ಮೊದಲ ತಿಂಗಳ ಸಂಬಳ ಸಿಕ್ಕ ದಿನವೇ ಡೈರಿಯೊಂದನ್ನು ಖರೀದಿಸಿ, ಡೈರಿಯ ಬೆಲೆ- 60 ರೂ. ಅಂತಲೇ ಲೆಕ್ಕ ಬರೆಯಲು ಶುರು ಮಾಡಿದೆ. ಮೊದಲೆರಡು ತಿಂಗಳು ಪಿನ್ನು-ಹೇರ್‌ಪಿನ್‌ನ ಲೆಕ್ಕವನ್ನೂ ಬರೆದರೂ, ಕ್ರಮೇಣ ಲೆಕ್ಕ ಬರೆಯುವ ಅಭ್ಯಾಸ ತಪ್ಪಿ ಹೋಯ್ತು.
ಮೊನ್ನೆ ಮಂಡನೆಯಾದ ಕೇಂದ್ರ ಬಜೆಟ್‌ನ ಬಗ್ಗೆ ಎಲ್ಲರಿಗೂ ಭಾರೀ ಕುತೂಹಲ ಮೂಡಿತ್ತು. ಪ್ರತಿ ವರ್ಷವೂ ಪುರುಷರ ಪಾಲಾಗುತ್ತಿದ್ದ ಹಣಕಾಸು ಸಚಿವರ ಪಟ್ಟ ಈ ಸಲ ಮಹಿಳೆಯೊಬ್ಬರ ಕೈಯಲ್ಲಿದ್ದುದೇ ಅದಕ್ಕೆ ಕಾರಣ. ಯಾಕಂದ್ರೆ, ಹಣದ ವಿಷಯದಲ್ಲಿ ಹೆಂಗಸರಿಗೊಂದು ಶಿಸ್ತಿದೆ. ಅವರ ಮನಿ ಮ್ಯಾನೇಜ್‌ಮೆಂಟ್ ಬಗ್ಗೆ ಹೇಳುವುದೇ ಬೇಡ. ಸಾಸಿವೆ ಡಬ್ಬಿಯಲ್ಲಿ ಪುಡಿಗಾಸು ಕೂಡಿಟ್ಟು, ಆಪತ್ತಿನ ಕಾಲಕ್ಕೆ ಗಂಡನಿಗೆ ನೆರವಾಗುವವಳು ಮನೆಯೊಡತಿಯೇ. ಹಾಗಾಗಿ, ಬೊಕ್ಕಸದ ಹಣವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಗೆ ಮ್ಯಾನೇಜ್ ಮಾಡ್ತಾರೆ ಅಂತ ಎಲ್ಲರಿಗೂ ಕುತೂಹಲವಿತ್ತು.
ನಿರ್ಮಲಾ ಅವರು ಬಜೆಟ್ ಮಂಡಿಸುತ್ತಿರುವಾಗ, ಟಿ.ವಿ. ಎದುರು ಕೂತಿದ್ದ ನನ್ನಜ್ಜ -“ಬಜೆಟ್ ದೇಶದ್ದಿರಲಿ, ಮನೆಯದ್ದಿರಲಿ; ದುಡ್ಡಿನ ವಿಷಯದಲ್ಲಿ ಹೆಂಗಸರೇ ಜಾಣರಪ್ಪಾ!’ ಅಂತ ಹೇಳಿದರು. ಅವರು ಹಾಗೆ ಹೇಳಲೂ ಕಾರಣವಿತ್ತು. ಕಡಿಮೆ ಸಂಬಳದ ಮಾಸ್ತರರಾಗಿದ್ದ ಅಜ್ಜನ ದುಡ್ಡಿನ ಲೆಕ್ಕಾಚಾರವೆಲ್ಲಾ ಅಜ್ಜಿಯದ್ದೇ ಆಗಿತ್ತಂತೆ. ಸಂಬಳ ಬಂದ ತಕ್ಷಣ, ಮನೆಯ ಖರ್ಚಿಗೆ ಅಂತ ಸ್ವಲ್ಪ ಹಣವನ್ನು ಅಜ್ಜಿಯ ಕೈಗಿಟ್ಟು ಅಜ್ಜ ನಿರಾಳರಾಗುತ್ತಿದ್ದರಂತೆ. ಯಾಕಂದ್ರೆ, ಅಜ್ಜಿ, ಯಾವತ್ತೂ ಜಾಸ್ತಿ ಹಣ ಬೇಕೆಂದು ಅಜ್ಜನನ್ನು ಕೇಳುತ್ತಿರಲಿಲ್ಲವಂತೆ. ಗಂಡ ಕೊಟ್ಟ ಹಣದಲ್ಲೇ, ದಿನಸಿ, ಮಕ್ಕಳ ಶಾಲೆಯ ಖರ್ಚು, ಹಬ್ಬ-ಹರಿದಿನಗಳಲ್ಲಿ ಅಕ್ಕ-ತಂಗಿಯರಿಗೆ ಕೊಡುವ ಬಾಗಿನ ಇತ್ಯಾದಿಗಳನ್ನು ಸರಿದೂಗುವ ಜಾಣ್ಮೆ ಅನಕ್ಷರಸ್ಥ ಅಜ್ಜಿಗಿತ್ತು. ಮಕ್ಕಳಿಗೆ ಬಟ್ಟೆ ಕೊಳ್ಳುವಾಗ, ಅಳತೆಗಿಂತ ಒಂದು ಸೈಜು ದೊಡ್ಡದನ್ನೇ ಖರೀದಿಸುತ್ತಿದ್ದರಂತೆ. ದೊಗಲೆ ಬಟ್ಟೆಗೇ ಮೈಯಳತೆಗೆ ಹೊಲಿಗೆ ಹಾಕಿ, ಮಕ್ಕಳು ಬೆಳೆದಂತೆ ಹೊಲಿಗೆ ಬಿಚ್ಚಿದರಾಯ್ತು ಅನ್ನೋದು ಅವರ ಯೋಚನೆ. ಹಳೆಯ ಕ್ಯಾಲೆಂಡರ್‌ಗಳಿಂದ ಮಕ್ಕಳ ಪುಸ್ತಕಕ್ಕೆ ಬೈಂಡ್ ಮಾಡುವುದು, ಹಾಲು-ದಿನಸಿ-ತರಕಾರಿ ಕೊಳ್ಳುವಾಗಲೂ ಚೌಕಾಸಿ ಮಾಡುವುದು ಹೀಗೆ, ಈಗಿನವರು ಕಂಜೂಸ್‌ತನ ಅಂತ ಯಾವುದಕ್ಕೆ ಹೇಳುತ್ತಾರೋ, ಅವೆಲ್ಲವೂ ನಮ್ಮಜ್ಜಿಯ ಮನಿ ಮ್ಯಾನೇಜ್‌ಮೆಂಟ್ ತಂತ್ರಗಳಾಗಿದ್ದವು. ಹಾಗಾಗೇ, ಅಜ್ಜನ ಕೈಯಲ್ಲಿ ಕಾಸಿಲ್ಲ ಅಂತಾದಾಗ, ಅಜ್ಜಿಯೇ ಗಂಡನಿಗೆ ದುಡ್ಡು ಕೊಟ್ಟದ್ದೂ ಇದೆಯಂತೆ.
