ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮತ್ತೆ ಮುಂದುವರೆದಿದ್ದು ಗುರುವಾರ(ನ.7) ಸಂಜೆ ಕಿಶ್ತ್ವಾರ್ ಜಿಲ್ಲೆಯಲ್ಲಿ ಉಗ್ರರು ಇಬ್ಬರು ವಿಲೇಜ್ ಡಿಫೆನ್ಸ್ ಗ್ರೂಪ್ (ವಿಡಿಜಿ) ಸದಸ್ಯರನ್ನು ಅಪಹರಿಸಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.
“ಕಾಶ್ಮೀರ ಹುಲಿಗಳು” ಎಂದು ಕರೆಯಲ್ಪಡುವ ಜೈಶ್-ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಒಂದು ಭಾಗವು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಭಯೋತ್ಪಾದಕ ಗುಂಪು ಅಪಹರಣಕ್ಕೆ ಒಳಗಾದ ಇಬ್ಬರ ಕಣ್ಣಿಗೆ ಬಟ್ಟೆ ಕಟ್ಟಿದ ಸ್ಥಿತಿಯಲ್ಲಿ ಮೃತ ದೇಹಗಳ ಚಿತ್ರಗಳನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ.
ಮೃತರನ್ನು ಓಹ್ಲಿ ಕುಂಟ್ವಾರ ಗ್ರಾಮದ ನಿವಾಸಿಗಳಾದ ನಜೀರ್ ಅಹ್ಮದ್ ಮತ್ತು ಕುಲದೀಪ್ ಕುಮಾರ್ ಎಂದು ಗುರುತಿಸಲಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ನಜೀರ್ ಮತ್ತು ಕುಲ್ದೀಪ್ ಇಬ್ಬರೂ ತಮ್ಮ ಜಾನುವಾರುಗಳನ್ನು ಮೇಯಿಸಲು ಕಾಡಿಗೆ ಹೋದ ಸಂದರ್ಭದಲ್ಲಿ ಭಯೋತ್ಪಾದಕರು ಅಪಹರಿಸಿದ್ದಾರೆ.
ಪ್ರಕರಣದ ಬಗ್ಗೆ ಮಾತನಾಡಿದ ಕುಲದೀಪ್ ಅವರ ಸಹೋದರ ಪೃಥ್ವಿ, “ನನ್ನ ಸಹೋದರ ಮತ್ತು ಅಹ್ಮದ್ ಅವರನ್ನು ಭಯೋತ್ಪಾದಕರು ಅಪಹರಿಸಿ ಕೊಂದಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ. ಅವರು ಗ್ರಾಮ ರಕ್ಷಣಾ ಸಿಬ್ಬಂದಿ (ವಿಡಿಜಿ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಹಾಗೆ ಗುರುವಾರ ದನ ಮೇಯಿಸಲು ಹೋಗಿದ್ದಾಗ ಭಯೋತ್ಪಾದಕರು ಅಪಹರಿಸಿ ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಖಂಡನೆ:
ಕುಲದೀಪ್ ಮತ್ತು ನಜೀರ್ ಹತ್ಯೆಯನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಖಂಡಿಸಿದು ಇದೊಂದು ಹೇಯ ಕೃತ್ಯ, ಈ ಕೃತ್ಯ ಎಸಗಿದವರನ್ನು ಬಿಡುವ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.