ಮಹದೇವಪುರ: ಮನೆಯೊಳಗಿನ ಕಿಟಕಿ ಸ್ವಚ್ಛಗೊಳಿಸುವಾಗ ಮಹಿಳೆಯೊಬ್ಬರು ಕಾಲು ಜಾರಿ 5ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬನಹಳ್ಳಿಯ ಬಿಡಿಎ ವಿಂಧ್ಯಗಿರಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಗುಜರಾತ್ ಮೂಲದ ಖುಷ್ಬು ಅಶೀಷ್ ತ್ರಿವೇದಿ (31) ಮೃತರು. ಡಿ.8ರಂದು ಬೆಳಗ್ಗೆ 11 ಗಂಟೆಗೆ ಖುಷ್ಬು ಮನೆಯ ಒಳಭಾಗದಿಂದ ಟೇಬಲ್ ಮೇಲೆ ನಿಂತು ಕಿಟಕಿಯ ಧೂಳು ಒರೆಸುತ್ತಿದ್ದರು. ಈ ವೇಳೆ ಕಾಲು ಜಾರಿ ಆಯತಪ್ಪಿ ಕಿಟಕಿಯಿಂದ ಕೆಳಗೆ ಬಿದ್ದಿದ್ದಾರೆ. ತಲೆಗೆ ತೀವ್ರ ಗಾಯವಾಗಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಖುಷುº ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ, ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದರು.
ಖುಷ್ಬು ಅವರು, ಇತ್ತೀಚೆಗಷ್ಟೇ ಗುಜರಾತ್ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಆಶೀಷ್ ತ್ರಿವೇದಿಯನ್ನು ಮದುವೆಯಾಗಿದ್ದು, ವಿಂಧ್ಯಾಗಿರಿ ಅಪಾರ್ಟ್ ಮೆಂಟ್‌ನ 5ನೇ ಮಹಡಿಯಲ್ಲಿರುವ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ದುರ್ಘಟನೆ ವೇಳೆ ಪತಿ ಆಶೀಷ್ ತ್ರಿವೇದಿ ಮನೆಯಲ್ಲಿ ಇರಲಿಲ್ಲ.
ಘಟನೆಗೆ ಗ್ರೀಲ್ ಅಳವಡಿಸದಿರುವುದೇ ಕಾರಣ: ಬಿಡಿಎ ನಿರ್ಮಿಸಿರುವ ವಿಂಧ್ಯಾಗಿರಿ ಅಪಾರ್ಟ್ ಮೆಂಟ್‌ನಲ್ಲಿ 18 ಮಹಡಿಯ 750 ಫ್ಲ್ಯಾಟ್‌ಗಳಿವೆ. ಅವರ ಕಿಟಕಿಗಳಿಗೆ ಯಾವುದೇ ಗ್ರೀಲ್‌ಗಳನ್ನು ಅಳವಡಿಸಿಲ್ಲ. ಹೀಗಾಗಿ ಅವಘಡ ಸಂಭವಿಸಿದೆ. ಅಲ್ಲದೆ, ಈ ಅಪಾರ್ಟ್‌ಮೆಂಟ್‌ನಲ್ಲಿ ತುರ್ತು ನಿರ್ಗಮನ ದ್ವಾರ, ಪ್ರಥಮ ಚಿಕಿತ್ಸೆ, ಫೈರ್ ಸೇಪ್ಟಿ, ಇತರೆ ಸುರಕ್ಷತಾ ಕ್ರಮಗಳು ಇಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಈ ದುರ್ಘಟನೆಗೆ ವಿಂಧ್ಯಗಿರಿ ವಸತಿ ಸಮುಚ್ಚಯದ ಅಸೋಸಿಯೇಷನ್‌ನ ನಾರಾಯಣಸ್ವಾಮಿ, ಬಿಡಿಎ ಅಧಿಕಾರಿಗಳಾದ ಎಇಇ ಉದಯ ಕುಮಾರ್, ಇಇ ಮೋಹನ್, ಎಇ ಸುನೀಲ್ ಅವರೇ ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಸುಭಾಷ್‌ಎಂಬವರು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.