Advertisement
ಈ ವರ್ಷದಿಂದಲೇ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾದರಿಯಲ್ಲಿಯೇ ಉನ್ನತ ಶಿಕ್ಷಣ ಅಧ್ಯಯನಕ್ಕಾಗಿ ಸರಕಾರ ಹೊಸದಾಗಿ “ವಸತಿಯುತ ಪದವಿ ಕಾಲೇಜು’ ಆರಂಭಕ್ಕೆ ನಿರ್ಧರಿಸಿದೆ. ಬರುವ ತಿಂಗಳು ಜುಲೈನಲ್ಲಿ 16 ವಸತಿ ಸಹಿತ ಪದವಿ ಕಾಲೇಜುಗಳು ತಲೆಯೆತ್ತಲಿವೆ.
ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಶೇಕಡಾ 24 ರಷ್ಟಿದ್ದು, ಕರ್ನಾಟಕದಲ್ಲಿ ಈ ಪ್ರಮಾಣ ಶೇಕಡಾ 27 ರಷ್ಟಿದೆ. ಆದರೆ, ಹೈದರಾಬಾದ್ ಕರ್ನಾಟಕದ ಕಲಬುರಗಿ ಜಿಲ್ಲೆ ಹೊರತು ಪಡಿಸಿ, ಐದು ಜಿಲ್ಲೆಗಳು ಸೇರಿದಂತೆ ರಾಜ್ಯದ 16 ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ. ಈ ಕುರಿತು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಬಳ್ಳಾರಿ ವಿಶ್ವ ವಿದ್ಯಾಲಯದ ಕುಲಪತಿಯಿಂದ ಸಮೀಕ್ಷೆ ನಡೆಸಿದ್ದು, ಯಾದಗಿರಿ ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಶೇ.4ಕ್ಕಿಂತಲೂ ಕಡಿಮೆ ಇದೆ.
Related Articles
Advertisement
ರಾಜ್ಯ ಸರ್ಕಾರ ಹೈದರಾಬಾದ್ ಕರ್ನಾಟಕದ ಬಳ್ಳಾರಿ ಹೊರತು ಪಡೆಸಿ ಐದು ಜಿಲ್ಲೆಗಳು, ಚಾಮರಾಜನಗರ, ಕೋಲಾರ, ಚಿತ್ರದುರ್ಗ, ಹಾವೇರಿ ಹಾಗೂ ವಿಜಯಪುರ ಜಿಲ್ಲೆಗಳ 10 ಕಡೆಗಳಲ್ಲಿ ವಸತಿ ಪದವಿ ಕಾಲೇಜುಗಳನ್ನು ತೆರೆಯಲಿದೆ. ಇದಲ್ಲದೆ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರತ್ಯೇಕವಾಗಿ ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಆರು ವಸತಿ ಸಹಿತ ಪದವಿ ಕಾಲೇಜುಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಪ್ರತಿ ಕಾಲೇಜಿಗೂ ಸುಮಾರು 20 ರಿಂದ 25 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಇದೇ ಶೈಕ್ಷಣಿಕ ವರ್ಷದಿಂದ ತರಗತಿ ಆರಂಭಿಸಲು ನಿರ್ಧರಿಸಿದೆ.
ಪ್ರತಿ ಕಾಲೇಜು ಸುಮಾರು 10 ಎಕರೆ ಪ್ರದೇಶದಲ್ಲಿ ಆರಂಭವಾಗಲಿದ್ದು, ಕಾಲೇಜು ಕಟ್ಟಡ, ವಸತಿ ನಿಲಯ, ಗ್ರಂಥಾಲಯ, ಆಟದ ಮೈದಾನ, ಪ್ರಯೋಗಾಲಯ ಸೇರಿ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಲು ಇಲಾಖೆ ನಿರ್ಧರಿಸಿದೆ. ಪ್ರತಿ ವಸತಿ ಕಾಲೇಜಿನಲ್ಲಿ ಕನಿಷ್ಠ 700 ರಿಂದ ಒಂದು ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶ ಹಾಗೂ ವಸತಿ ವ್ಯವಸ್ಥೆ ಕಲ್ಪಿಸುವ ಗುರಿ ಹೊಂದಲಾಗಿದೆ. ಆರಂಭದ ಎರಡು ವರ್ಷ ಕಟ್ಟಡ ಹಾಗೂ ಹಾಸ್ಟೆಲ್ ನಿರ್ಮಿಸಲು ಸಮಯಾವಕಾಶ ಬೇಕಿರುವುದರಿಂದ ಎರಡು ವರ್ಷ ಬಾಡಿಗೆ ಕಟ್ಟಡಗಳಲ್ಲಿ ಕಾಲೇಜು ನಡೆಸುವ ನಿರ್ಧಾರಕ್ಕೆ ಬಂದಿದೆ.
