Advertisement

ಮತಬೇಟೆ ಆರಂಭಿಸಿದ ವಿ.ಸೋಮಣ್ಣ

02:02 PM Apr 16, 2023 | Team Udayavani |

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ವಸತಿ ಸಚಿವ ವಿ. ಸೋಮಣ್ಣ ಅವರು ಕ್ಷೇತ್ರದಲ್ಲಿ ಶನಿವಾರ ತಮ್ಮ ಮತ ಪ್ರಚಾರ ಆರಂಭಿಸಿದರು.

Advertisement

ತಾಲೂಕಿನ ಕೂಡ್ಲೂರು ಮಂಟೇಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಸಚಿವರು ಬಳಿಕ ಆಲೂರು, ಚಂದಕವಾಡಿ, ಅಂಕನಶೆಟ್ಟಿಪುರ, ಅರಕಲವಾಡಿ, ಉಡಿಗಾಲ, ಮಾದಾಪುರ ಗ್ರಾಮಗಳಲ್ಲಿ ಸಭೆ ನಡೆಸಿದರು.

ತಾಲೂಕಿನ ಆಲೂರು ಗ್ರಾಮದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರ ಸಭೆಯಲ್ಲಿ ಮಾತನಾಡಿದ ಸೋಮಣ್ಣ, ಚಾಮರಾಜನಗರ, ವರುಣಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಾನು ಬಯಸಿರಲಿಲ್ಲ. ಆದರೆ, ಹೈಕಮಾಂಡ್‌ ನನಗೆ ಎರಡೂ ಕ್ಷೇತ್ರದಲ್ಲಿ ಟಿಕೆಟ್‌ ನೀಡಿದೆ. ಎರಡೂ ಕ್ಷೇತ್ರಗಳಲ್ಲಿ ಅವಕಾಶ ನೀಡಿರುವುದು ದೈವಿಕ ಶಕ್ತಿಯಿಂದ ಎಂದರು.

24 ಗಂಟೆಯೂ ನಿಮ್ಮ ಸೇವೆ ಮಾಡುತ್ತೇನೆ: ಗೋವಿಂದರಾಜ ನಗರದಲ್ಲಿ ನಿರಾಯಾಸ ವಾಗಿ 20 ಸಾವಿರ ಮತಗಳಿಂದ ಜಯ ಗಳಿಸುತ್ತಿದ್ದೆ. ಹೈಕಮ್ಯಾಂಡ್‌ ನನ್ನನ್ನು ಇಲ್ಲಿಗೆ ಕಳುಹಿಸಿದೆ. ನನ್ನನ್ನು ಬರಿಗೈಲಿ ಕಳಿಸಬೇಡಿ. ಅದರಿಂದ ನಿಮಗೇ ನಷ್ಟ ಎಂದರು.

ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಬೇಕು ಎಂಬುದು ನನ್ನ ಗುರಿ. ನೀವು ನೀಡುವ ಮತದಿಂದ ಚಾಮರಾಜನಗರ ಅಭಿವೃದ್ಧಿಯಾಗಲಿದೆ. ಗೆದ್ದ ಬಳಿಕ ನಿಮ್ಮ ಸೇವಕನಾಗಿ 24 ಗಂಟೆಯೂ ನಿಮ್ಮ ಸೇವೆ ಮಾಡುತ್ತೇನೆ. ಕಳೆದ ಮೂರು ಬಾರಿಯಿಂದ ಬೇರೆಯವರಿಗೆ ಅವಕಾಶ ನೀಡಿದ್ದೀರಿ. ಈ ಬಾರಿ ನನಗೊಂದು ಅವಕಾಶ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

Advertisement

ಮುಂದಿನ ದಿನಗಳಲ್ಲೂ ಹೆಚ್ಚಿನ ಅಭಿವೃದ್ಧಿ: ಎರಡು ಕಡೆಗಳಲ್ಲೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗೋವಿಂದ ರಾಜನಗರ ಕ್ಷೇತ್ರದ ಅಭಿವೃದ್ಧಿಯ ಮಾದರಿ ಯಲ್ಲಿಯೇ ಚಾಮರಾಜನಗರ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತೇನೆ. ಈಗಾಗಲೇ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲೂ ಹೆಚ್ಚಿನ ಅಭಿವೃದ್ಧಿ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು.

