ಪಣಜಿ: ಕೋವಿಡ್ ಮಹಾಮಾರಿಯಿಂದಾಗಿ ಭಾರಿ ಹೊಡೆತ ಕಂಡಿದ್ದ ಗೋವಾ ಪ್ರವಾಸೋದ್ಯಮ ಇದೀಗ ಭಾರಿ ತೇಜಿಯಿಂದ ಮುನ್ನುಗ್ಗುತ್ತಿದೆ. ಸರ್ಕಾರವು ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿರುವುದರಿದ ಕಳೆದ ಹಲವು ದಿನಗಳಿಂದ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಪ್ರವಾಸಿಗರ ಪ್ರವಾಹವೇ ಹರಿದುಬರುತ್ತಿದೆ.
ಕಳೆದ ವಾರದಿಂದ ಗೋವಾದ ಬಹುತೇಕ ಪ್ರವಾಸಿ ತಾಣಗಳು ಹೌಸ್‍ಫುಲ್ ಆಗಿದೆ. ಪಣಜಿ, ಪರ್ವರಿ ಭಾಗದಲ್ಲಂತೂ ಪ್ರತಿದಿನ ಭಾರಿ ವಾಹನ ದಟ್ಟಣೆಯುಂಟಾಗುತ್ತಿದೆ.
ಸದ್ಯ ದೀಪಾವಳಿಯ ರಜೆಯಿರುವುದರಿಂದ ದೇಶಾದ್ಯಂತದ ಪ್ರವಾಸಿಗರು ಬೃಹತ್ ಸಂಖ್ಯೆಯಲ್ಲಿ ಗೋವಾಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯದ ಬೀಚ್‍ಗಳು, ಕ್ಯಾಸಿನೊ, ಹಾಗೂ ಇತರ ಪ್ರವಾಸಿ ತಾಣಗಳು ಪ್ರವಾಸಿಗರಿಂದ ಭರ್ತಿಯಾಗಿದೆ. ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ದೆಹಲಿ, ರಾಜಸ್ಥಾನ ರಾಜ್ಯಗಳ ಪ್ರವಾಸಿಗರು ಬೃಹತ್ ಸಂಖ್ಯೆಯಲ್ಲಿ ಗೋವಾಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ: ಅಲ್ಲಿ ಯಾರಿಗೂ ಕನ್ನಡ ಗೊತ್ತಿರಲಿಲ್ಲ : ದೆಹಲಿಯಲ್ಲಾದ ಅನುಭವ ಬಿಚ್ಚಿಟ್ಟ ವೃಕ್ಷದೇವತೆ
ಪಣಜಿ ಚರ್ಚ್, ದೋನಾಪಾವುಲ್, ಮೀರಾಮಾರ್, ಓಲ್ ಗೋವಾ ಚರ್ಚ್, ಕಲಂಗುಟ್, ಬಾಗಾ, ಕೋಲ್ವಾ, ಬೀಚ್‍ಗಳಲ್ಲಿ ಪ್ರವಾಸಿಗರ ದಂಡು ಕಂಡುಬರುತ್ತಿದೆ. ಪಣಜಿಯ ಕ್ಯಾಸಿನೊ ಮತ್ತು ಜಲಕ್ರೀಡೆಗೆ ಕೂಡ ಹೆಚ್ಚಿನ ಪ್ರವಾಸಿಗರ ಆಗಮಿಸುತ್ತಿದ್ದಾರೆ.