Advertisement

ಬಡವರ ಸೂರಿನ ಕನಸಿಗೆ ನೂರೆಂಟು ವಿಘ್ನ; ರಾಜ್ಯದಲ್ಲಿ 39 ಲಕ್ಷ ವಸತಿ, ನಿವೇಶನ ರಹಿತರು

01:03 AM Mar 08, 2023 | Team Udayavani |

ಬೆಂಗಳೂರು: ಸರ್ವರಿಗೂ ಸೂರು ಒದಗಿಸುವುದು ಸರಕಾರದ ಆದ್ಯತೆಯಾಗಿದೆ. ಆದರೆ, ಬಡವರ ಈ ಸೂರಿನ ಕನಸಿಗೆ ನೂರೆಂಟು ವಿಘ್ನಗಳು ಅಡ್ಡಿಯಾಗಿವೆ.

Advertisement

ರಾಜ್ಯದ ವಸತಿ ರಹಿತ ಮತ್ತು ನಿವೇಶನ ರಹಿತರಿಗೆ ನೆಲೆ ಒದಗಿಸಿಕೊಡಲು ಸರಕಾರ ಹತ್ತಾರು ಯೋಜನೆಗಳನ್ನು ಹಾಕಿಕೊಂಡಿದೆ. ಇದಕ್ಕಾಗಿ ಕೋಟ್ಯಂತರ ರೂ. ಸಹ ಮೀಸಲಿಡುತ್ತದೆ. ಆದರೆ, ಗುರಿ ಮಾತ್ರ ಆಮೆ ನಡಿಗೆಯಲ್ಲಿದೆ.

ಗ್ರಾಮೀಣ ಭಾಗದ ಜನರಿಗೆ ವಸತಿ-ನಿವೇಶನ ಒದಗಿಸಲು ಬಸವ ವಸತಿ, ಅಂಬೇಡ್ಕರ್‌ ಆವಾಸ್‌, ಪಿಎಂ ಆವಾಸ್‌, ದೇವರಾಜ ಅರಸು ವಸತಿ ಯೋಜನೆಗಳನ್ನು ಅದೇ ರೀತಿ ನಗರದ ಪ್ರದೇಶದ ನಿರ್ಗತಿಕರಿಗೆ ನಿವೇಶನ ಒದಗಿಸಲು ವಾಜಪೇಯಿ ನಗರ ವಸತಿ, ದೇವರಾಜು ಅರಸ್‌, ಅಂಬೇಡ್ಕರ್‌ ನಗರ ವಸತಿ ಯೋಜನೆ ಇತ್ಯಾದಿ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಸಕ್ತ ವರ್ಷದಲ್ಲಿ ಈ ಯೋಜನೆಗಳ ಪ್ರಗತಿ ಅರಕ್ಕೇರಿಲ್ಲ, ಮೂರಕ್ಕಿಳಿದಿಲ್ಲ.

ಸರಕಾರವೇ ಹೇಳಿರುವ ವಸತಿ ಯೋಜನೆಗಳ ಅನುಷ್ಠಾನಕ್ಕೆ ಅನೇಕ ಸಮಸ್ಯೆಗಳಿವೆ. ಬ್ಯಾಂಕುಗಳು ಸಾಲ ನೀಡಲು ಹಿಂದೇಟು ಹಾಕುತ್ತಿರುವುದು, ಕಟ್ಟಡ ನಿರ್ಮಾಣ ವೆಚ್ಚದ ಏರಿಕೆ, ಅನುದಾನದ ಮಿತಿ, ಜಮೀನಿನ ಅಲಭ್ಯತೆ ಮತ್ತಿತರರ ಕಾರಣಗಳಿಂದ ವಸತಿ ಯೋಜನೆಗಳನ್ನು ಸಕಾಲಕ್ಕೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿ ಈಗಲೂ ರಾಜ್ಯದಲ್ಲಿ ಒಟ್ಟು 39 ಲಕ್ಷ ವಸತಿ ಮತ್ತು ನಿವೇಶನ ರಹಿತರು ಇದ್ದಾರೆ.

2022-23ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಗಳಿಗೆ ಸರಕಾರ 3,637 ಕೋಟಿ ರೂ. ಅನುದಾನ ಒದಗಿಸಿದೆ. ಈ ಪೈಕಿ 2,341 ಕೊಟಿ ರೂ. ಬಿಡುಗಡೆ ಮಾಡಲಾಗಿದ್ದು, ಹಿಂದಿನ ಉಳಿಕೆ ಅನುದಾನ ಸೇರಿ 2023ರ ಜನವರಿ ಅಂತ್ಯಕ್ಕೆ 2,344 ಕೋಟಿ ರೂ. ವೆಚ್ಚ ಮಾಡಲಾಗಿದೆ. 2022ರ ಅಂತ್ಯಕ್ಕೆ 93 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. 1,099 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅದೇ ರೀತಿ ಕಳೆದ 10 ವರ್ಷಗಳಲ್ಲಿ ವಿವಿಧ ಗ್ರಾಮೀಣ ಮತ್ತು ನಗರ ವಸತಿ ಯೋಜನೆಗಳಡಿ 47 ಲಕ್ಷ ಮನೆಗಳನ್ನು ನಿರ್ಮಿಸಿ, 3.57 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಈ ಹತ್ತು ವರ್ಷಗಳಲ್ಲಿ 38 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೂ, ಪ್ರತಿಯೊಬ್ಬರಿಗೂ ಸೂರು ಎಂಬ ಕನಸು ನನಸಾಗಿಲ್ಲ. ಈಗಲೂ 39 ಲಕ್ಷ ಜನರಿಗೆ ತಲೆ ಮೇಲೆ ಸೂರಿಲ್ಲ, ನೆಲದ ಮೇಲೆ ನೆಲೆ ಇಲ್ಲ.