ಅಜ್ಜಿಯ ಈ ಎಲ್ಲ ಗುಣಗಳೂ ಅಮ್ಮನಿಗೆ ರಕ್ತದಲ್ಲೇ ಬಂದಿದೆ. ಆಕೆಯೂ ಅಷ್ಟೇ, ದುಡ್ಡಿನ ವಿಷಯದಲ್ಲಿ ಬಹಳ ಕಟ್ಟುನಿಟ್ಟು. ಪೇಟೆಗೆ ಹೋಗುವಾಗ ಪರ್ಸ್‌ನಲ್ಲಿ ಎಷ್ಟು ಹಣ ಇತ್ತು, ಮನೆಗೆ ವಾಪಸ್ ಬಂದಮೇಲೆ ಎಷ್ಟಿದೆ, ಎಲ್ಲೆಲ್ಲಿ ಎಷ್ಟೆಷ್ಟು ಖರ್ಚು ಮಾಡಿದೆ ಅಂತ ಬಾಯಲ್ಲೇ ಲೆಕ್ಕ ಹಾಕುತ್ತಾಳೆ. ರೈತಾಪಿ ಕುಟುಂಬದ ಒಡತಿಯಾದ ಆಕೆ, ವರ್ಷಕ್ಕೊಮ್ಮೆ ಕೈಗೆ ಬರುವ ಹಣವನ್ನೇ ನಂಬಿಕೊಂಡು ಜೀವನ ನಡೆಸಬೇಕು. ಹಾಗಾಗಿ, ಕೊಯ್ಲು ಮುಗಿದು ಹಣ ಕೈಗೆ ಸಿಕ್ಕಿದೊಡನೆ, ಕೆಲಸದವರಿಗೆ, ತೋಟದ ಬೇಸಾಯ, ಮನೆ ಖರ್ಚು, ಮಕ್ಕಳ ಓದು, ಬಟ್ಟೆ-ಬರೆ, ದಿನಸಿ…ಹೀಗೆ ಯಾವುದಕ್ಕೆ, ಎಷ್ಟೆಷ್ಟು ಖರ್ಚಾಗುತ್ತೆ ಅಂತ ಅಂದಾಜು ಮಾಡುವುದರಲ್ಲಿ ಅಮ್ಮ ನಿಸ್ಸೀಮೆ. ಬಂದ ಹಣದಲ್ಲೇ ಐದು/ ಹತ್ತು ಸಾವಿರವನ್ನು, ಅನಿವಾರ್ಯದ ಖರ್ಚಿಗೆ ಅಂತ ಎತ್ತಿಡುತ್ತಿದ್ದಳು. ಆಸ್ಪತ್ರೆ ಖರ್ಚೊದನ್ನು ಬಿಟ್ಟು ಮತ್ಯಾವುದಕ್ಕೂ ಆ ಹಣವನ್ನು ಮುಟ್ಟುತ್ತಿರಲಿಲ್ಲ.
ಸಂತೆ, ಜಾತ್ರೆ, ಪೇಟೆ, ತವರುಮನೆ ಅಂತೆಲ್ಲಾ ಹೊರಗೆ ಹೋಗುವಾಗ ಅಪ್ಪನಿಂದ ಪಡೆದ ಹಣದಲ್ಲಿಯೂ ನೂರು-ಇನ್ನೂರನ್ನು ಉಳಿಸುತ್ತಿದ್ದ ಅಮ್ಮ, ಅದನ್ನೆಲ್ಲಾ ಅಡುಗೆಮನೆಯ ಬೇರೆ ಬೇರೆ ಡಬ್ಬಿಗಳಲ್ಲಿ ಅಡಗಿಸುತ್ತಿದ್ದಳು. (ಮೊದಲು ಉಳಿತಾಯದ ಹಣವನ್ನೆಲ್ಲ ಒಂದೇ ಡಬ್ಬಿಯಲ್ಲಿ ಇಡುತ್ತಿದ್ದಳಂತೆ. ಆದರೆ, ಅಮ್ಮ ಒಮ್ಮೆ ತವರಿಗೆ ಹೋಗಿದ್ದಾಗ, ಅಡುಗೆ ಮಾಡುವಾಗ ಅಪ್ಪನಿಗೆ ಡಬ್ಬಿಯೊಂದರಲ್ಲಿ ಗುಪ್ತಧನ ಸಿಕ್ಕಿ ಬಿಟ್ಟಿತು. ಯಾವುದೋ ಖರ್ಚಿಗೆ ಅಂತ ಅಪ್ಪ ಅಷ್ಟೂ ಹಣವನ್ನು ಬಳಸಿಯೂಬಿಟ್ಟರು! ಮುಂದೆಂದೂ ಅಮ್ಮ, ಎಲ್ಲ ದುಡ್ಡನ್ನೂ ಒಂದೇ ಡಬ್ಬಿಯಲ್ಲಿ ಇಡುವ ತಪ್ಪು ಮಾಡಲಿಲ್ಲವೆನ್ನಿ!) ವರ್ಷಾನುಗಟ್ಟಲೆ ಹಾಗೆ ಅಡಗಿಸಿಟ್ಟ ಹಣವೇ ಈಗ ಇಬ್ಬರು ಹೆಣ್ಣುಮಕ್ಕಳ ಕಿವಿಗೆ ಜುಮುಕಿಯಾಗಿದೆ.
