Advertisement

ಸಿಎಂ ಸಾರಾಯಿ ಮಾತಿಗೆ ಕಿಕ್ಕೇರಿದ ಸದನ

07:51 AM Nov 22, 2017 | |

ವಿಧಾನಸಭೆ: “ರಾಜ್ಯದಲ್ಲಿ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಾಗ ಸಾರಾಯಿ ನಿಷೇಧ ಮಾಡುವ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಯವರ ಪ್ರಸ್ತಾಪಕ್ಕೆ ಅಂದು ಉಪಮುಖ್ಯಮಂತ್ರಿ ಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದರು.

Advertisement

ಬಿಜೆಪಿಯವರಿಗೆ ಸಂಸ್ಕೃತಿ, ಸಂಸ್ಕಾರ, ಮಾನ, ಮಾರ್ಯಾದೆ ಇಲ್ಲ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತು ಸದನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿ ಅರ್ಧ ದಿನದ ಕಲಾಪ ಬಲಿಯಾಯಿತು. ಮಂಗಳವಾರ ಬೆಳಗ್ಗೆ ಪ್ರಶ್ನೋತ್ತರ ಕಲಾಪದ ಮೊದಲ 
ಪ್ರಶ್ನೆಗೆ ಉತ್ತರಿಸುವ ವೇಳೆ ಮುಖ್ಯಮಂತ್ರಿ ಆಡಿದ ಮಾತು ಪ್ರತಿಪಕ್ಷ ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ಪರಸ್ಪರ ಮಾತಿನ ಚಕಮಕಿ, ಆರೋಪ, ಪ್ರತ್ಯಾರೋಪಗಳಿಂದ ಸದನದಲ್ಲಿ ಕೋಲಾಹಲ ಉಂಟಾಯಿತು.

ಏನಾಯಿತು?: ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸಿ.ಟಿ.ರವಿ, “ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಮಾಡುವ ಚಿಂತನೆ ಸರ್ಕಾರದ ಮುಂದಿದೆಯೇ’ ಎಂದು ಕೇಳಿದ್ದಕ್ಕೆ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಉತ್ತರ ನೀಡುತ್ತಿದ್ದಾಗ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, “ಮದ್ಯಪಾನ ನಿಷೇಧ ಆಗಬೇಕು ಎಂದು ಯಶೋಧರ ದಾಸಪ್ಪ ಅವರ ಕಾಲದಿಂದ ಚರ್ಚೆ ನಡೆಯುತ್ತಿದೆ. ಅದಕ್ಕಾಗಿ ಅವರು ರಾಜೀನಾಮೆ ಕೊಟ್ಟಿದ್ದರು. ಬಿಜೆಪಿಯವರಿಗೆ ಮದ್ಯಪಾನ ನಿಷೇಧದ ಬಗ್ಗೆ ಈಗ ಜ್ಞಾನೋದಯ ಆದಂತಿದ್ದು, ಆತ್ಮವಂಚನೆ ಮಾಡಿಕೊಂಡು ಮಾತನಾಡಬಾರದು’ ಎಂದು ಕುಟುಕಿದರು. ಅಲ್ಲದೆ, “ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸಾರಾಯಿ ನಿಷೇಧ ಮಾಡಲು ಹೊರಟಾಗ ಡಿಸಿಎಂ ಆಗಿದ್ದ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದರು’
ಎಂದೂ ಹೇಳಿದರು. 

ಇದರಿಂದ ಕುಪಿತಗೊಂಡ ಜಗದೀಶ್‌ ಶೆಟ್ಟರ್‌, ಯಡಿಯೂರಪ್ಪ ಸಾರಾಯಿ ನಿಷೇಧಕ್ಕೆ ವಿರೋಧ ಇದ್ದರು ಎಂದು ಸುಳ್ಳು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಯವರ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು. ಈ ಕುರಿತು ಬಿಜೆಪಿ-ಕಾಂಗ್ರೆಸ್‌ ಸದಸ್ಯರ ನಡುವೆ ಜಟಾಪಟಿ ನಡೆಯಿತು. ಸಿಎಂ ಹೇಳಿಕೆ ಸಮರ್ಥಿಸುವ ಧಾಟಿಯಲ್ಲಿ ಮಾತನಾಡಿದ ಜೆಡಿಎಸ್‌ ಶಾಸಕಾಂಗ ಪಕ್ಷದ ಉಪನಾಯಕ ವೈ.ಎಸ್‌.ವಿ.ದತ್ತ, “ಸಮ್ಮಿಶ್ರ ಸರ್ಕಾರ ಇದ್ದಾಗ ಸಾರಾಯಿ ನಿಷೇಧಕ್ಕೆ ಯಡಿಯೂರಪ್ಪ
ಒಪ್ಪಿರಲಿಲ್ಲ’ ಎಂದು ಹೇಳಿದರು. ಆದರೆ, ಸದನದಲ್ಲೇ ಇದ್ದ ಎಚ್‌.ಡಿ.ಕುಮಾರಸ್ವಾಮಿ ಮೌನವಾಗಿದ್ದರು. ಆದರೆ, ದತ್ತ ನೀಡಿದ ಹೇಳಿಕೆ ಮುಂದಿಟ್ಟುಕೊಂಡು ಕಾಂಗ್ರೆಸ್‌ ಸದಸ್ಯರು ಬಿಜೆಪಿ ಮೇಲೆ ಮುಗಿಬಿದ್ದರು.

