ಬದುಕಿನ ಒಂದು ಘಟ್ಟದಲ್ಲಿ ಬಹುತೇಕ ಹೆಣ್ಣುಮಕ್ಕಳಿಗೆ ಹಾಗನ್ನಿಸಿಬಿಡುತ್ತದೆ. ವಯಸ್ಸು ಕಳೆಯುತ್ತ ಬಂತು, ಇಷ್ಟರಲ್ಲಿ ನಾನೇನಾದರೂ ಸಾಧನೆ ಮಾಡ್ಬೇಕಿತ್ತು ಅಂತ. ಅದರಲ್ಲೂ ಹೊರಗೆ ದುಡಿಯದ, ಏನೂ ಸಂಪಾದಿಸದ, ದಿನದ ಇಪ್ಪತ್ನಾಲ್ಕು ಗಂಟೆಯೂ ಮನೆ ಒಳಗೇ ಕೆಲಸ ಮಾಡುವ ಗೃಹಿಣಿಯರಿಗೆ ಇಷ್ಟು ವರ್ಷ ನಾನೇನು ಮಾಡಿದೆ ಅನ್ನೋ ಪ್ರಶ್ನೆ ಪದೇ ಪದೆ ಎದುರಾಗುತ್ತಿರುತ್ತದೆ.
ತವರು ತೊರೆದ ಮೇಲೆ ಗಂಡ, ಮನೆ- ಮಕ್ಕಳು, ಸಂಸಾರ ಅನ್ನುತ್ತ ದಿನವೂ ತಿಕ್ಕುವ, ತೊಳೆಯುವ, ಬೆಳಗುವ, ಅಡುಗೆ ಮಾಡುವ ಕಾರ್ಯದಲ್ಲೇ ಮೂರು ಹೊತ್ತೂ ಮುಳುಗಿ ಏಳುತ್ತಿರುತ್ತೇವೆ. ಕ್ಲೀನ್ ಮಾಡಿರುವ ಅಡುಗೆ ಕಟ್ಟೆಗೆ ಒಂದೇ ರಾತ್ರಿ ಆಯುಸ್ಸು. ಮಕ್ಕಳಿಗೆ ಸಿಹಿ ಬೇಕು, ಗಂಡನಿಗೆ ಖಾರ ಬೇಕು! ಅತ್ತೆಗೆ ಸಿಹಿ ವರ್ಜ್ಯ ಮಾವನಿಗೆ ಖಾರ ಪಥ್ಯ ಅನ್ನುತ್ತ ದಿನಕ್ಕೆ ಐದಾರು ರೀತಿಯ ಅಡುಗೆ. ನೆಲ ವರೆಸು, ಪಾತ್ರೆ ಬೆಳಗು, ಗುಡಿಸು, ಜಾಡಿಸು, ಜೋಡಿಸು, ತೊಳೆದಿಡು,ಒಣಗಿಸು, ಮಡಚಿಡು ಅನ್ನೋದಕ್ಕಂತೂ ಒಂದು ದಿನಕ್ಕೂ ರಜಾ ಕೊಡುವ ಹಾಗಿಲ್ಲ.
ಮನಸ್ಸಿಗೆ ಸಮಾಧಾನ ಇರಲ್ಲ… : ಇವುಗಳ ಮಧ್ಯೆ… ವಾರದಲ್ಲಿಒಂದೊಂದು ದಿನಒಂದೊಂದು ಹೆಚ್ಚುವರಿ ಕೆಲಸ. ಫರ್ನಿಚರ್ ಕಿಟಕಿ ಗ್ಲಾಸಿಗೆ, ಶೋಕೇಸ್‌ಗೆ ಧೂಳು ಹಿಡಿದಿದೆ. ವಾರ್ಡ್ ರೋಬ್‌ನಲ್ಲಿ ಬಟ್ಟೆ ಚೆಲ್ಲಾಪಿಲ್ಲಿಯಾಗಿದೆ,ಕುರುಕಲು ತಿಂಡಿ ಖಾಲಿ ಆಗಿದೆ ಅನ್ನುತ್ತ ಸೆರಗು ಸುತ್ತಿ ಅಖಾಡಕ್ಕಿಳಿಯುತ್ತೇವೆ. ಅದೆಲ್ಲ ಮುಗಿಸಿ ಉಸಿರು ಬಿಡೋ ಹೊತ್ತಿಗೆ ತಿಂಗಳಿಗೆ ಬೇಕಾಗುವಷ್ಟು ಮಾಡಿಟ್ಟುಕೊಂಡ ಬೇರೆ ಬೇರೆ ರೀತಿಯಮಸಾಲೆ ಪೌಡರ್‌ಗಳು ತಳ ಕಾಣುವುದಕ್ಕೆ ಶುರುವಾಗುತ್ತದೆ. ಇನ್ನು ಆಯಾಸೀಸನ್ನಲ್ಲಿ ಮಾಡಲೇಬೇಕಾದ ಹಪ್ಪಳ ಸಂಡಿಗೆ , ಉಪ್ಪಿನಕಾಯಿ, ಹಿಂಡಿ ಮಾಡದೇ ಇದ್ರೆ ಮನಸ್ಸಿಗೆ ಸಮಾಧಾನ ಇಲ್ಲ. ಇದರ ಜೊತೆಗೆ, ತಿಂಗಳಿಗೊಂದರಂತೆ ಬರುತ್ತಲೇ ಇರುವ ಹಬ್ಬದ ತಯಾರಿ, ಪೂಜೆಯ ಸಂಭ್ರಮ, ಆಗೀಗ ಬರುವ ನೆಂಟರು, ಇಷ್ಟರು ಅಂತ ವಿಶೇಷ ಅಡುಗೆ ಮಾಡದೇ ಇರುವದಾದರೂ ಹೇಗೆ? ಇದೆಲ್ಲದರ ಮಧ್ಯೆ ಹಾಡು, ಡಾನ್ಸು ಫಿಲ್ಮ್ , ಹೊಸ ರುಚಿ ಅಂತ ಕರೆಯೋ ಮಗಳ ಹವ್ಯಾಸಕ್ಕೆ ಕಂಪನಿ ಕೊಡದೇ ಇರಲಾಗದು. ತರಕಾರಿ, ದಿನಸಿ, ಮನೆಗೆ ಅಗತ್ಯವಿರುವ ಇತರೆ ವಸ್ತುಗಳ ಶಾಪಿಂಗ್ ನ ನನಗಿಂತ ನೀನೇ ಚೆನ್ನಾಗಿ ಮಾಡ್ತೀಯ ಅಂತ ಗಂಡ ಹೊಗಳಿದರೆ- “ಹೌದಾ’ಅಂತ ಉದ್ಗಾರ ತೆಗೆದು ಅಂಗಡಿಯ ಕಡೆಗೆ ಹೊರಡೋದೇ…
ಕಾಲಚಕ್ರ ತಿರುಗ್ತಾ ಇರ್ತದೆ… : ಅಡುಗೆ ಮನೆಯಿಂದಲೇ ಪೋನು ಕಿವಿಗೊತ್ತಿಕೊಂಡು ದೂರದ ತವರಿನಲ್ಲಿರುವ ಅಪ್ಪ- ಅಮ್ಮನ ಮಾತಿಗೆ ಕಿವಿಯಾಗಬೇಕು. ಆಪ್ತರಿಗೊಂದಿಷ್ಟು ಸಮಯ ಕೊಡಬೇಕು. ಮಧ್ಯೆ ಮಧ್ಯೆ ಕೈಕೊಡುವ ಆರೋಗ್ಯ, ಸುಸ್ತಾಯ್ತು ಅಂತ ನಿದ್ದೆ… ವಯಸ್ಸಾಯ್ತು ಅಂತ ಯೋಗ-ಪ್ರಾಣಾಯಾಮ. ವರ್ಷಗಳು ದಿನಗಳಂತೆ ಉರುಳ್ಳೋದು ಗೊತ್ತೇ ಆಗುವುದಿಲ್ಲ. ಇನ್ನೆಲ್ಲಿಯ ಸಾಧನೆ ..? ಹವ್ಯಾಸಗಳೆಲ್ಲ ಅಲ್ಲೆಲ್ಲಾ ಬಿದ್ದು ಧೂಳು ಹಿಡಿಯುತ್ತಿರುತ್ತವೆ. ಪೇಸ್‌ಬುಕ್‌ನಲ್ಲಿ ಖುಷಿಗಾಗಿ ಬರೆದ ಕವಿತೆಗಳಿಗೆ ಯಾರೋ ಕಥೆ ಕಟ್ಟಿ ಕಾಲೆಳೆದು ಆತ್ಮ ಸ್ಥೈರ್ಯ ಕುಂದಿಸಿಬಿಡುತ್ತಾರೆ. ಓದಬೇಕೆಂದು