ಬೆಂಗಳೂರು: ಮಕ್ಕಳಾಗಲಿಲ್ಲ ಎಂದು ಮನನೊಂದ ಪಶ್ಚಿಮ ಬಂಗಾಳ ಮೂಲದ ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಲಸೂರು ಗೇಟ್ ಠಾಣೆ ವ್ಯಾಪ್ತಿಯ ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಸಂಗೀತಾ ರೂಥ್ (23) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆರು ವರ್ಷಗಳ ಹಿಂದೆ ಸಂಗೀತಾ ನಗರದ ಚಿನ್ನಾಭರಣ ವ್ಯಾಪಾರಿ ನಬೀನ್ ರೂಥ್ ಎಂಬುವವರನ್ನು ವಿವಾಹವಾಗಿದ್ದು, ದಂಪತಿಗೆ ಮಕ್ಕಳಾಗಿರಲಿಲ್ಲ. ಈ ಸಂಬಂಧ ಸಂಗೀತಾ, ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರೂ ಪ್ರಯೋಜನವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದು, ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಲ್ಲಿಯೂ ಚಿಕಿತ್ಸೆ ಫಲಿಸದ ಕಾರಣ ಖನ್ನತೆಗೆ ಒಳಗಾಗಿದ್ದ ಸಂಗೀತಾ, ಮನೆಯಲ್ಲಿ ಯಾರೊಟ್ಟಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ.
ಬುಧವಾರ ಬೆಳಗ್ಗೆ ಪತಿ ನಬೀನ್ ಅಂಗಡಿಗೆ ಹೋಗಿದ್ದು, ಮನೆಯಲ್ಲಿ ಒಬ್ಬರೇ ಇದ್ದ ಸಂಗೀತಾ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ 6 ಗಂಟೆ ಸುಮಾರಿಗೆ ಪತಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಹೂವಿನ ವ್ಯಾಪಾರಿ ಆತ್ಮಹತ್ಯೆ: ಮತ್ತೂಂದು ಪ್ರಕರಣದಲ್ಲಿ ಹೂವಿನ ವ್ಯಾಪಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀರಾಮಪುರದ ನಾಗಪ್ಪ ಬ್ಲಾಕ್‌ನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ನಾಗಪ್ಪ ಬ್ಲಾಕ್ ನಿವಾಸಿ ನಂಜುಂಡ (24) ಆತ್ಮಹತ್ಯೆ ಮಾಡಿಕೊಂಡವರು.
ಪ್ರತಿ ನಿತ್ಯ ಬೀದಿಗಳಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ನಂಜುಂಡ, ಗುರುವಾರ ಕೂಡ ವ್ಯಾಪಾರ ಮಾಡಿಕೊಂಡು ವಾಪಸ್ ಮನೆಗೆ ಬಂದಿದ್ದಾನೆ. ಬಳಿಕ ತಾಯಿ ಬಳಿ ರಾಗಿ ಗಂಜಿ ಮಾಡಿಸಿಕೊಂಡು ಕುಡಿದ್ದಾನೆ. ಕೆಲ ಹೊತ್ತಿನ ಬಳಿಕ ತಾಯಿ ಕಾರ್ಯನಿಮಿತ್ತ ಹೊರ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ನೇಣುಬಿಗಿದುಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದರು.