ನವದೆಹಲಿ: ನ್ಯಾಷನಲ್ ಹೌಸಿಂಗ್ ಬ್ಯಾಂಕ್ 2023 ಜೂನ್ ತ್ತೈಮಾಸಿಕಕ್ಕೆ ಎನ್‌ಎಚ್‌ಬಿ ರೆಸಿಡೆಕ್ಸ್ ಸೂಚ್ಯಂಕ ಬಿಡುಗಡೆ ಮಾಡಿದೆ. ವಸತಿ ಬೆಲೆ ಸೂಚ್ಯಂಕ (ಎಚ್‌ಪಿಐ)ದ ಪ್ರಕಾರ, ಬೆಂಗಳೂರು ಮತ್ತು ತಿರುವನಂತಪುರದಲ್ಲಿ ಸೂಚ್ಯಂಕ ಏರಿಕೆ ಕಂಡಿದೆ. ಹಿಂದಿನ ತ್ತೈಮಾಸಿಕಕ್ಕೆ ಹೋಲಿಸಿದರೆ ವಸತಿ ಬೆಲೆ ಸೂಚ್ಯಂಕವು ಬೆಂಗಳೂರಿನಲ್ಲಿ ಶೇ.1.2ರಷ್ಟು ಮತ್ತು ತಿರುವನಂತಪುರದಲ್ಲಿ ಶೇ.1.3ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಆದರೆ ಕೊಚ್ಚಿಯಲ್ಲಿ (ಶೇ. -1.3) ಕುಸಿತ ದಾಖಲಿಸಿದೆ.
ವಸತಿ ಬೆಲೆ ಸೂಚ್ಯಂಕವು (ಎಚ್‌ಪಿಐ) ಮೂರು ತಿಂಗಳಿಗೊಮ್ಮೆ ಆಯ್ದ 50 ನಗರಗಳ ವಸತಿ ಸ್ವತ್ತುಗಳ ಬೆಲೆಯ ಏರಿಳಿತವನ್ನು ಟ್ರಾಕ್ ಮಾಡಲಿದೆ. ಪ್ರಾಥಮಿಕ ಸಾಲ ನೀಡುವ ಸಂಸ್ಥೆಗಳಿಂದ ಸಂಗ್ರಹಿಸಿದ ಸ್ವತ್ತುಗಳ ಬೆಲೆಗಳನ್ನು ಆಧರಿಸಿ 50 ನಗರಗಳ ಎಚ್‌ಪಿಐ ನಿರ್ಧಾರವಾಗುತ್ತದೆ. 2023 ಜೂನ್ ತ್ತೈಮಾಸಿಕದಲ್ಲಿ ಸೂಚ್ಯಂಕವು ಶೇ.4.8ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸೂಚ್ಯಂಕವು ಶೇ.7ರಷ್ಟು ಏರಿಕೆ ಕಂಡಿತ್ತು.
ವಾರ್ಷಿಕ ಆಧಾರ ಲೆಕ್ಕಾಚಾರದಲ್ಲಿ ಬೆಂಗಳೂರು (ಶೇ.8.9), ಕೊಚ್ಚಿ(ಶೇ.10.4) ಮತ್ತು ತಿರುವನಂತಪುರ (ಶೇ.3.8) ಏರಿಕೆ ಕಂಡಿವೆ. 50 ನಗರಗಳ ನಿರ್ಮಾಣ ಹಂತದಲ್ಲಿರುವ ಮತ್ತು ವಸತಿಗೆ ಸಿದ್ಧವಾಗಿರುವ, ಮಾರಾಟವಾಗದ ಸ್ವತ್ತುಗಳ ಸೂಚ್ಯಂಕವು 2023ರ ಏಪ್ರಿಲ್-ಜೂನ್ ತ್ತೈಮಾಸಿಕದಲ್ಲಿ ಶೇ.12.2ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಶೇ.5.7ರಷ್ಟು ಏರಿಕೆ ಕಂಡಿತು.
ವಾರ್ಷಿಕ ಆಧಾರದಲ್ಲಿ, ಮಾರುಕಟ್ಟೆ ಬೆಲೆಯಲ್ಲಿನ ವಾರ್ಷಿಕ ಬದಲಾವಣೆಯ ಎಚ್‌ಪಿಐ ಸೂಚ್ಯಂಕದಲ್ಲಿ ಕೋಲ್ಕತ (ಶೇ.33.7), ಬೆಂಗಳೂರು(ಶೇ.16.7), ಕೊಚ್ಚಿ (ಶೇ.2.8) ಮತ್ತು ತಿರುವನಂತಪುರ (ಶೇ.6.7) ನಗರಗಳು ಏರಿಕೆ ದಾಖಲಿಸಿವೆ. ಆದರೆ ರಾಜ್‌ಕೋಟ್‌ನಲ್ಲಿ ಶೇ.2.2 ಇಳಿಕೆ ದಾಖಲಾಗಿದೆ.
2023ರ ಜೂನ್ ತ್ತೈಮಾಸಿಕದಲ್ಲಿ ನಿರ್ಮಾಣ ಹಂತದಲ್ಲಿರುವ ಆಸ್ತಿಗಳ ಮಾರುಕಟ್ಟೆ ಬೆಲೆಯ ಎಚ್‌ಪಿಐ ಸೂಚ್ಯಂಕದಲ್ಲಿ ಬೆಂಗಳೂರು (ಶೇ.3.9), ತಿರುವನಂತಪುರ (ಶೇ.0.6)ದಲ್ಲಿ ಏರಿಕೆ ಕಂಡಿದ್ದು, ಕೊಚ್ಚಿಯಲ್ಲಿ (ಶೇ.-0.2) ಅಲ್ಪ ಕುಸಿತ ಕಂಡುಬಂದಿದೆ.