ತರಿಸಿಕೊಂಡ ಪುಸ್ತಕಗಳಿಗೆ ಸಮಯ ಹೊಂದಿಸಲಾಗುವುದೇ ಇಲ್ಲ. ನಾಲ್ಕು ಕಾಸು ಸಂಪಾದಿಸುವಂಥ ದುಡಿಮೆ ಮೊದಲೇ ಇಲ್ಲ. ಎಷ್ಟೆಲ್ಲ ಗೃಹಿಣಿಯರು ತಮ್ಮ ತಮ್ಮ ಹವ್ಯಾಸದಲ್ಲಿ ಸಕ್ರಿಯವಾಗಿ ತೆರೆದುಕೊಳ್ಳುತ್ತ ವೇದಿಕೆ, ಚಪ್ಪಾಳೆ, ಪ್ರಶಸ್ತಿ, ಪುರಸ್ಕಾರ ಪಡೆದಿದ್ದಾರೆ. ಸಾಧನೆ ಮಾಡಿದ್ದಾರೆ. ಅಂಥದೊಂದು ಸ್ಟೇಜ್ ತಲುಪಲು ನಮಗೇಕೆ ಸಾಧ್ಯವಾಗುತ್ತಿಲ್ಲ? ಅಂದುಕೊಳ್ಳುತ್ತಲೇ ಸಮಯ ಸವೆಯುತ್ತಿರುತ್ತದೆ.
ಇದೆಲ್ಲಾ ಸಾಧನೆಯಲ್ಲವಾ? : ಅರೆರೇ ಬಿಟ್ಟಾಕಿ… ಏನೂ ಸಾಧಿಸಿಲ್ಲ ಅಂದುಕೊಳ್ಳುವ ಗೃಹಿಣಿಯರೇ, ಕೇಳಿ ಇಲ್ಲಿ. ಯಾಕೆ ಹಾಗಂದುಕೊಳ್ಳುತ್ತೀರಿ? ಅಚ್ಚುಕಟ್ಟಾಗಿ, ಶಿಸ್ತಿನಿಂದ,ಸಂಯಮದಿಂದ, ನಗುನಗುತ್ತ ಸಂಸಾರ ನಡೆಸುತ್ತಿರುವದು ಸಾಧನೆ ಅಲ್ದೇ ಮತ್ತೇನು? ಮಕ್ಕಳಿಗೆ ಉತ್ತಮವಾದ ಸಂಸ್ಕಾರ ಕೊಟ್ಟು ಬೆಳೆಸುತ್ತಿರುವದು ಸಾಧನೆಯಲ್ಲವೇ? ಕುಟುಂಬದ ಎಲ್ಲರನ್ನೂ ಜೋಪಾನ ಮಾಡುವುದು, ಸುತ್ತಲಿನ ಸಂಬಂಧಗಳನ್ನು ಸಮರ್ಥವಾಗಿ ನಿಭಾಯಿಸುವದೂ ಒಂದು ಸಾಧನೆಯೇ. ಜೊತೆಗೆ, ನಿಸ್ವಾರ್ಥದ ಸಣ್ಣಪುಟ್ಟ ತ್ಯಾಗವೂಸಾಧನೆಯೇ ಇಂಥದೊಂದು ಸಾಧನೆ ಮಾಡಿದ ಹೆಣ್ಣು ಜೀವಗಳು ಪ್ರತಿಯೊಂದು ಮನೆಯಲ್ಲೂ ಇವೆ.
ಅವರ ಕೆಲಸದ ಬಗ್ಗೆ, ತ್ಯಾಗದ ಬಗ್ಗೆ ಮೆಚ್ಚುಗೆಯ ಮಾತಾಡುವವರೇ ಕಡಿಮೆ. ಈ ಸಾಧನೆಗೆ ಪ್ರತಿಯಾಗಿ ಅವರಿಗೆ ಹಾರ, ತುರಾಯಿ, ವೇದಿಕೆ, ಸನ್ಮಾನಗಳುಆಗುವುದಿಲ್ಲ ನಿಜ. ಆದರೆ ಚೆಂದಗೆಬದುಕು ಸಾಗಿಸಿದ ಆತ್ಮತೃಪ್ತಿಗಿಂತ ದೊಡ್ಡದೇನಿದೆ?
–ಬಿ ಜ್ಯೋತಿ ಗಾಂವ್ಕಾರ್, ಕಲ್ಲೇಶ್ವರ