತಿಳಿಸಿವೆ. ಇದರಿಂದಾಗಿ ಭದ್ರತಾ ಪಡೆಗಳು ಸಾಕಷ್ಟು ಅನಾಹುತ ಎದುರಿಸುವಂತಾಗಿದೆ. 2017ರಲ್ಲಿ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಎಂ4 ರೈಫಲ್ಸ್‌ ಬಳಕೆ ಕಂಡುಬಂದಿತ್ತು. ಭದ್ರತಾ ಪಡೆಯ ಎನ್‌ ಕೌಂಟರ್‌ ನಲ್ಲಿ ‌ ಜೈಶ್‌ ಎ ಮೊಹಮ್ಮದ್‌ ವರಿಷ್ಠ ಮಸೂದ್‌ ಅಝರ್‌ ನ ಸಂಬಂಧಿ, ಉಗ್ರ ತಲಾಹ್‌ ರಶೀದ್‌ ಮಸೂದ್ ನ ಹ*ತ್ಯೆ ಮಾಡಿದ ವೇಳೆ ಎಂ4 ರೈಫಲ್ಸ್‌ ಪತ್ತೆಯಾಗಿತ್ತು. ಆ ನಂತರ ಪುಲ್ವಾಮಾ ಸೇರಿದಂತೆ ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ಹಲವು ದಾಳಿಯಲ್ಲಿ ಎಂ4 ರೈಫಲ್ಸ್‌ ಬಳಕೆ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗಿನ ಗುಪ್ತಚರ ವರದಿ ಪ್ರಕಾರ, ಜಮ್ಮು-ಕಾಶ್ಮೀರದ ಗಡಿಯ ಲಾಂಚ್‌ ಪ್ಯಾಡ್ಸ್‌ ಸಮೀಪ ಬೃಹತ್‌ ಸಂಖ್ಯೆಯ ಭಯೋತ್ಪಾದಕರು ಒಗ್ಗೂಡಿ ಸಭೆ ನಡೆಸಿ, ಹಿಮಪಾತ ಆರಂಭವಾಗುವ ಮೊದಲು ಸಾಧ್ಯವಾದಷ್ಟು ಉ*ಗ್ರರು ಗಡಿ ಮೂಲಕ ಜಮ್ಮು-ಕಾಶ್ಮೀರ ಪ್ರವೇಶಿಸುವ ಪ್ರಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ.

ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(PoK)ದಲ್ಲಿ ಆಯೋಜಿಸಲಾಗಿದ್ದ ಉನ್ನತ ಮಟ್ಟದ ಸಭೆಯಲ್ಲಿ ಐಎಸ್‌ ಐ ಅಧಿಕಾರಿಗಳು, ಭಯೋ*ತ್ಪಾದಕ ಸಂಘಟನೆಯ ಟಾಪ್‌ ಕಮಾಂಡರ್ಸ್‌ ಭಾಗಿಯಾಗಿದ್ದರು. ಈ ಸಭೆಯಲ್ಲಿ ಉ*ಗ್ರರಿಗೆ ಅಮೆರಿಕ ನಿರ್ಮಿತ ಎಂ4 ರೈಫಲ್ಸ್‌ ಒದಗಿಸುವ ಬಗ್ಗೆ ಚರ್ಚೆ ನಡೆಸಲಾಗಿತ್ತು ಎಂದು ವರದಿ ವಿವರಿಸಿದೆ. ಅಲ್ಲದೇ ಕಾಶ್ಮೀರ ಕಣಿವೆಯಲ್ಲಿ ಭಾರೀ ಪ್ರಮಾಣದ ದಾಳಿ ನಡೆಸುವ ನಿಟ್ಟಿನಲ್ಲಿ ಉ*ಗ್ರರಿಗೆ ಎಲ್ಲಾ ರೀತಿಯ ಸರಕು ಸರಬರಾಜು ಸೇರಿದಂತೆ ಶಸ್ತ್ರಾಸ್ತ್ರ, ಹಣಕಾಸು ನೆರವು ನೀಡುವ ಬಗ್ಗೆ ಮಾತುಕತೆ ನಡೆದಿರುವುದಾಗಿ ಮೂಲಗಳು ತಿಳಿಸಿವೆ.

