ಬೆಂಗಳೂರು: “ಇಟ್ ಈಸ್ ಮೈ ಲಾಸ್ಟ್ ವಿಶ್ ಟು ಯೂ… ಪ್ಲೀಸ್ ಟೇಕ್ ಕೇರ್ ಆಫ್ ಮೈ ಚೈಲ್ಡ್…’ ಸಾಫ್ಟ್ವೇರ್ ಪತಿಯ ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಹೊಯ್ಸಳ ನಗರದ ರಶ್ಮಿ (30) ಕುಣಿಕೆಗೆ ಕೊರಳೊಡ್ಡುವ ಕೆಲವೇ ನಿಮಿಷಗಳ ಮುನ್ನ ತನ್ನ ಸಹೋದರಿಗೆ ಕಳುಹಿಸಿದ ಕೊನೆಯ ಸಂದೇಶವಿದು.
ತಿಂಗಾಳಾಂತ್ಯಕ್ಕೆ ಸಾವಿರಾರು ರೂ. ಸಂಬಳ ಪಡೆಯುತ್ತಿದ್ದರೂ ಸಾಫ್ಟ್ವೇರ್ ಇಂಜಿನಿಯರ್ ಪತಿ, ಸತೀಶ್ ನೀಡುತ್ತಿದ್ದ ವರದಕ್ಷಿಣೆ ಕಿರುಕುಳ ತಾಳಲಾರದೆ ಹೊಯ್ಸಳನಗರದ ಸಫಾರಿಯಾ ಅಪಾರ್ಟ್‌ಮೆಂಟ್‌ನ ನಿವಾಸಿ ರಶ್ಮಿ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಶ್ಮಿ ದಂಪತಿಗೆ ಒಂದು ವರ್ಷದ ಗಂಡು ಮಗುವಿದ್ದು, ಕಳೆದ ಕೆಲ ವರ್ಷಗಳಿಂದ ದಂಪತಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು.
ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಮೆರಿಕಾದಲ್ಲಿರುವ ತನ್ನ ಸಹೋದರಿಗೆ “ಟುಡೇ ಈಸ್ ಮೈ ಲಾಸ್ಟ್ ಡೇ. ಇಟ್ ಈಸ್ ಮೈ ಲಾಸ್ಟ್ ವಿಶ್ ಟು ಯೂ… ಪ್ಲೀಸ್ ಟೇಕ್ ಕೇರ್ ಆಫ್ ಮೈ ಚೈಲ್ಡ್’ (ಇಂದು ನನ್ನ ಜೀವನದ ಕೊನೆಯ ದಿನ. ಇದು ನಾನು ನಿಮ್ಮಲ್ಲಿ ನನ್ನ ಕಡೆಯ ಕೋರಿಕೆ, ದಯವಿಟ್ಟು ನನ್ನ ಮಗುವನ್ನು ಚನ್ನಾಗಿ ನೋಡಿಕೊಳ್ಳಿ) ಎಂದು ಸಂದೇಶ ಕಳುಹಿಸಿ ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಂಗಿ ಕಳುಹಿಸಿದ ಸಂದೇಶ ನೋಡಿ ಆತಂಕಗೊಂಡ ಸಹೋದರಿ ಈ ವಿಚಾರವನ್ನು ಆಕೆಯ ಪತಿ ಮತ್ತು ಸಂಬಂಧಿಕರಿಗೆ ತಿಳಿಸಿದ್ದಾರೆ. ಆದರೆ, ಸಂಬಂಧಿಕರೊಬ್ಬರು ಮನೆಯ ಬಳಿ ಬಂದು ನೋಡುವಷ್ಟರಲ್ಲಿ ರಶ್ಮಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪತಿಯ ಕಿರುಕುಳವೇ ಕಾರಣ: ಕೋಲಾರ ಮೂಲದ ಸತೀಶ್ ಹಾಗೂ ಚಿಕ್ಕಬಳ್ಳಾಪುರ ಸಮೀಪದ ನಂದಿಗ್ರಾಮದ ಬಿಇ ಪದವೀಧರೆ ರಶ್ಮಿ, ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮದುವೆ ವೇಳೆ ಸತೀಶ್‌ಗೆ ವರದಕ್ಷಿಣೆ ರೂಪದಲ್ಲಿ ರಶ್ಮಿ ಮನೆಯವರು ಚಿನ್ನಾಭರಣ ಹಾಗೂ ಹಣ ನೀಡಿದ್ದರು.
ಆದರೆ, ಮದುವೆ ಬಳಿಕವೂ ಸತೀಶ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಮಗಳು ಹಲವು ಬಾರಿ ನೋವು ತೋಡಿಕೊಂಡಿದ್ದಳು. ಪತಿಯ ಕಿರುಕುಳಕ್ಕೆ ಬೇಸತ್ತು ಒಂದು ತಿಂಗಳ ಹಿಂದೆ ಆಕೆಯೂ ಕೆಲಸಕ್ಕೆ ಸೇರಿಕೊಂಡಿದ್ದಳು. ಮಗಳ ಸಾವಿಗೆ ಅಳಿಯನ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ರಶ್ಮಿ ಅವರ ತಾಯಿ ಭಾಗ್ಯಮ್ಮ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ವರದಕ್ಷಿಣೆ ಕಿರುಕುಳ ಆರೋಪ ( 304 ಬಿ) ಆರೋಪದ ಅಡಿಯಲ್ಲಿ ಸತೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.