Advertisement
ಪ್ರಸ್ತುತ ಅನೇಕ ಮಹಿಳೆಯರು ಮನೆಯ ಕೆಲಸದ ಜತೆಗೆ ಉದ್ಯೋಗಕ್ಕೂ ತೆರಳುತ್ತಾರೆ. ಅಲ್ಲಿ ರಜೆ, ಸಂಬಳವಿರುತ್ತದೆ. ಆದರೆ ಮನೆ ಕೆಲಸಕ್ಕೆ ಇದ್ಯಾವುದು ಇರುವುದಿಲ್ಲ. ಹೊರಗೆ ದುಡಿಯುವ ಮಹಿಳೆಗೆ ಮನೆಯ ಇತರ ಸದಸ್ಯರು ಅವಳಿಗೆ ಮನೆಕೆಲಸದಲ್ಲಿ ಸಹಾಯ ಮಾಡುತ್ತಾರೆ. ಆದರೆ ಮನೆಯಲ್ಲಿ ಮಾತ್ರ ಕೆಲಸ ಮಾಡುವ ಗೃಹಿಣಿಗೆ ಮನೆಗೆಲಸದಲ್ಲಿ ಯಾರೂ ಸಹಾಯ ಮಾಡುವುದಿಲ್ಲ. ಗಂಡ, ಮಕ್ಕಳು ಮತ್ತು ಮನೆಯವರೆಲ್ಲರ ಆರೈಕೆ, ಲಾಲನೆ ಪಾಲನೆ, ಆಹಾರ ಒದಗಿಸುವ ಕೆಲಸ, ಮನೆಗೆಲಸ ಎಲ್ಲವನ್ನೂ ಮಾಡುವುದರಲ್ಲಿಯೇ ಆಕೆಯ ಸಂಪೂರ್ಣ ಗಮನವಿರುತ್ತದೆ. ಇದರಿಂದ ಆಕೆ ತನ್ನ ಆರೋಗ್ಯವನ್ನು ಸಂಪೂರ್ಣ ನಿರ್ಲಕ್ಷ್ಯಿಸುತ್ತಾಳೆ. ಇದು ನಾನಾ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಉದ್ಯೋಗಕ್ಕೆ ತೆರಳುವ ಮಹಿಳೆಯರಿಗೆ ಜವಾಬ್ದಾರಿ ಹೆಚ್ಚಿರುವುದರಿಂದ ಮಾನಸಿಕ ಒತ್ತಡವನ್ನು ನಿಭಾಯಿಸುವಲ್ಲಿ ವಿಫಲರಾಗುತ್ತಾರೆ. ಈ ಕಾರಣದಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡಲಾರಂಭಿಸುತ್ತವೆೆ. ಮಾನಸಿಕ ನೆಮ್ಮದಿ ಎಲ್ಲ ಆರೋಗ್ಯ ಸಮಸ್ಯೆಗೆ ಮೊದಲ ಔಷಧ. ಆದರೆ ನಿತ್ಯ ಎಲ್ಲರ ಬಗ್ಗೆ ಯೋಚನೆ ಮಾಡಿ ಮಾನಸಿಕವಾಗಿ ಒತ್ತಡ ಅನುಭಸುವ ಗೃಹಿಣಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾಳೆ. ಆ ಕಾರಣದಿಂದ ಒತ್ತಡ ರಹಿತವಾಗಿ ಜೀವನ ಸಾಗಿಸುವ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಮೂಳೆಗಳ ಆರೋಗ್ಯ ರಕ್ಷಣೆ ಬಹಳ ಮುಖ್ಯ
ಮಹಿಳೆಯರು ವಯಸ್ಸಾದಂತೆ ತಮ್ಮ ಮೂಳೆಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಅಸ್ಥಿರಂಧ್ರದ ಸಮಸ್ಯೆ ಅತೀವವಾಗಿ ಮಹಿಳೆಯರನ್ನೇ ಬಾಧಿಸುತ್ತದೆ. ಇದಲ್ಲದೆ ಮಹಿಳೆಯರಲ್ಲಿ ಎಸ್ಟ್ರೋಜಿನ್ ಹಾರ್ಮೋನ್‌ಗಳು ಮೂಳೆಗಳನ್ನು ಸುರಕ್ಷಿತಗೊಳಿಸುತ್ತದೆ. ಆದರೆ ಋತುಬಂಧ ಕೊನೆಗೊಂಡ ಬಳಿಕ ಮೂಳೆಗಳ ಆರೋಗ್ಯದಲ್ಲಿ ಕ್ಷಿಣಿಸಲಾರಂಭಿಸುತ್ತದೆ. ಹೀಗಾಗಿ ಮಹಿಳೆಯರು ತಮ್ಮ ದಿನ ನಿತ್ಯದ ಆಹಾರದಲ್ಲಿ ಮೂಳೆಗಳ ಆರೋಗ್ಯಕ್ಕೆ ಅಗತ್ಯವಾದ ಆಹಾರಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.
