ಬೆಂಗಳೂರು: ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರಾದ್ಯಂತ ಆರಂಭಿಸಿರುವ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ರಾಜ್ಯದಲ್ಲೂ ಚಾಲನೆ ದೊರೆತಿದೆ.
ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರೆ, ವಿವಿಧ ಜಿಲ್ಲೆಗಳಲ್ಲಿ ಸಚಿವರು, ಶಾಸಕರು
ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಮಗೆ ನಿಗದಿಪಡಿಸ ಲಾದ ಮನೆಗಳಿಗೆ ತೆರಳಿದ ಬಿಜೆಪಿ ಜನ ಪ್ರತಿನಿಧಿಗಳು ಜನರಲ್ಲಿನ ಗೊಂದಲ ನಿವಾರಣೆಗೆ ಮುಂದಾದರು.
ಮುಖ್ಯಮಂತ್ರಿ ಯಡಿಯೂರಪ್ಪ, ಶಿವಾಜಿನಗರ ವಿಧಾನಸಭೆ ಕ್ಷೇತ್ರದ ವಸಂತನಗರ ವಾರ್ಡ್‌ನ ಕೆಲವು ಮನೆಗಳಿಗೆ ತೆರಳಿ ಮನೆಮಂದಿಯನ್ನು ಭೇಟಿಯಾಗಿ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಪ್ರಮುಖವಾಗಿ ಕಾಯ್ದೆ ಜಾರಿ, ಅದರಿಂದ ಉಂಟಾಗಲಿರುವ ಅನುಕೂಲಗಳು, ಕಾಯ್ದೆ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಜನರ ಮೇಲೆ ಬೀರುವ ಪರಿಣಾಮಗಳ ಬಗ್ಗೆ ವಿವರ ನೀಡಿದರು. ಕಾಯ್ದೆ ಬಗ್ಗೆ ಗೊಂದಲ ಸೃಷ್ಟಿಸುತ್ತಿರುವ ಬಗ್ಗೆಯೂ ತಿಳಿಸಿ ತಪ್ಪು ಕಲ್ಪನೆ ಬದಿ ಗಿಟ್ಟು ಕಾಯ್ದೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾಯ್ದೆಯಿಂದ ಇಡೀ ದೇಶದಲ್ಲಿ ಯಾವುದೇ ರೀತಿಯ ದುಷ್ಪರಿಣಾಮ ವಾಗುವುದಿಲ್ಲ. ಮುಸ್ಲಿಂ ಸಹಿತ ಯಾವುದೇ ಸಮುದಾಯಕ್ಕೂ ಇದ ರಿಂದ ಸಮಸ್ಯೆಯಾಗದು. ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿಯವರ ಕಾಲದಲ್ಲೂ ಕಾಯ್ದೆ ಇತ್ತು. ಆದರೆ ಈಗ ಅಲ್ಪಸಂಖ್ಯಾಕ ಮುಸ್ಲಿಂ ಬಾಂಧವರಲ್ಲಿ ಪೌರತ್ವ ತಿದ್ದು ಪಡಿ ಕಾಯ್ದೆಯಿಂದ ತೊಂದರೆಯಾಗ ಲಿದೆ ಎಂಬ ಗೊಂದಲ ಮೂಡಿಸುವ ಪ್ರಯತ್ನವನ್ನು ಕೆಲವರು ಮಾಡು ತ್ತಿದ್ದಾರೆ. ಹಾಗಾಗಿ ಜನರಿಗೆ ವಾಸ್ತ ವಾಂಶ ತಿಳಿಸಲು ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ದೇಶಾದ್ಯಂತ 3 ಕೋಟಿ ಮನೆಗಳಿಗೂ ಭೇಟಿ ನೀಡಿ ಮಾಹಿತಿ ನೀಡುವ ಕೆಲಸ ನಡೆಯಲಿದೆ. ರಾಜ್ಯದಲ್ಲಿ 30 ಲಕ್ಷ ಮನೆಗಳಿಗೂ ತೆರಳಿ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದರು.
ನಾವು ಕೇವಲ ಹಿಂದೂ ಸಮು ದಾಯದವರ ಮನೆಗಳಿಗಷ್ಟೇ ಹೋಗುತ್ತಿಲ್ಲ. ಮುಸ್ಲಿಂ ಸಮುದಾಯ ದವರಲ್ಲೂ ಜಾಗೃತಿ ಮೂಡಿಸ ಲಾಗುತ್ತಿದೆ. ಹಿಂದೂ- ಮುಸ್ಲಿಂ ಎಂಬ ಭೇದವಿಲ್ಲದೆ ಎಲ್ಲರ ಮನೆಗಳಿಗೂ ಭೇಟಿ ನೀಡಿ ಮಾಹಿತಿ ನೀಡ ಲಾಗುವುದು ಎಂದು ಹೇಳಿದರು.
ಕಾಂಗ್ರೆಸ್, ಜೆಡಿಎಸ್ ನಾಯ ಕರು ತಮ್ಮ ಮತ ಬ್ಯಾಂಕ್ ಭದ್ರಪಡಿಸಿ ಕೊಳ್ಳಲು ಜನರಲ್ಲಿ ಸಂಶಯ ಹುಟ್ಟು ಹಾಕುವ ಕೆಲಸ ಮಾಡುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವೇಳೆ ನಿಮ್ಮ ಕುಟುಂಬ ಸದಸ್ಯರ ವಿಳಾಸ, ಆಧಾರ್ ಕಾರ್ಡ್, ಪಡಿತರ ಕಾರ್ಡ್ ಪಡೆದು ವಿವರವನ್ನಷ್ಟೇ ಪಡೆದುಕೊಳ್ಳ ಲಾಗುತ್ತದೆ ಎಂದು ಹೇಳಿದರು.
ಅಭಿಯಾನದ ವೇಳೆ ರಸ್ತೆಬದಿ ವ್ಯಾಪಾರದಲ್ಲಿ ತೊಡಗಿದ್ದ ಮುಸ್ಲಿಂ ಸಮುದಾಯದವರಿಗೆ ಕರಪತ್ರ ನೀಡಿ ಕಾಯ್ದೆ ಬಗ್ಗೆ ಯಡಿಯೂರಪ್ಪ ಅವರು ಮಾಹಿತಿ ನೀಡಿದರು. ಎಳನೀರು ಕುಡಿದು ವ್ಯಾಪಾರಿಗೂ ಮಾಹಿತಿ ನೀಡಿದ್ದು ಗಮನ ಸೆಳೆಯಿತು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ದಾಸರಹಳ್ಳಿ ಕ್ಷೇತ್ರದಲ್ಲಿ ಅಭಿ ಯಾನಕ್ಕೆ ಚಾಲನೆ ನೀಡಿದರು.