Advertisement
ಕೊಣಾಜೆ, ಕುಂಜತ್ತಬೈಲ್ ಹಾಗೂ ಚೇಳ್ಯಾರು ಗ್ರಾಮದಲ್ಲಿ ಹೊಸ ಲೇಔಟ್ ಅಭಿವೃದ್ಧಿ ಯೋಜನೆಗೆ ಮುಡಾ ಈ ಹಿಂದೆ ನಿರ್ಧರಿಸಿತ್ತು. ಆದರೆ ಮೂರು ಯೋಜನೆಗಳು ಬೇರೆ ಬೇರೆ ಹಂತದಲ್ಲಿ ಕುಂಟುತ್ತಾ ಸಾಗುತ್ತಿದೆ.
Related Articles
Advertisement
ಚೇಳ್ಯಾರು ಗ್ರಾಮದಲ್ಲಿ 45 ಎಕರೆ ಜಮೀನಿನಲ್ಲಿ ಬಡಾವಣೆಗೆ ವಿಸ್ತೃತ ಯೋಜನ ವರದಿಯನ್ನು ಅನು ಮೋದನೆಗಾಗಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಅದು ಒಪ್ಪಿಗೆ ಪಡೆಯದೆ ಮರು ಟೆಂಡರ್‌ಗೆ ಸರಕಾರ ಸೂಚಿಸಿದೆ. ಹೀಗಾಗಿ ಸರಕಾರದ ಅನುಮೋದನೆಗಾಗಿ ಚೇಳ್ಯಾರು ಗ್ರಾಮದ ಬಡಾವಣೆ ಅಭಿವೃದ್ಧಿ ಕಾಯುತ್ತಿದೆ. ಇನ್ನು ಸರಕಾರದ ಅನುಮೋದನೆ ದೊರೆತು, ಕಾಮಗಾರಿ ಪೂರ್ಣವಾಗಲು ಎಷ್ಟು ತಿಂಗಳು ಬೇಕು ಎಂಬುದಕ್ಕೆ ಉತ್ತರವಿಲ್ಲ. ಇಲ್ಲಿ 709 ನಿವೇಶನಗಳು ದೊರೆಯುವ ಸಾಧ್ಯತೆಯಿದೆ.
ಮುಡಾ ನಿಕಟಪೂರ್ವ ಅಧ್ಯಕ್ಷ ರವಿಶಂಕರ ಮಿಜಾರು ಅವರು “ಸುದಿನ’ ಜತೆಗೆ ಮಾತನಾಡಿ, “ಮುಡಾದಿಂದ ವಸತಿ ಬಡಾವಣೆ ಯೋಜನೆಯನ್ನು ಕೆಲವು ಸಮಯದ ಹಿಂದೆಯೇ ಆರಂಭಿಸಿತ್ತು. ಕೊಣಾಜೆ, ಕುಂಜತ್ತಬೈಲ್ ಬಡಾವಣೆ ಕಾಮಗಾರಿಗೆ ಚಾಲನೆಯೂ ದೊರಕಿತ್ತು. ರಸ್ತೆ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಸಹಿತ ಎಲ್ಲ ವಿಧದ ಮೂಲ ಸೌಕರ್ಯ ಅಭಿವೃದ್ಧಿಗೆ ಇಲ್ಲಿ ಗಮನಹರಿಸಲಾಗುತ್ತದೆ. ಸದ್ಯ ನಿಧಾನ ಹಂತದಲ್ಲಿರುವ ಮೂರು ಯೋಜನೆಗೆ ವೇಗ ನೀಡಬೇಕಾದ ಅಗತ್ಯವಿದೆ’ ಎನ್ನುತ್ತಾರೆ.
ತಿಂಗಳೊಳಗೆ ಕೊಣಾಜೆ ಬಡಾವಣೆ ರೆಡಿ
ಕೊಣಾಜೆಯ 13.11 ಎಕರೆ ಜಮೀನಿನಲ್ಲಿ 10.21 ಕೋ.ರೂ. ಬಡಾವಣೆ ಅಭಿವೃದ್ಧಿಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗಿತ್ತು. ಕೆಲವು ವರ್ಷಗಳಿಂದ ಈ ಬಗ್ಗೆ ಚರ್ಚೆಯೂ ನಡೆಯುತ್ತಿತ್ತು. ಬಡಾವಣೆಯಲ್ಲಿ 135 ನಿವೇಶನಗಳಿವೆ. ಕೊರೊನಾ ಕಾರಣದಿಂದ ಕಾಮಗಾರಿ ಪೂರ್ಣವಾಗಿ ನಡೆಸಲು 2 ವರ್ಷದಿಂದ ಸಾಧ್ಯವಾಗಿರಲಿಲ್ಲ. ಸದ್ಯ ಶೇ.80ರಷ್ಟು ಕಾಮಗಾರಿ ಪೂರ್ಣವಾಗಿದ್ದು, ತಿಂಗಳೊಳಗೆ ಜನರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳುವ ಬಗ್ಗೆ ಮುಡಾ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಕಾಮಗಾರಿಗೆ ವೇಗ ನೀಡಲು ಆದ್ಯತೆ ಮುಡಾ ವತಿಯಿಂದ ಮೂರು ಕಡೆಗಳಲ್ಲಿ ಹೊಸ ಲೇಔಟ್ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ. ಇದರಲ್ಲಿ ಕೊಣಾಜೆ ಬಡಾವಣೆ ಕಾಮಗಾರಿ ಬಹುತೇಕ ಪೂರ್ಣವಾಗಿದೆ. ಕುಂಜತ್ತಬೈಲ್ ಬಡಾವಣೆ ನಿರ್ಮಾಣ ಯೋಜನೆಯನ್ನು ತುರ್ತಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. –ಡಾ| ಭಾಸ್ಕರ್ ಎನ್., ಆಯುಕ್ತರು, ಮುಡಾ
-ದಿನೇಶ್ ಇರಾ