ಕೇಂದ್ರ ಬರಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಚಾಮರಾಜನಗರ ಕ್ಷೇತ್ರದಲ್ಲಿ ವಿ.ಸೋಮಣ್ಣ ಅವರ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡು ತ್ತೇವೆ. ವಿ.ಸೋಮಣ್ಣ ಅವರು ಅಭಿವೃದ್ಧಿಯ ಹರಿಕಾರರಾಗಿದ್ದು ಅವರನ್ನು ಗೆಲ್ಲಿಸಬೇಕಿದೆ ಎಂದರು. ದೇವಸ್ಥಾನಗಳಿಗೆ ತೆರಳಿ ಪೂಜೆ: ಮತಯಾಚನೆಗೂ ಮದಲು ವಿ.ಸೋಮಣ್ಣ ಅವರು ಪಕ್ಷದ ಮುಖಂಡರು, ಬೆಂಬಲಿಗ ರೊಂದಿಗೆ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿರುವ ಗಣಪತಿ ದೇವಸ್ಥಾನ ಹಾಗೂ ಮಂಟೇಸ್ವಾಮಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಆಲೂರು ಗ್ರಾಮದಲ್ಲಿ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ಗ್ರಾಮದಲ್ಲಿ ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಚಾಮರಾಜನಗರ ಕ್ಷೇತ್ರ ಉಸ್ತುವಾರಿ ಕೋಟೆ ಎಂ.ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್‌, ಚಲನಚಿತ್ರ ನಿದೇರ್ಶಕ ಎಸ್‌.ಮಹೇಂದರ್‌, ಮಾಜಿ ಜಿಲ್ಲಾಧ್ಯಕ್ಷ ಆರ್‌. ಸುಂದರ್‌, ಆಲೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ, ಜಿಪಂ ಮಾಜಿ ಅಧ್ಯಕ್ಷ ಆಲೂರು ನಟರಾಜು, ಜಿಪಂ ಮಾಜಿ ಸದಸ್ಯರಾದ ಎಚ್‌ಎಸ್‌. ಬಸವರಾಜು, ಆರ್‌. ಬಾಲರಾಜ್‌, ಮುಖಂಡರಾದ ವೆಂಕಟರಮಣಸ್ವಾಮಿ ಪಾಪು, ಯು.ಎಂ. ಪ್ರಭುಸ್ವಾಮಿ, ಕೆಲ್ಲಂಬಳ್ಳಿ ಸೋಮನಾಯಕ, ಕೆ. ವೀರಭದ್ರಸ್ವಾಮಿ, ಅಯ್ಯನಪುರ ಶಿವಕುಮಾರ್‌, ಅರಕಲವಾಡಿ ಮಹೇಶ್‌ ಮತ್ತಿತರರು ಹಾಜರಿದ್ದರು.

ಪ್ರಚಾರದಲ್ಲಿ ಪಾಲ್ಗೊಂಡ ಟಿಕೆಟ್‌ ಆಕಾಂಕ್ಷಿತರು : ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರೊಂದಿಗೆ ಸ್ಥಳೀಯವಾಗಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಮುಖಂಡರಾದ ಕೆ.ಆರ್‌. ಮಲ್ಲಿಕಾರ್ಜುನಪ್ಪ, ಜಿ. ನಿಜಗುಣರಾಜು, ಎಂ. ರಾಮಚಂದ್ರ, ಅಮ್ಮನಪುರ ಮಲ್ಲೇಶ್‌, ಡಾ.ಎ.ಆರ್‌. ಬಾಬು, ಪಿ. ವೃಷಭೇಂದ್ರಪ್ಪ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next