ಧಾರವಾಡ: ಮಳೆ ಹಾನಿ ಪರಿಹಾರ ಪಟ್ಟಿಯಿಂದ ವಂಚಿತವಾಗಿರುವ ಅರ್ಹ ಫಲಾನುಭವಿಗಳನ್ನು ಪರಿಹಾರಕ್ಕೆ ಪರಿಗಣಿಸಲು ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಮತ್ತೂಮ್ಮೆ ಮನವಿ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಮಂಗಳವಾರ ತಾಲೂಕು ದಂಡಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ವಿವಿಧ ಗ್ರಾಮಗಳ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೆ ಒಳಗಾಗಿರುವ ಮನೆಗಳ ಪಟ್ಟಿ ಅಂತಿಮಗೊಳಿಸಲಾಗಿದೆ. ಅದನ್ನು ಸರ್ಕಾರಕ್ಕೆ ಕಳುಹಿಸಿ ಕೂಡ ಆಗಿದೆ. ಆದರೆ ಮಳೆಹಾನಿ ಪರಿಹಾರ ನಿಗದಿಪಡಿಸುವಲ್ಲಿ ಒಂದಿಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಅದಕ್ಕಾಗಿ ಆನ್ ಲೈನ್‌ನಲ್ಲಿಯೇ ಪಟ್ಟಿ ಸಲ್ಲಿಕೆಯಾಗಬೇಕು. ಈ ಕುರಿತು ಆರ್‌ಜಿಆರ್‌ಎಚ್‌ಸಿಗೆ ಮನವಿ ಮಾಡಲಾಗುವುದು ಎಂದರು.
ಗ್ರಾಮೀಣರ ದೂರು: ಮಾದನಬಾವಿ ಗ್ರಾಮದಲ್ಲಿ ಗ್ರಾಮಸೇವಕ ಮನೆಹಾನಿ ಕುರಿತು ಫಲಾನುಭವಿಗಳಿಗೆ ಕೆಟಗೇರಿ ಮಾಡಿಸುತ್ತೇನೆ ಎಂದು ಹೇಳಿ ಹಣ ಪಡೆದು, ನಂತರ ಅವನು ಹೇಳಿದ ಕೆಟಗೇರಿ ಆಗದ್ದರಿಂದ ಮರಳಿ ಫಲಾನುಭವಿಗೆ ಹಣ ವಾಪಸ್ ನೀಡಿರುವ ಕುರಿತು ದೂರು ಬಂದಿದ್ದು, ಅದನ್ನು ಅಧಿಕಾರಿಗಳಿಂದ ತನಿಖೆ ಮಾಡಲಾಗುವುದು. ತಪ್ಪು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದರು.
ಸಾರ್ವಜನಿಕರು ಸಲ್ಲಿಸುವ ಎಲ್ಲ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಭೂಮಿ ವಿಭಾಗದಲ್ಲಿ ಜಿಲ್ಲೆ ಸತತವಾಗಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ವಿಳಂಬ ಕುರಿತು ದೂರು ಬಂದಲ್ಲಿ ಪರಿಶೀಲಿಸಲಾಗುವುದು ಎಂದರು.ಮಳೆಹಾನಿಯಿಂದ ಮನೆಹಾನಿ ಹಾಗೂ ಪರಿಹಾರ ಜಮೆ ಕುರಿತು ಯಾದವಾಡ, ಮುಳಮುತ್ತಲ, ಮಾದನಬಾವಿ, ನಿಗದಿ, ಹೆಬ್ಬಳ್ಳಿ, ಅಮ್ಮಿನಬಾವಿ ಮತ್ತು ಕೊಪ್ಪದಕೇರಿಯಲ್ಲಿರುವ ಪಾಲಿಕೆ ಉದ್ಯಾನವನಕ್ಕೆ ಮೂಲ ಸೌಕರ್ಯ ಕಲ್ಪಿಸುವುದು, ಹೊಸಯಲ್ಲಾಪುರ ವ್ಯಾಪ್ತಿಯಲ್ಲಿ ಪೋಡಿ ಮಾಡುವಲ್ಲಿನ ವಿಳಂಬ ಕುರಿತು, ಕಲ್ಲೆ ಗ್ರಾಮ ಸರ್ವೇ ನಂಬರ್‌ಗಳ ದಾಖಲೆ ಸರಿಪಡಿಸುವ ಕುರಿತು, ರಾಜೀವ ಗಾಂಧಿ ಕುಟುಂಬ ಕಲ್ಯಾಣ ಯೋಜನೆ ಪರಿಹಾರ ವಿಳಂಬ, ಜಮೀನು ಖಾತಾ ಬದಲಾವಣೆ ಮುಂತಾದ ವಿಷಯಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಪರಿಶೀಲಿಸಿ, ಸೂಕ್ತ ಕ್ರಮ ಜರುಗಿರುವ ಕುರಿತು ಜಿಲ್ಲಾಧಿಕಾರಿ ತಿಳಿಸಿದರು.
ತಹಶೀಲ್ದಾರ್ ಸಂತೋಷ ಹಿರೇಮಠ ಅವರು, ಸಾರ್ವಜನಿಕ ಅಹವಾಲು ಸಲ್ಲಿಕೆ ಮತ್ತು ಕಚೇರಿ ಕಾರ್ಯ, ವಿವಿಧ ಯೋಜನೆಗಳ ಪ್ರಗತಿ ಕುರಿತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದರು. ಪ್ರೊಬೆಷನರಿ ಎಸಿ ಅನುರಾಧಾ ವಸ್ತ್ರದ, ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕಿ ತನ್ವಿನ್ ಡಾಂಗಿ, ಸರ್ವೇ ಸಹಾಯಕ ಬಿ.ಎಚ್. ಮಾರುತಿ, ಗ್ರೇಡ್ 2 ತಹಶೀಲ್ದಾರ್ ಹಣಮಂತ ಕೊಚ್ಚರಗಿ ಇದ್ದರು. ತಹಶೀಲ್ದಾರ ಕಚೇರಿಯ ಉಪ ತಹಶೀಲ್ದಾರರಾದ ಮಂಜುನಾಥ ಗೂಳಪ್ಪನವರ, ರಮೇಶ ಬಂಡಿ, ಕಚೇರಿ ಶಿರಸ್ತೇದಾರ ಪ್ರವೀಣ ಪೂಜಾರ, ಕಂದಾಯ ನಿರೀಕ್ಷಕರಾದ ಗುರು ಸುಣಗಾರ, ಸಂಪತ್ತಕುಮಾರ ಗುರುವಡೆಯರ, ಐ.ಎಪ್. ಐಯ್ಯನಗೌಡರ ಇನ್ನಿತರರಿದ್ದರು.