ಬಿಜೆಪಿಗೆ ಮಾನ-ಮಾರ್ಯಾದೆ ಇಲ್ಲ: ಈ ನಡುವೆ ಶೆಟ್ಟರ್‌ ಮಾತಿಗೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ, “ಬಿಜೆಪಿ ಯವರಿಗೆ ಸಂಸ್ಕೃತಿ-ಸಂಸ್ಕಾರ ಇಲ್ಲ, ಮಾನ-ಮಾರ್ಯಾ ದೆಯಂತೂ ಮೊದಲೇ ಇಲ್ಲ. ಹಿಂದೂ ಧರ್ಮದ ಬಗ್ಗೆ ದೊಡ್ಡ ದೊಡ್ಡ ಮಾತನಾಡುತ್ತಾರೆ. ಆದರೆ, ದೀಪಿಕಾ ಪಡುಕೋಣೆ ತಲೆಕಡಿದವರಿಗೆ 10 ಕೋಟಿ ರೂ. ಬಹುಮಾನ ಘೋಷಣೆ ಮಾಡುತ್ತಾರೆ. ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಏನೆಲ್ಲ ಮಾತಾಡುತ್ತಾರೆ, ಯಡಿಯೂರಪ್ಪ ಏನೆಲ್ಲ ಹೇಳುತ್ತಾರೆ? ಸದನದಲ್ಲಿ ಹೇಗಿರಬೇಕು ಎಂಬ ಸಂಸದೀಯ ನಡವಳಿಕೆಯೂ ಬಿಜೆಪಿಯವರಿಗೆ ಗೊತ್ತಿಲ್ಲ. ನಿಮಗೆ ಮಾನ- ಮಾರ್ಯಾದೆ ಇದೆಯೇನ್ರಿ?’ ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಇದರಿಂದ ಬಿಜೆಪಿ ಸದಸ್ಯರು ರೊಚ್ಚಿಗೆದ್ದರು. ಈ ಮಧ್ಯೆ ಯಡಿಯೂರಪ್ಪ ಅವರ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ ಮಾತು ಹಾಗೂ “ಮಾನ ಮರ್ಯಾದೆ ಇಲ್ಲ’ ಎಂಬ ಎರಡೂ ಮಾತುಗಳನ್ನು ಕಡತದಿಂದ ತೆಗೆದುಹಾಕಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು
ಹಿಡಿದು ಧರಣಿ ನಡೆಸಿದರು. ಪರಿಸ್ಥಿತಿ ಹತೋಟಿಗೆ ಬಾರದ ಕಾರಣ ಸ್ಪೀಕರ್‌ ಕೆ.ಬಿ.ಕೋಳಿವಾಡ ಸದನವನ್ನು ಕೆಲಕಾಲ ಮುಂದೂಡಿದರು. ನಂತರ ಸದನ ಪ್ರಾರಂಭವಾದಾಗಲೂ ಧರಣಿ ಮುಂದುವರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, “ನಾನು ಯಾವುದೇ ಅಸಂಸದೀಯ ಪದ ಬಳಸಿಲ್ಲ. ಸಾರಾಯಿ ನಿಷೇಧಕ್ಕೆ ಯಡಿಯೂರಪ್ಪ ವಿರೋಧ ಇದ್ದದ್ದು ನಿಜ. ಬೇಕಾದರೆ ಸದನದಲ್ಲಿರುವ ಕುಮಾರಸ್ವಾಮಿಯವರನ್ನೇ ಕೇಳಿ’ ಎಂದು ಹೇಳಿದರು.