ಎಂ4 ರೈಫಲ್ಸ್‌ ಎಷ್ಟು ಮಾರಕವಾಗಿದೆ?

ಎಂ4 ಕಾರ್ಬೈನ್‌ (Carbine) ತುಂಬಾ ಹಗುರ, ಅನಿಲ ಚಾಲಿತ, ಗಾಳಿಯಿಂದ ತಂಪಾಗುವ ಮ್ಯಾಗಜೀನ್‌ ಹೊಂದಿರುವ ಅತ್ಯಾಧುನಿಕ ರೈಫಲ್‌ ಇದಾಗಿದೆ. ಒಂದು ನಿಮಿಷದಲ್ಲಿ ಎಂ4 ರೈಫಲ್ಸ್‌ ಮೂಲಕ 700-900 ಸುತ್ತು ಗುಂಡಿನ ಸುರಿಮಳೆಯಾಗುತ್ತದೆ! ಎಂ4 ರೈಫಲ್‌ ಮೂಲಕ ಪರಿಣಾಮಕಾರಿಯಾಗಿ 500-600 ಮೀಟರ್‌ ದೂರದವರೆಗೆ ಗುಂಡು ಹಾರಿಸಬಹುದಾಗಿದ್ದು, ಇದರ ಗರಿಷ್ಠ ದೂರ 3,600 ಮೀಟರ್ಸ್!‌

ರಕ್ಷಣಾ ಪರಿಣತರ ಪ್ರಕಾರ, ಜಮ್ಮು-ಕಾಶ್ಮೀರದಲ್ಲಿ ಭಯೋ*ತ್ಪಾದಕರು ಮಾರಕ ಎಂ4 ರೈಫಲ್ಸ್‌ ಹೊಂದಿರುವುದು ಕಳವಳಕಾರಿ ಸಂಗತಿಯಾಗಿದೆ ಎನ್ನುತ್ತಾರೆ. 2001ರಲ್ಲಿ ಅಮೆರಿಕ ಸೇನಾಪಡೆ ಅಫ್ಘಾನಿಸ್ತಾನದಿಂದ ವಾಪಸ್‌ ತೆರಳಿರುವ ಪರಿಣಾಮ ಈ ಸ್ಥಿತಿ ಎದುರಿಸುವಂತಾಗಿದೆ. ಅಮೆರಿಕ ಪಡೆ ಅಫ್ಘಾನಿಸ್ತಾನದಲ್ಲಿ ಬರೋಬ್ಬರಿ 3,00,000 ಸಣ್ಣ ಶಸ್ತ್ರಾಸ್ತ್ರಗಳನ್ನು ಮತ್ತು ಸಾವಿರಾರು ಎಂ4 ರೈಫಲ್ಸ್‌ ಸೇರಿದಂತೆ 7 ಬಿಲಿಯನ್‌ ಡಾಲರ್‌ ಗೂ ಅಧಿಕ ಸೇನಾ ಉಪಕರಣಗಳನ್ನು ಬಿಟ್ಟು ಹೋಗಿದೆ. ಇದರ ಪರಿಣಾಮ ಅಫ್ಘಾನಿಸ್ತಾನದಲ್ಲಿರುವ ಶಸ್ತ್ರಾಸ್ತ್ರಗಳು ಪಾಕ್‌ ಗೆ ಬರುವ ಹಾದಿ ಸುಗಮವಾಗಿದ್ದು, ಅಲ್ಲಿಂದ ಜಮ್ಮು-ಕಾಶ್ಮೀರದಲ್ಲಿರುವ ಉ*ಗ್ರರನ್ನು ತಲುಪುತ್ತಿರುವುದಾಗಿ ಗುಪ್ತಚರ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next