ಅಮ್ಮ, ಅಜ್ಜಿಯಂತಲ್ಲ ನಾನು. ಆಧುನಿಕ ಕಾಲದ, ಆರ್ಥಿಕ ಸ್ವಾತಂತ್ರ್ಯವುಳ್ಳ ಹುಡುಗಿ. ದುಡ್ಡಿಗಾಗಿ ಬೇರೆಯವರ ಮುಂದೆ ಕೈ ಚಾಚಬೇಕಿಲ್ಲ ಅಂತ ಬೇಕಾಬಿಟ್ಟಿ ಖರ್ಚು ಮಾಡುವ ಹಾಗಿಲ್ಲ. ಯಾಕಂದ್ರೆ, ನನಗೆ ಉದ್ಯೋಗ ಸಿಕ್ಕಿದ ದಿನವೇ ಅಮ್ಮ “ಲಕ್ಷ್ಮೀ ಸ್ತೋತ್ರ’ದ ಮಂತ್ರೋಪದೇಶ ಮಾಡಿದ್ದಳು. ಅದೇನೆಂದರೆ, “ದುಡ್ಡು ಇದೆ ಅಂತ ಬೇಕಾಬಿಟ್ಟಿ ಖರ್ಚು ಮಾಡಬೇಡ. ಹಣಕಾಸಿನ ವಿಷಯದಲ್ಲಿ ಶಿಸ್ತು ಇರಬೇಕು’. ನಾನು ಈಗಲೂ ಅದನ್ನು ಪಾಲಿಸಲು ಪ್ರಯತ್ನಿಸುತ್ತಿದ್ದೇನೆ.
ಮೊದಲ ತಿಂಗಳ ಸಂಬಳ ಸಿಕ್ಕ ದಿನವೇ ಡೈರಿಯೊಂದನ್ನು ಖರೀದಿಸಿ, ಡೈರಿಯ ಬೆಲೆ- 60 ರೂ. ಅಂತಲೇ ಲೆಕ್ಕ ಬರೆಯಲು ಶುರು ಮಾಡಿದೆ. ಮೊದಲೆರಡು ತಿಂಗಳು ಪಿನ್ನು-ಹೇರ್‌ಪಿನ್‌ನ ಲೆಕ್ಕವನ್ನೂ ಬರೆದರೂ, ಕ್ರಮೇಣ ಲೆಕ್ಕ ಬರೆಯುವ ಅಭ್ಯಾಸ ತಪ್ಪಿ ಹೋಯ್ತು. ಆದರೂ, ಮನೆ ಬಾಡಿಗೆ, ನೀರು-ಕರೆಂಟ್ ಬಿಲ್, ದಿನಸಿ, ಬಸ್ ಪಾಸ್, ಹೋಟೆಲ್, ಸಿನಿಮಾ, ಶಾಪಿಂಗ್, ಸಣ್ಣ ಮೊತ್ತದ ಸೇವಿಂಗ್ ಅಂತೆಲ್ಲಾ ಖರ್ಚು ಮಾಡಿದರೂ, ಮಂಥ್ ಎಂಡ್‌ನಲ್ಲಿ ಪಾಪರ್ ಆಗಬಾರದು ಅನ್ನೋದನ್ನು ತಲೆಯಲ್ಲಿ ಇಟ್ಟುಕೊಂಡೇ ಖರ್ಚು ಮಾಡುತ್ತೇನೆ.