“ಕುಮಾರಸ್ವಾಮಿಯವರು ಹೇಳಿದರೆ ಒಪ್ಪಿಕೊಳ್ತಿರಾ’ ಎಂದು ಬಿಜೆಪಿಯವರನ್ನು ಪ್ರಶ್ನಿಸಿದರು. ಆದರೆ, ಬಿಜೆಪಿಯವರು ಮುಖ್ಯಮಂತ್ರಿ ಸುಳ್ಳು ಹೇಳುತ್ತಿದ್ದಾರೆ ಎಂದು ತಮ್ಮ ಆಕ್ರೋಶ ಮುಂದುವರಿಸಿದರು.

ಬಿಎಸ್‌ವೈ ಹೆಸರು ತೆಗೆಯಲ್ಲ- ಸ್ಪೀಕರ್‌ ರೂಲಿಂಗ್‌:
ಮಧ್ಯಪ್ರವೇಶಿಸಿದ ಸ್ಪೀಕರ್‌ ಕೋಳಿವಾಡ, ಮುಖ್ಯಮಂತ್ರಿಯವರು ಯಡಿಯೂರಪ್ಪ ಅವರ ಹೆಸರು ಬಳಕೆ ಮಾಡಿಕೊಂಡಿದ್ದಾರೆಯೇ ಹೊರತು ಅದರಲ್ಲಿ ಮರ್ಯಾದೆಗೆ ಧಕ್ಕೆ ತರುವಂತಹ ಉದ್ದೇಶ ಇರುವುದಿಲ್ಲ. ಸಾಂದರ್ಭಿಕವಾಗಿ ಅವರ ಹೆಸರನ್ನು
ಬಳಸಿಕೊಂಡಿರುತ್ತಾರೆ. ಆದುದರಿಂದ ಹೇಳಿಕೆಯನ್ನು ಕಡತದಿಂದ ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಧರಣಿ ಮುಂದು ವರಿಸಿದರು. ಹೀಗಾಗಿ ಕಲಾಪ ಮುಂದೂಡಿದ ಸ್ಪೀಕರ್‌, ಸದನ ನಾಯಕರ ಸಭೆ ಕರೆದರು. ನಂತರ ಕಲಾಪ ಪ್ರಾರಂಭವಾದಾಗ ರಮೇಶ್‌ಕುಮಾರ್‌ ಮಾತನಾಡಿ, ಸದನದ ಗೌರವ ಕಾಪಾಡಲು ಎಲ್ಲರೂ ಮಾತಿನ ಮೇಲೆ ಹಿಡಿತ ಹೊಂದಿರಬೇಕು ಎಂದು ಹೇಳಿದರು. ಸ್ಪೀಕರ್‌ ಕೋಳಿವಾಡ ಅವರು, ಮುಖ್ಯಮಂತ್ರಿಯವರು ಆಡಿದ ಮಾತುಗಳಲ್ಲಿ ಅಸಂಸದೀಯ ಪದಗಳು ಇದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. ಕಾಂಗ್ರೆಸ್‌ ಸದಸ್ಯರು, ಎರಡೂ ಕಡೆ ಆಡಿದ ಮಾತುಗಳ ಬಗ್ಗೆಯೂ ಪರಿಶೀಲಿಸಿ ಎಂದು ಒತ್ತಾಯಿಸಿದರು. ಅಲ್ಲಿಗೆ ವಿಷಯಕ್ಕೆ ತೆರೆ ಬಿದ್ದಿತು. 

