ವಿಧಾನ ಪರಿಷತ್ತು: ವಿವಿಧ ವಸತಿ ಯೋಜನೆಗಳಡಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳ ಖಾತೆಗೆ ಸರ್ಕಾರದಿಂದ ಜಮೆ ಆಗುತ್ತಿರುವ ಹಣ ಎಷ್ಟು ಗೊತ್ತಾ? ಕೇವಲ 1 ರೂ.!
– ಸ್ವತಃ ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಈ ವಿಷಯ ಪ್ರಸ್ತಾಪಿಸಿ, ಸರ್ಕಾರಿ ಅಧಿಕಾರಿಗಳ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಸರ್ಕಾರ ಬಡವರಿಗೆ ವಿವಿಧ ವಸತಿ ಯೋಜನೆಗಳಡಿ ಮನೆಗಳ ನಿರ್ಮಾಣಕ್ಕೆ ಅನುದಾನ ನೀಡುತ್ತದೆ. ಫಲಾನುಭವಿಗಳು ನಿರ್ಮಿಸಿಕೊಳ್ಳುವ ಮನೆಗಳ ಹಂತಗಳನ್ನು ಜಿಪಿಎಸ್ ಆಧಾರದಲ್ಲಿ ಫೋಟೋ ಸೆರೆಹಿಡಿದು, ಅದಕ್ಕೆ ಅನುಗುಣವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. ಆದರೆ, ಮನೆ ನಿರ್ಮಾಣಗೊಂಡು ಅನೇಕ ದಿನಗಳಾದರೂ ಬಹುತೇಕ ಫಲಾನುಭವಿಗಳಿಗೆ ಹಣ ಬಿಡುಗಡೆ ಆಗುತ್ತಿಲ್ಲ. ಒಂದು ವೇಳೆ ಆಗಿದ್ದರೂ, ಅದು 1 ರೂಪಾಯಿಯಂತೆ ಮೂರು ಬಾರಿ ಜಮೆ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
2010-11ರಿಂದ ಇದುವರೆಗೆ 303.64 ಕೋಟಿ ರೂ. ಬಿಡುಗಡೆ ಆಗಬೇಕಿತ್ತು. ಆದರೆ, ಈವರೆಗೆ 16,451 ಮನೆಗಳಿಗೆ 59.58 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 244.06 ಕೋಟಿ ರೂ. ಬಾಕಿ ಉಳಿದಿದೆ. ಈ ಪೈಕಿ 55.80 ಕೋಟಿ ರೂ. 2011ರಲ್ಲೇ ಬಿಡುಗಡೆಯಾಗಿದ್ದು, ತದನಂತರದಿಂದ ಈಚೆಗೆ ಕೇವಲ 4 ಕೋಟಿ ಬಂದಿದೆ. ಈ ಯೋಜನೆಗಳಡಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ತಂತ್ರಜ್ಞಾನದ ಕನಿಷ್ಠ ಜ್ಞಾನವೂ ಇಲ್ಲ. ಇದರಿಂದ ಫಲಾನುಭವಿಗಳು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ನೆಹರು ಜನರ ವ್ಯಕ್ತಿ,ಮೋದಿ ರಾಜಕೀಯ ಕುಶಾಗ್ರಮತಿ : ಹಿರಿಯ ಲೇಖಕ ರಸ್ಕಿನ್ ಬಾಂಡ್
ಇದಕ್ಕೆ ವಸತಿ ಸಚಿವರ ಪರವಾಗಿ ಪ್ರತಿಕ್ರಿಯಿಸಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, “ಸಾಮಾನ್ಯವಾಗಿ ಫಲಾನುಭವಿಗಳ ಖಾತೆಯನ್ನು ಖಾತ್ರಿಪಡಿಸಿಕೊಳ್ಳಲು ಮೊದಲಿಗೆ 1 ರೂ. ಅನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗುತ್ತದೆ. ನಂತರ ಉಳಿದ ಹಣ ಪಾವತಿಸಲಾಗುತ್ತದೆ. ಆದರೆ, ಮೂರು ಬಾರಿ ಬರೀ 1 ರೂ. ಬಿಡುಗಡೆ ಆಗುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು. ಉಳಿದಂತೆ ಬಾಕಿ ಇರುವ 303.64 ಕೋಟಿ ಹಣವನ್ನೂ ಶೀಘ್ರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.