Advertisement

ಒಟ್ಟು 39.19 ಲಕ್ಷ ವಸತಿ ರಹಿತರು
ಸರಕಾರದ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ 18.71 ಲಕ್ಷ ವಸತಿ ರಹಿತರು, 7.19 ಲಕ್ಷ ನಿವೇಶನ ರಹಿತರು ಸೇರಿ 25.90 ಲಕ್ಷ ವಸತಿ/ನಿವೇಶನ ರಹಿತರು ಇದ್ದಾರೆ. ಅದೇ ರೀತಿ ನಗರ ಪ್ರದೇಶದಲ್ಲಿ 3.02 ಲಕ್ಷ ವಸತಿ ರಹಿತರು, 10.27 ಲಕ್ಷ ನಿವೇಶನ ರಹಿತರು ಸೇರಿ ಒಟ್ಟು 13.29 ವಸತಿ/ನಿವೇಶನ ರಹಿತರು ಇದ್ದಾರೆ.

ಸೂರಿನ ಕನಸಿಗೆ ವಿಘ್ನಗಳೇನು?
– ಸರಕಾರವು ಪ್ರತಿ ವರ್ಷ ಬಜೆಟ್‌ನಲ್ಲಿ ಒದಗಿಸುವ ಅನುದಾನದ ಮಿತಿಯೊಳಗೆ ವಸತಿ ಸೌಲಭ್ಯ ಒದಗಿಸಬೇಕಾಗಿರುವುದರಿಂದ ಏಕಕಾಲಕ್ಕೆ ಎಲ್ಲರಿಗೂ ವಸತಿ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ.
– ನಗರ ಪ್ರದೇಶದಲ್ಲಿ ಬಹುತೇಕ ಕುಟುಂಬಗಳಿಗೆ ತಾವೇ ಸ್ವತಃ ಮನೆ ಕಟ್ಟಿಕೊಳ್ಳಲು ನಿವೇಶನ ಹೊಂದಿಲ್ಲದಿರುವುದು.
– ಮನೆ ನಿರ್ಮಾಣಕ್ಕೆ ಬ್ಯಾಂಕುಗಳು ಬಡ ಫ‌ಲಾನುಭವಿಗಳಿಗೆ ಸಾಲ ಸಾಲ ಸೌಲಭ್ಯ ನೀಡಲು ಆಸಕ್ತಿ ತೋರದೇ ಇರುವುದು.
– ಕಟ್ಟಡ ನಿರ್ಮಾಣ ವೆಚ್ಚ ದಿನೇ ದಿನೇ ಹೆಚ್ಚಾಗುತ್ತಿರುವುದಿರಂದ ಬಡ ಕುಟುಂಬಗಳು ಮನೆ ಕಟ್ಟಿಕೊಳ್ಳಲು ಮುಂದೆ ಬರದೇ ಇರುವುದು.
– ಕೆಲವು ಕುಟುಂಬಗಳು ಅರಣ್ಯ ಪ್ರದೇಶದಲ್ಲಿ ಕಂದಾಯ ಜಮೀನಿನಲ್ಲಿ ಒತ್ತುವರಿ ಪ್ರದೇಶದಲ್ಲಿ ನಿವೇಶನ ಹೊಂದಿದ್ದು, ನಿವೇಶನಕ್ಕೆ ಸಂಬಂಧಿಸಿದ ಹಕ್ಕುಪತ್ರ, ಕ್ರಯಪತ್ರ ದಾಖಲೆಗಳನ್ನು ಹೊಂದಿರುವುದಿಲ್ಲ.
– ಬಡ ಕುಟುಂಬಗಳಿಗೆ ವಸತಿ/ನಿವೇಶನ ಸೌಲಭ್ಯ ಒದಗಿಸಲು ನಗರ ಪ್ರದೇಶದಲ್ಲಿ ಸರ್ಕಾರಿ ಜಮೀನು ಅಥವಾ ಕಡಿಮೆ ದರದಲ್ಲಿ ಖಾಸಗಿ ಜಮೀನು ಲಭ್ಯವಿಲ್ಲದಿರುವುದು.
– ಬಹುತೇಕ ಕುಟುಂಬ ಬಹುಮಹಡಿ ಮಾದರಿಯ ವಸತಿ ಸಂಕೀರ್ಣಗಳನ್ನು ಒಪ್ಪದಿರುವುದು. ಫ‌ಲಾನುಭವಿಗಳ ವಂತಿಗೆ ಭರಿಸಲು ಮುಂದೆ ಬರದಿರುವುದು.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next