“ರಾಜ್ಯದಲ್ಲಿ ಮದ್ಯಪಾನ ನಿಷೇಧ ಇಲ್ಲವೇ ಇಲ್ಲ’
ವಿಧಾನಸಭೆ: “ದೇಶಾದ್ಯಂತ ಸಂಪೂರ್ಣ ಮದ್ಯಪಾನ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾದರೆ ನಮ್ಮದೂ ಸಹಮತ ಇದೆ’
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಪ್ರಶ್ನೋತ್ತರ ವೇಳೆ ಮಂಗಳವಾರ ಬಿಜೆಪಿಯ ಸಿ.ಟಿ. ರವಿ
ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ಮದ್ಯ ಪಾನ ನಿಷೇಧ ಪ್ರಸ್ತಾಪವಿಲ್ಲ. ಈ ಕುರಿತು ರಾಷ್ಟ್ರೀಯ ನೀತಿ ಅಗತ್ಯ. ಅಂತಹ ನೀತಿ ತಂದು ನಿಷೇಧ ಮಾಡಿದರೆ ನಮ್ಮದೂ ಅಭ್ಯಂತರವಿಲ್ಲ. ಅದಕ್ಕೆ ನಮ್ಮ ಬೆಂಬಲವೂ ಇರುತ್ತದೆ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಎಲ್ಲದಕ್ಕೂ ಕೇಂದ್ರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು, ರಾಜ್ಯ ಸರ್ಕಾರ ಏನು ಮಾಡುತ್ತದೆ ಎಂದು ಹೇಳುವಂತೆ ಒತ್ತಾಯಿಸಿದರು. ಸಾರಾಯಿ ನಿಷೇಧ ಮಾಡಿ ದ್ದರಿಂದ ಭ್ರಷ್ಟಾಚಾರ ಹೆಚ್ಚಾಯಿತು.
ಸಣ್ಣ, ಸಣ್ಣ ಅಂಗ ಡಿಗಳಲ್ಲಿ ಮದ್ಯ ಮಾರಾಟ ಆರಂಭವಾಯಿತು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹಾಗಾದರೆ, ಸಾರಾಯಿ ಮಾರಾಟ ಪುನಃ ಆರಂಭಿಸುತ್ತಿರಾ  ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು. ಬಿಜೆಪಿಯ ಸಿ.ಟಿ.ರವಿ, ಬಿಜೆಪಿ
ಅಧಿಕಾರದಲ್ಲಿ ದ್ದಾಗ ಸಾರಾಯಿ ನಿಷೇಧ ಮಾಡಿತ್ತು. ಮತ್ತೆ ಅಧಿಕಾರಕ್ಕೆ ಬಂದರೆ ಸಂಪೂರ್ಣ ಮದ್ಯಪಾನ ನಿಷೇಧ ಮಾಡಲಿದೆ ಎಂದು ತಿಳಿಸಿದರು. 

ಸಾರಾಯಿ ನಿಷೇಧಕ್ಕೆ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದು ಸತ್ಯ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ, ನನ್ನ ಮಾತು ಕಡತದಿಂದ 
ತೆಗೆದುಹಾಕುವ ಅವಶ್ಯಕತೆಯೂ ಇಲ್ಲ. ಸದನ ನಡೆಯಬೇಕು ಎಂಬ ಇಚ್ಛೆ  ಬಿಜೆಪಿಗಿಲ್ಲ. ಯಡಿಯೂರಪ್ಪ ಹೆಸರುಹೇಳಿದ್ದು ಆಕ್ಷೇಪಾರ್ಹ, ಮಾನ-ಮಾರ್ಯಾದೆ ಇಲ್ಲ ಎಂದು ಹೇಳಿದ್ದು ಅಸಭ್ಯ ಎಂದಾದರೆ, ಕಾಂಗ್ರೆಸ್‌ ಕೊಲೆಗಡುಕ ಸರ್ಕಾರ ಎಂದಿದ್ದು
ಸಭ್ಯತೇನಾ? ಬಿಜೆಪಿ ಧರಣಿ ನಡೆಸಲಿ. ನಾವು ಜಗ್ಗುವುದಿಲ್ಲ. ಎದುರಿಸಲು ಸಿದ್ಧ. 

 ●ಸಿದ್ದರಾಮಯ್ಯ, ಮುಖ್ಯಮಂತ್ರಿ

ಮುಖ್ಯಮಂತ್ರಿಯವರು ಸದನಕ್ಕೆ ಸುಳ್ಳು ಹೇಳುತ್ತಿದ್ದಾರೆ. ಅಲ್ಲದೆ, ಪ್ರತಿಪಕ್ಷಗಳನ್ನು ಪ್ರಚೋದನೆಗೊಳಪಡಿಸಿ ಸದನದಲ್ಲಿ ಗಲಾಟೆಗೆ ಕಾರಣವಾಗುತ್ತಿದ್ದಾರೆ. ಸದನ ನಡೆಯಬೇಕು. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಬೇಕು ಎಂಬ ಮನಸ್ಸು ಸರ್ಕಾರಕ್ಕಿಲ್ಲ. ಆದ್ದರಿಂದ ಹಠಕ್ಕೆ ಬಿದ್ದಿದೆ. ಇದೊಂದು ಭಂಡ ಸರ್ಕಾರ, ಸಿದ್ದರಾಮಯ್ಯ ಒಬ್ಬ ದುರಂಹಕಾರಿ.
 ●ಜಗದೀಶ ಶೆಟ್ಟರ್‌, ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next