ಉನ್ನತ ಶಿಕ್ಷಣ ಇಲಾಖೆ ಈಗಾಗಲೇ ವಸತಿ ಕಾಲೇಜು ಆರಂಭ ಮಾಡುವ ಪ್ರಸ್ತಾವನೆ ಸಿದ್ದ ಪಡಿಸಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು, ಜುಲೈನಿಂದಲೇ ಕಾಲೇಜುಗಳನ್ನು ಆರಂಭಿಸಲು ಇಲಾಖೆ ತೀರ್ಮಾನಿಸಿದೆ. ವಸತಿ ಕಾಲೇಜ್ ಪ್ರವೇಶ ಪಡೆಯಲು ಈಗಿರುವ ಪ್ರವೇಶಾತಿ ನಿಯಮಗಳಂತೆಯೇ ಮೆರಿಟ್ ಮತ್ತು ಮೀಸಲಾತಿ ನಿಯಮಗಳ ಅನ್ವಯ ಪ್ರವೇಶ ದೊರೆಯಲಿದೆ. ಆಯಾ ಜಿಲ್ಲೆಗಳು ಒಳಪಡುವ ವಿಶ್ವ ವಿದ್ಯಾಲಯದ ವ್ಯಾಪ್ತಿಗೇ ಈ ಕಾಲೇಜುಗಳು ಒಳಪಡಲಿವೆ.
ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಪ್ರಮಾಣ ನೋಡಿದರೆ, ನಮ್ಮ ರಾಜ್ಯ ಶೇಕಡಾ 3 ರಷ್ಟು ಮುಂದಿದೆ. ಆದರೆ, ಸುಮಾರು ಅರ್ಧದಷ್ಟು ಜಿಲ್ಲೆಗಳು ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇವೆ. ಅಂತಹ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಹೆಚ್ಚಿಸಲು, ವಸತಿ ಸಹಿತ ಪದವಿ ಕಾಲೇಜುಗಳನ್ನು ತೆರೆಯಲು ತೀರ್ಮಾನಿಸಿದ್ದೇವೆ. ರಾಜ್ಯದಲ್ಲಿ ಇದು ಮೊದಲ ಪ್ರಯತ್ನವಾಗಿದೆ. ಮುಂದಿನ ಹತ್ತು ವರ್ಷದಲ್ಲಿ ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಶೇಕಡಾ 40 ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.-ಬಸವರಾಜ್ ರಾಯರಡ್ಡಿ , ಉನ್ನತ ಶಿಕ್ಷಣ ಸಚಿವ. ಉನ್ನತ ಶಿಕ್ಷಣ ಪಡೆಯುವ ಜಿಲ್ಲೆಗಳ ಸರಾಸರಿ
ಯಾದಗಿರಿ 3.42
ಕೊಪ್ಪಳ 11.03
ಚಾಮರಾಜನಗರ 11.66
ಹಾವೇರಿ 15.79
ರಾಯಚೂರು 16.82
ಚಿತ್ರದುರ್ಗ 17.92
ಬೆಂ. ಗ್ರಾಮಾಂತರ 18.78
ಬಳ್ಳಾರಿ 19.83
ಕೊಡಗು 19.98
ಚಿಕ್ಕಮಗಳೂರು 20.46
ಚಿಕ್ಕಬಳ್ಳಾಪುರ 20.64
ಮಂಡ್ಯ 21.83
ಕೋಲಾರ 21.85
ವಿಜಯಪುರ 22.71
ಬೀದರ್ 22.90
ಉತ್ತರ ಕನ್ನಡ 23.03
ಗದಗ 23.39
ದಾವಣಗೆರೆ 24.05
ಬೆಳಗಾವಿ 24.06
ರಾಮನಗರ 24.80
ಬಾಗಲಕೋಟೆ 25.46
ಹಾಸನ 25.87
ತುಮಕೂರು 28.70
ಶಿವಮೊಗ್ಗ 30.04
ಕಲಬುರಗಿ 32.09
ಧಾರವಾಡ 35.91
ಉಡುಪಿ 45.12
ಬೆಂಗಳೂರು 45.49
ಮೈಸೂರು 47.13
ದಕ್ಷಿಣ ಕನ್ನಡ 69.23 – ಶಂಕರ ಪಾಗೋಜಿ