ಸ್ತನ ಕ್ಯಾನ್ಸರ್ ಬಗ್ಗೆ ಇರಲಿ ಎಚ್ಚರ
ವಯಸ್ಸು, ಹಾರ್ಮೋನ್ ಅಥವಾ ವಂಶವಾಹಿನಿಯಿಂದ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಇದು ಹೆಚ್ಚಾಗಿ 40 ವರ್ಷದ ಅನಂತರ ಮಹಿಳೆಯರಲ್ಲಿ ಕಂಡುಬರುತ್ತದೆ. ಶೇ. 1ರಷ್ಟು ಪುರುಷರನ್ನು ಕಾಡುತ್ತದೆ. ಕುಟುಂಬದ ಸದಸ್ಯರಿಗೆ ಗರ್ಭಾಶಯ, ಅಂಡಾಶಯ ಹಾಗೂ ದೊಡ್ಡ ಕರುಳಿನ ಕ್ಯಾನ್ಸರ್ ಬಂದಿದ್ದರೆ, ಸ್ತನ ಕ್ಯಾನ್ಸರ್ ಕಂಡುಬರಬಹುದು. ಸ್ತನ ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಂಡಲ್ಲಿ ಕ್ಯಾನ್ಸರ್ ತಜ್ಞರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ.
ವಿಟಮಿನ್ ಡಿ, ಪೊಟ್ಯಾಷಿಯಂ ಮುಖ್ಯ
ಮಹಿಳೆಯರು ವಿಟಮಿನ್ ಡಿ ಹಾಗೂ ಪೊಟ್ಯಾಷಿಯಂ ಇರುವ ಆಹಾರಗಳನ್ನು ಹೆಚ್ಚು ತೆಗೆದುಕೊಳ್ಳಬೇಕು. ಡೈರಿ ಉತ್ಪನ್ನಗಳಾದ ಹಾಲು, ತುಪ್ಪ, ಬೆಣ್ಣೆ, ಹಸುರು ತರಕಾರಿ, ಸೊಪ್ಪು ತರಕಾರಿಗಳನ್ನು ನಿತ್ಯ ಡಯಟ್‌ನಲ್ಲಿ ಸೇರಿಸುವುದು ಮುಖ್ಯ.
Related Articles
ಗೃಹಿಣಿಯರು ಮನೆ, ಗಂಡ, ಮಕ್ಕಳು ಎಂದು ತಮ್ಮ ಆರೋಗ್ಯವನ್ನು ಕಡೆಗಣಿಸುತ್ತಾರೆ. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಮನೆಗೆಲಸದ ಜತೆಗೆ ಆರೋಗ್ಯದ ಕಡೆಗೆ ಗಮನ ಕೊಡಬೇಕಾಗಿರುವುದು ಬಹಳ ಮುಖ್ಯ.
– ಡಾ| ದೀಪಾ ಶೆಣೈ, ವೈದ್ಯರು
Advertisement
ಪ್ರಜ್ಞಾ ಶೆಟ್ಟಿ