Advertisement

ಮನೆಸಾಲ ಓವರ್‌ ಟು ಡ್ರಾಫ್ಟ್

04:00 AM Oct 29, 2018 | |

ಕೆಲವರಿಗೆ, ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆಯಲ್ಲಿ ಹೆಚ್ಚಿನ ಹಣ ಬಿಡುವ ಅಭ್ಯಾಸವಿರುತ್ತದೆ. ಇಂತಹವರು ಬ್ಯಾಂಕಿನಿಂದ ಮನೆ ಸಾಲ ಪಡೆಯ ಬಯಸಿದರೆ ಅವರ ಈ ಉಳಿತಾಯ ಖಾತೆಯ ಕಡಿಮೆ ಬಡ್ಡಿಯ ಹಣ ಮತ್ತು ಚಾಲ್ತಿ ಖಾತೆಯ ಬಡ್ಡಿರಹಿತ ಹಣ ವ್ಯರ್ಥವಾಗದ ರೀತಿಯಲ್ಲಿ ಮನೆ ಸಾಲಕ್ಕೆ ಬಳಸಬಹುದು. ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ, ಈ ಮನೆ ಸಾಲವನ್ನು ಮ್ಯಾಕ್ಸ್‌ಗೆçನ್‌ ಮನೆಸಾಲ ಎನ್ನುವ ಹೆಸರಿನಲ್ಲಿ ಕೊಡುತ್ತಿದೆ.

Advertisement

ಈ ಮನೆಸಾಲ ಪಡೆಯುವಾಗ ಇನ್ನಿತರೆ ಮನೆಸಾಲ ಪಡೆಯುವ ನಿಯಮಗಳೇ ಇದಕ್ಕೂ ಅನ್ವಯಿಸುತ್ತವೆ.  ನಿಮ್ಮ ವರಮಾನ, ನೀವು ಕಟ್ಟಿಲಿರುವ ಅಥವಾ ಖರೀದಿಸುವ ಮನೆಯ ವೆಚ್ಚ, ನಿಮ್ಮ ವಯಸ್ಸು… ಇವುಗಳ ಆಧಾರದಲ್ಲಿಯೇ ಮನೆಸಾಲ ಸಿಕ್ಕುತ್ತದೆ. ಆದರೆ, ನೀವು ಈ ಮನೆಸಾಲ ಪಡೆಯುವ ಮಿತಿ ಇಪ್ಪತ್ತು ಲಕ್ಷಕ್ಕಿಂತ ಹೆಚ್ಚಿರಬೇಕು ಅನ್ನೋ ಕಂಡೀಷನ್‌ ಇದೆ.  ಒಂದು ವ್ಯತ್ಯಾಸವೆಂದರೆ, ಈ ಮನೆಸಾಲ ಇತರೆ ಸಾಲಗಳಂತೆ ಅಧಿಕಸಾಲವಾಗಿರದೇ ಓವರ್‌ಡ್ರಾಫ್ಟ್ ಸಾಲವಾಗಿರುತ್ತದೆ. ಹಾಗಿದ್ದೂ ಮನೆ ಸಾಲದಂತೆ ದೀರ್ಘ‌ ಅವಧಿಯವರೆಗೆ ಸಾಲ ಇಟ್ಟುಕೊಳ್ಳುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. 

ಹೇಗೆ ಲಾಭದಾಯಕ?: ಮನೆ ಸಾಲ ತೀರಿಸುವುದು ಹೇಗೆ ಎನ್ನುವ ಗೊಂದಲ ನಿಮ್ಮದಾಗಿರಬಹುದು. ನಿಮಗೆ ಗೊತ್ತಿರುವಂತೆ, ಎಲ್ಲಾ ಅವಧಿಯ ಸಾಲಗಳಿಗೂ ಇಂತಿಷ್ಟು ಎಂದು ಕಂತುಗಳನ್ನು ಗೊತ್ತು ಮಾಡಿರುತ್ತಾರೆ. ಇದನ್ನು ಇಎಮ್‌ಐ(ಈಕ್ವಲಿ ಮಂತ್ಲಿ ಇನ್‌ಸ್ಟಾಲ್‌ಮೆಂಟ್‌) ಎನ್ನುತ್ತಾರೆ. ಈ ಇಎಮ್‌ಐ, ಗಣಿತದ ಒಂದು ಸೂತ್ರದ ಪ್ರಕಾರ ನಿರ್ಧಾರವಾಗುವಂತಹುದು.

