ಸಿರವಾರ: ಪಟ್ಟಣದ ವಾಲ್ಮೀಕಿ ವೃತ್ತ ಮತ್ತು ಎಪಿಎಂಸಿ ರಸ್ತೆಯ ಅಗಲೀಕರಣವು ಶುಕ್ರವಾರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಮೇಶ ಬಡಿಗೇರ ನೇತೃತ್ವದಲ್ಲಿ ನಡೆಯಿತು.
ಬೆಳಗ್ಗೆ ಪ್ರಾರಂಭವಾದ ಅಗಲೀಕರಣವು ವಾಲ್ಮೀಕಿ ವೃತ್ತದಿಂದ ಬಾಪೂಜಿ ಶಾಲೆಯವರೆಗೆ ರಸ್ತೆಯ 20 ಲಕ್ಷ ಅನುದಾನದ ಕಾಮಗಾರಿಗೆ 16 ಅಡಿ ಮತ್ತು ಎಪಿಎಂಸಿ ಮಾರ್ಗದಿಂದ ಮಾರೆಮ್ಮ ದೇವಸ್ಥಾನದವರೆಗೆ 50 ಲಕ್ಷ ಅನುದಾನದ ರಸ್ತೆ ಹಾಗೂ ಚರಂಡಿ ಕಾಮಗಾರಿಗಾಗಿ 32 ಅಡಿವರೆಗೆ ವಿಸ್ತರಿಸಲು ಜೆಸಿಬಿಯಿಂದ ರಸ್ತೆಯ ಪಕ್ಕದಲ್ಲಿರುವ ಮನೆಗಳ ತೆರವು ಕಾರ್ಯ ನಡೆಯಿತು.
ಶುಕ್ರವಾರ ಬೆಳಗ್ಗೆ ಜೆಸಿಬಿ ಗರ್ಜನೆ ಆರಂಭವಾಗುತ್ತಿದ್ದಂತೆ ಸ್ಥಳೀಯರು ತರಾತುರಿಯಲ್ಲಿ ಮನೆಯಲ್ಲಿದ್ದ ಸಾಮಾನುಗಳನ್ನು ಹೊರತೆಗೆಯುವ ಕಾರ್ಯ ಮಾಡಿದರು. ಇನ್ನು ಕೆಲವರು ವಾಸಿಸಲು ಮನೆಯಿಲ್ಲದಂತಾಗುತ್ತದೆ ಎಂದು ಅಧಿಕಾರಿಗಳಲ್ಲಿ ಅಳಲು ತೋಡಿಕೊಂಡರು.
ತೆರವು ಕಾರ್ಯಚರಣೆಗೆ ಮಾನ್ವಿ ಸಿಪಿಐ ಚಂದ್ರಶೇಖರ ನಾಯಕ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು. ಸ್ಥಳಕ್ಕೆ ಜಿಲ್ಲಾಧಿಕಾರಿ ಕಚೇರಿ ಕಾರ್ಯಪಾಲಕ ಅಧಿಕಾರಿ ಗೋಪಿಶೆಟ್ಟಿ ಮಲ್ಲಿಕಾರ್ಜುನ ಅವರು ಭೇಟಿ ನೀಡಿ ತೆರವು ಕಾರ್ಯವನ್ನು ಪರಿಶೀಲಿಸಿದರು.
ಪಟ್ಟಣ ಪಂಚಾಯತಿ ಕಂದಾಯ ಅಧಿಕಾರಿ ವಿಶ್ವಪ್ರತಾಪ ಅಲೆಗ್ಸೆಂಡರ್, ಜೆಇ ಶರಣಬಸವ, ಮಾನ್ವಿ ಪಿಎಸ್‌ಐ ರಂಗಪ್ಪ, ಸಿರವಾರ ಪಿಎಸ್‌ಐ ಸುಜಾತ ನಾಯಕ, ಕವಿತಾಳ ಪಿಎಸ್‌ಐ ಅಮರೇಶ ಕುಂಬಾರ ಸೇರಿದಂತೆ ಪಟ್ಟಣ ಪಂಚಾಯತಿ ಸಿಬ್ಬಂದಿ ಇದ್ದರು.