ಒಂದು ತಿಂಗಳು ಏನೇನೋ ಕಾರಣಕ್ಕೆ ದುಂದುವೆಚ್ಚ ಮಾಡಿ, ಆ ತಿಂಗಳ ಸಂಬಳವೂ ಲೇಟಾಗಿ ಬಂದು, ಮನೆ ಬಾಡಿಗೆ ಕಟ್ಟಲು ಕಷ್ಟವಾಯ್ತು. ಆಗ ಗೆಳತಿಯ ಸಹಾಯ ಕೇಳಿದಾಗ, ಅವಳು ಸೇವಿಂಗ್ಸ್ ಬಗ್ಗೆ ಒಂದು ಗಂಟೆ ಪಾಠ ಮಾಡಿದ್ದಳು. ಅವಳಂತೂ ತಿಂಗಳ ಸಂಬಳದ ದಿನವೇ ಒಂದಿಷ್ಟು ಹಣವನ್ನು, ಇನ್ನೊಂದು ಬ್ಯಾಂಕ್ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಿಬಿಡುತ್ತಾಳಂತೆ. ಆ ಖಾತೆಯಿಂದ ಹಣ ತೆಗೆಯಲೇಬಾರದು ಅಂತ ನಿರ್ಧರಿಸಿ, ಬ್ಯಾಂಕ್‌ನಿಂದ ಎಟಿಎಂ ಕಾರ್ಡ್ ಅನ್ನೇ ಪಡೆದಿಲ್ಲವಂತೆ. ಹಣ ಡ್ರಾ ಮಾಡಲು ಬ್ಯಾಂಕ್‌ಗೆà ಹೋಗಬೇಕು! ಹಾಗಾಗಿ ಅಷ್ಟೂ ಹಣ ಉಳಿತಾಯವಾಗುತ್ತಿದೆಯಂತೆ.
ಈಗ ನಾನೂ ಅದೇ ರೀತಿ ಮಾಡುತ್ತಿದ್ದೇನೆ. ಜೊತೆಗೆ, ಬೇರೆ ಬೇರೆ ಡಬ್ಬಿಯಲ್ಲಿ ಹಣ ಅಡಗಿಸುವ ಅಮ್ಮನಂತೆ, ಷೇರು, ಮ್ಯೂಚುವಲ್ ಫಂಡ್, ಎಸ್‌ಐಪಿ, ಎಲ್‌ಐಸಿ ಅಂತೆಲ್ಲಾ ಅಲ್ಲಲ್ಲಿ ಹಣ ಹೂಡುವುದನ್ನೂ ಶುರು ಮಾಡಿದ್ದೇನೆ. ಇನ್‌ವೆಸ್ಟ್‌ಮೆಂಟೂ ಚಿಕ್ಕದು, ಹಣ ಕಳೆದುಕೊಳ್ಳುವ ರಿಸ್ಕ್ ಕೂಡಾ ಚಿಕ್ಕದು.
ಮಂಥ್ ಎಂಡ್‌ನಲ್ಲಿ ದುಡ್ಡೇ ಉಳಿಯೋದಿಲ್ಲ ಅಂತ ಹಲುಬುವ ಗೆಳೆಯನನ್ನ, ದುಂದುವೆಚ್ಚ ಮಾಡಿ ಕಿಸೆ ಖಾಲಿ ಮಾಡಿಕೊಳ್ಳುವ ತಮ್ಮನನ್ನು ನೋಡಿದಾಗೆಲ್ಲಾ, ನಾನೇ ಪರವಾಗಿಲ್ಲಾ ಅನ್ನಿಸಿ, ಹೆಮ್ಮೆಯಾಗುತ್ತೆ!
ದೇಶದ ಬಜೆಟ್ ನೆಪದಲ್ಲಿ, ಇಷ್ಟೆಲ್ಲಾ ನೆನಪಾಯ್ತು ನೋಡಿ.
-ರೋಹಿಣಿ ಎನ್.