ಕಂತು ಕಟ್ಟುವವನಿಗೆ ಹೊರೆಯಾಗದ ರೀತಿಯಲ್ಲಿ ಇದು ಇರುತ್ತದೆ. ನೀವು ಕಟ್ಟುವ ಒಟ್ಟು ಕಂತುಗಳು ಒಂದೇ ತೆರನಾಗಿದ್ದು ಮೊದಲಿಗೆ ಈ ಕಂತಿನ ಹೆಚ್ಚಿನ ಹಣ, ನಿಮ್ಮ ಸಾಲದ ಬಡ್ಡಿಗೆ ಜಮಾ ಆಗುತ್ತಿರುತ್ತದೆ. ಕಡಿಮೆ ಹಣ ಅಸಲಿಗೆ ಜಮಾ ಆಗುತ್ತಿರುತ್ತದೆ. ನೀವು ಕಂತು ಕಟ್ಟುವ ಒಂದು ಬಿಂದುವಿನಲ್ಲಿ ಇದು ಉಲ್ಟಾ ಆಗಿ ನಿಮ್ಮ ಕಂತಿನ ಹಣದ ಹೆಚ್ಚಿನ ಭಾಗ ಅಸಲಿಗೂ ಕಡಿಮೆ ಭಾಗ ಬಡ್ಡಿಗೂ ಹೋಗುತ್ತದೆ. ನಿಗದಿ ಪಡಿಸಿದ ಅವಧಿಯಲ್ಲಿ ನಿಮ್ಮ ಸಾಲ ಮುಕ್ತಾಯವಾಗುತ್ತದೆ.

ಆದರೆ ಓವರ್‌ ಡ್ರಾಫ್ಟ್ ಸಾಲ ಹೀಗಲ್ಲ. ಅದು ಹೇಗೆ ಕೆಲಸಮಾಡುತ್ತದೆ ನೋಡೋಣ. ನಿಮ್ಮ ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆಯಲ್ಲಿ ಕನಿಷ್ಠ 5000/- ರುಪಾಯಿಗಳನ್ನು ಯಾವಾಗಲೂ ಇಟ್ಟಿರಲೇ ಬೇಕು. ಈ ನಿಮ್ಮ ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆ, ಮನೆ ಸಾಲದ ಖಾತೆಗೆ ಲಿಂಕ್‌ ಆಗಿರುತ್ತದೆ. ನಿಮ್ಮ ಉಳಿತಾಯ ಅಥವಾ ಚಾಲ್ತಿ ಖಾತೆಯಲ್ಲಿ ಐದು ಸಾವಿರಕ್ಕಿಂತ ಹೆಚ್ಚಿಗೆ ಹಣ ಜಮಾ ಆದಲ್ಲಿ ಅಷ್ಟು ಹಣವನ್ನು ಕಂಪ್ಯೂಟರ್‌ ತಾನೇತಾನಾಗಿ ಅಲ್ಲಿಂದ ಮನೆಸಾಲದ ಖಾತೆಗೆ ವರ್ಗಾಯಿಸಿಕೊಂಡು ಬಿಡುತ್ತದೆ.

Advertisement

ನೀವು ಹಣ ತೆಗೆಯುವುದಿದ್ದರೆ ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆಯಿಂದ ತೆಗೆಯುವ ಬದಲು, ಮನೆ ಸಾಲದ ಖಾತೆಯಿಂದ ತೆಗೆಯಬಹುದು. ಅದಕ್ಕಾಗಿ ಮನೆ ಸಾಲ ಖಾತೆಗೆ ಚೆಕ್‌ ಪುಸ್ತಕ ನೀಡಿರುತ್ತಾರೆ. ಇಂಟರ್‌ ನೆಟ್‌ ಬ್ಯಾಂಕಿನ ಮೂಲಕವೂ ಈ ಮನೆ ಸಾಲದಲ್ಲಿ ವ್ಯವಹಾರ ಮಾಡಬಹುದು. ಆದರೆ ಗೊತ್ತಿರಲಿ; ಇದಕ್ಕೆ ಎಟಿಎಂ ಕಾರ್ಡ್‌ ಕೊಡುವುದಿಲ್ಲ. ನಿಮ್ಮಲ್ಲಿರುವ ಹೆಚ್ಚಿನ ಹಣವೆಲ್ಲಾ ಸಾಲದ ಖಾತೆಗೆ ಜಮಾ ಆಗುವುದರಿಂದ, ಆ ಹಣ ಸಾಲದ ಖಾತೆಯಲ್ಲಿರುವಷ್ಟು ದಿನ ನಿಮಗೆ ಸಾಲದ ಮೇಲಿನ ಬಡ್ಡಿ ಉಳಿಯುತ್ತದೆ. 

ಸಾಲ ಹೇಗೆ ತೀರುತ್ತದೆ?: ಹಾಗಾದರೆ ಸಾಲ ತೀರುವುದೇ ಇಲ್ಲವೇ ಎಂಬ ಗೊಂದಲ ಬೇಡ. ಅದೂ ತೀರುತ್ತದೆ. ಹೇಗೆ ಅಂದಿರಾ? ಕೇಳಿ: ನಿರ್ಮಾಣದ ಕೆಲಸವಲ್ಲ ಮುಗಿದು ಕಂತುಗಳನ್ನು ಕಟ್ಟು ಕೆಲಸ ನಿಮಗೆ ಮಂಜೂರಾದ ಮನೆಸಾಲದ ಮೊತ್ತವನ್ನು ಓವರ್‌ ಡ್ರಾಫ್ಟ್ ಲಿಮಿಟ್‌ ಎನ್ನುತ್ತಾರೆ. ನಿಮ್ಮ ಮನೆ ಪೂರ್ತಿ ಕಟ್ಟಿ ಕಂತು ಆರಂಭವಾಗುವಾಗ ನೀವು ಪಡೆದ ಸಾಲ ಈ ಮಂಜೂರಾದ ಮೊತ್ತವನ್ನು ಮೀರುವಂತಿಲ್ಲ.

ಉಳಿದ ಮನೆ ಸಾಲಗಳಂತೆ ಈ ಸಾಲಕ್ಕೂ ನೀವು ಪಡೆದ ಒಟ್ಟು ಅವಧಿಗೆ ಅನುಗುಣವಾಗಿ, ಇಎಮ್‌ಐ ನಿಗದಿಯಾಗಿರುತ್ತದೆ. ಇಎಂಐ ಕಂತಿನಲ್ಲಿ ಪ್ರತಿ ತಿಂಗಳೂ ಅಸಲಿಗೆ ಒಂದಿಷ್ಟು ಹಾಗೂ ಬಡ್ಡಿಗೆ ಇಂತಿಷ್ಟು ಜಮಾ ಆಗುತ್ತದೆಯಲ್ಲ ಅದರಲ್ಲಿ ಅಸಲಿಗೆ ಹೋಗುವ ಹಣದ ಪ್ರಕಾರ ಪ್ರತಿ ತಿಂಗಳು ನಿಮ್ಮ ಸಾಲದ ಲಿಮಿಟ್‌ ಕಡಿಮೆಯಾಗುತ್ತಾ ಹೋಗುತ್ತದೆ. ಉಳಿದ ಮನೆ ಸಾಲದಂತೆಯೇ ನಿಗದಿತ ಅವಧಿಯಲ್ಲಿ ನಿಮ್ಮ ಮನೆಸಾಲವೂ ತೀರುತ್ತದೆ. ಪ್ರತಿ ತಿಂಗಳ ಲಿಮಿಟ್‌ ಅಥವಾ ಮಿತಿಯೊಳಗೆ ನೀವು ಹಣ ತೆಗೆಯುವುದು, ಹಾಕುವುದು ಮಾಡಬಹುದು. 

ಈ ಮಾತಿಗೆ ಒಂದು ಉದಾಹರಣೆ ಇಲ್ಲಿದೆ- ನೀವು 20ಲಕ್ಷ ಮನೆ ಸಾಲ ಪಡೆದಿದ್ದೀರಿ ಅಂದು ಕೊಳ್ಳಿ.20 ವರ್ಷ ಕಂತು, ಬಡ್ಡಿ ದರ ಶೇ.9 ಆಗಿದ್ದಲ್ಲಿ ಇಎಂಐ ಪ್ರಕಾರ ನೀವು ಕಟ್ಟ ಬೇಕಾದ ಪ್ರತಿ ತಿಂಗಳ ಕಂತು ರೂ.17,995/-

ಕಂತು    ಕಂತಿನಲ್ಲಿ ಅಸಲಿಗೆ ಜಮಾ ಆಗುವ ಹಣ    ಕಂತಿನಲ್ಲಿ ಬಡ್ಡಿಗೆ ಜಮಾ ಆಗುವ ಹಣ    ಒಟ್ಟು ಕಂತಿನ ಹಣ    ಅಸಲಿನಲ್ಲಿ ಉಳಿಯುವ ಬ್ಯಾಲೆನ್ಸ್‌.
0                20,00,000
1    2,995    15,000    17,995    19,97,005
2    3,017    14,978    17,995    19,93,988
3    3,040    14,955    17,995    19,90,948
4    3,062    14,933    17,995    19,87,886
5    3,085    14,910    17,995    19,84,801
6    3,109    14,886    17,995    19,81,692
7    3,132    14,863    17,995    19,78,560

ಓವರ್‌ ಡ್ರಾಫ್ಟ್ ಮನೆ ಸಾಲದಲ್ಲಿ ಮೇಲಿನ ಕೋಷ್ಟಕದಂತೆ ಮೊದಲ ತಿಂಗಳು ನಿಮ್ಮ ಸಾಲದ ಲಿಮಿಟ್‌ 20 ಲಕ್ಷ ವಾದರೆ, ನಂತರದ ತಿಂಗಳುಗಳಲ್ಲಿ ಕ್ರಮವಾಗಿ 19,97,005/-,19,93,988/- ಹೀಗೆ ಕಡಿಮೆಯಾಗುತ್ತಾ ಬರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಸಂಬಳ,ಪಡೆಯುವ ಮಂದಿಗೆ ಇದೊಂದು ಉತ್ತಮವಾದ ಮನೆಸಾಲ. ಬಡ್ಡಿದರ ಸಾಮಾನ್ಯವಾಗಿ ಉಳಿದ ಮನೆಸಾಲಕ್ಕಿಂತ ತುಸು ಹೆಚ್ಚಿರುತ್ತದೆ. ಒಂದು ನಿರಾಶಾದಾಯಕ ಅಂಶವೆಂದರೆ ಇದಕ್ಕೆ ಎಟಿಎಂ ಕಾರ್ಡ್‌ ಸಿಗುವುದಿಲ್ಲ ಅನ್ನುವುದು. ಹಣ ಬೇಕಿದ್ದಲ್ಲಿ ಬ್ಯಾಂಕಿಗೇ ಹೋಗಿ ತೆಗೆಯಬೇಕು.

ಫ್ಲೆಕ್ಸಿಬಲ್‌ ಲೋನ್‌, ರೆಗ್ಯುಲರ್‌ ಲೋನ್‌: ಮನೆ ಸಾಲದಲ್ಲಿ ಎರಡು ವಿಧವಿದೆ. ಫ್ಲೆಕ್ಸಿಬಲ್‌ ಲೋನ್‌, ರೆಗ್ಯುಲರ್‌ ಲೋನ್‌. ರೆಗ್ಯುಲರ್‌ ಲೋನ್‌ಗಾದರೆ ಪ್ರತ್ಯೇಕ ಖಾತೆ ಇರುವುದಿಲ್ಲ. ನಿಮ್ಮ ಉಳಿತಾಯ ಖಾತೆಯಲ್ಲೇ ಇದು ಮುಂದುವರಿಯುತ್ತದೆ. ಫ್ಲೆಕ್ಸಿಬಲ್‌ ಲೋನ್‌ನಲ್ಲಿ ಹೀಗಲ್ಲ. ಸಾಲಕ್ಕೆ ಪ್ರತ್ಯೇಕ ಖಾತೆ ತೆರೆದು, ಅದನ್ನು ಸಾಲಪಡೆಯಲು ಮಾತ್ರ ಬಳಸಲಾಗುತ್ತದೆ. ಶಾಪಿಂಗ್‌ ಮಾಡಲು ಅಲ್ಲ. ಹೀಗಾಗಿ, ಈ ಖಾತೆಗೆ ಯಾವುದೇ ಡೆಬಿಟ್‌ ಕಾರ್ಡ್‌ ಸೌಲಭ್ಯವಿಲ್ಲ. 

ಸಾಲ ಪಡೆಯಬೇಕು. ಆದರೆ ಆ ಸಾಲವೇ ಒಂದು “ಹೊರೆ’ ಆಗದಂತೆಯೂ ಇರಬೇಕು ಅನ್ನುವವರು ಫ್ಲೆಕ್ಸಿಬಲ್‌ ಲೋನ್‌ನ ಮೊರೆ ಹೋಗಬೇಕು. ಇಲ್ಲಿ ಸಾಲದ ಹೊರೆ ಹೇಗೆ ಕಡಿಮೆ ಆಗುತ್ತದೆ ಅನ್ನೋದಕ್ಕೆ ಒಂದು ಉದಾಹರಣೆ.  ನಿಮಗೆ ತಿಂಗಳಿಗೆ ಅರವತ್ತು ಸಾವಿರ ಸಂಬಳ ಬರುತ್ತದೆ ಎಂದಿಟ್ಟುಕೊಳ್ಳಿ. ಅಷ್ಟೂ ಹಣವನ್ನು ಈ ಖಾತೆಯಲ್ಲಿ ತುಂಬಿದರೆ, ನೀವು ಎಷ್ಟು ದಿನ ಖಾತೆಯಲ್ಲಿ ಹಣ ಬಿಟ್ಟಿರುತ್ತೀರೋ ಅಷ್ಟು ಮೊತ್ತದ ಬಡ್ಡಿ ಮನೆಸಾಲದಲ್ಲಿ ಕಟ್‌ ಆಗುತ್ತದೆ. ಅಂದರೆ, 20ಲಕ್ಷ ಸಾಲವಿದ್ದರೆ, 19,4000ಕ್ಕೆ ಮಾತ್ರ ಬಡ್ಡಿ ಬೀಳುತ್ತದೆ. ನಂತರ ನೀವು ಬಿಟ್ಟ ಹಣವನ್ನು ಡ್ರಾ ಮಾಡಬಹುದು. 

ಅರೆ, ಇದರಿಂದ ಲಾಭ ಏನು ಅಂತ ಕೇಳಬಹುದು. ಇದರ ಲಾಭ ಬ್ಯಾಂಕಿಗಲ್ಲ ಗ್ರಾಹಕರಿಗೆ. ತಿಂಗಳಿಗೆ, ಲಕ್ಷ, ಲಕ್ಷ ಸಂಬಳ ಪಡೆಯುವ ಗ್ರಾಹಕರನ್ನು ಸೆಳೆಯಲು ಬ್ಯಾಂಕ್‌ಗಳು ಮಾಡಿರುವ ತಂತ್ರ ಇದು. ಆದರೆ, ಸಾಮಾನ್ಯ ಹೌಸಿಂಗ್‌ ಲೋನ್‌ಗಿಂತ ಇದರಲ್ಲಿ ಒಂದು ಕಾಲು ಪರ್ಸೆಂಟ್‌ ಬಡ್ಡಿ ಜಾಸ್ತಿ ಇರಬಹುದು. ಕೆಲವು ಬ್ಯಾಂಕ್‌ಗಳಲ್ಲಿ ಅದೂ ಇಲ್ಲದೆ ಇರಬಹುದು. ಆಯಾ ಬ್ಯಾಂಕ್‌ಗಳು ರೂಪಿಸಿಕೊಂಡಿರುವ ನೀತಿ-ನಿಯಮಗಳಿಗೆ ಬಿಟ್ಟ ವಿಚಾರ. 

* ರಾಮಸ್ವಾಮಿ ಕಳಸವಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next