ಮದ್ಯ ಗ್ರಾಮವು ಮೂಲಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದು, ಅಭಿವೃದ್ಧಿಯಾಗಬೇಕಿದೆ. ಅಲ್ಲದೆ ಅಭಿವೃದ್ಧಿಕಾರ್ಯಗಳ ನಿರ್ವಹಣೆಗೆ ಕೂಡ ಮುಂದಾಗಬೇಕಿದೆ. ಗ್ರಾಮದಲ್ಲಿ ನರ್ಮ್ ಬಸ್‌ಗೆ ಬೇಡಿಕೆ, ನಂದಿನಿ ನದಿಗೆ ತಡೆಗೋಡೆ ನಿರ್ಮಿಸುವ ಅಗತ್ಯವಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯುವುದು ಉದಯವಾಣಿ ಸುದಿನದ “ಒಂದು ಊರು-ಹಲವು ದೂರು’ ಅಭಿಯಾನದ ಉದ್ದೇಶ.
ಸುರತ್ಕಲ್: ಮದ್ಯ ಗ್ರಾಮವು ಚೇಳ್ಯಾರು ಗ್ರಾ.ಪಂ. ಆಡಳಿತದಡಿ ಬರುವ ಪುಟ್ಟ ಹಳ್ಳಿ. ಇತ್ತ ಮಹಾನಗರ ಪಾಲಿಕೆ ಅತ್ತ ಕಿನ್ನಿಗೋಳಿ ಸಂಪರ್ಕಿಸುವ ನಡುವಿನ ಗ್ರಾಮವಿದು. ಇಲ್ಲಿ ಮನೆ ನಿವೇಶನಕ್ಕೆ ಒಟ್ಟು 14 ಎಕರೆ ಭೂಮಿ ಗುರುತಿಸಿ ಹಲವಾರು ವರ್ಷಗಳಾದರೂ ಮನೆಯಿಲ್ಲದವರ ಕನಸು ಇದುವರೆಗೂ ನನಸಾಗಿಲ್ಲ.
ಸುಮಾರು 200ಕ್ಕೂ ಅಧಿಕ ಕುಟುಂಬಗಳಿಗೆ ನಿವೇಶನ ಹಂಚಲು ಇಲ್ಲಿ ಸಾಧ್ಯವಿದ್ದು, ಭೂಮಿ ಅಳತೆಗೆ ಸರ್ವೇಯರ್ ಇಲ್ಲದ ಸ್ಥಿತಿಯಿದೆ. ಗ್ರಾ.ಪಂ.ನ ಗ್ರಾಮಸಭೆಯಲ್ಲಿ ಈ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಗಮನಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಗುರುತಿಸಲ್ಪಟ್ಟ ಭೂಮಿ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿದೆ.
ಕಿರಿದಾದ ಸೇತುವೆ :
ಮದ್ಯ ಗ್ರಾಮವನ್ನು ಪಕ್ಕದ ಪಂಜ, ಪಕ್ಷಿಕೆರೆ ಸಂಪರ್ಕಿಸುವ ಸೇತುವೆಯೊಂದನ್ನು ನಿರ್ಮಿಸ ಲಾಗಿದ್ದು, ಬಸ್ ಸಂಚಾರಕ್ಕೆ ಯೋಗ್ಯವಾಗಿಲ್ಲ. ಕಾರು, ಬೈಕ್ ಮತ್ತಿತರ ಲಘು ವಾಹನ ಓಡಾಟ ನಡೆಸುವಷ್ಟು ಸಣ್ಣ ಸೇತುವೆ ನಿರ್ಮಿಸಲಾಗಿದೆ. ಭವಿಷ್ಯದಲ್ಲಿ ಬಸ್ ಸಂಚಾರಕ್ಕೆ ಮತ್ತೆ ಪ್ರತ್ಯೇಕ ಸೇತುವೆ ನಿರ್ಮಿಸುವ ಅನಿವಾರ್ಯವಿದೆ. ಈ ಭಾಗದ ಜನತೆಗೆ ಕಿನ್ನಿಗೋಳಿ, ಮೂಲ್ಕಿ, ತಾಲೂಕು ಕಚೇರಿ ಮೂಡುಬಿದಿರೆಗೆ ಹೋಗಲು ಹತ್ತಿರದ ರಸ್ತೆಯಾಗಿದೆ.
ಇತರ ಸಮಸ್ಯೆಗಳೇನು? :
- ಇಲ್ಲಿಗೆ ಖಾಸಗಿ ಬಸ್‌ಗಳು ಓಡಾಟ ನಡೆಸುತ್ತಿದ್ದರೂ ಜನರ ಅನುಕೂಲಕ್ಕಾಗಿ ನರ್ಮ್ ಬಸ್‌ಗೆ ಬೇಡಿಕೆ ಇರಿಸಲಾಗಿದೆ.
- ನಂದಿನಿ ನದಿ ಸಮೀಪದಲ್ಲೇ ಹರಿಯುವುದರಿಂದ ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಉಪ್ಪು ನೀರು ಕೃಷಿ ಭೂಮಿಗೆ ನುಗ್ಗುವ ಸಮಸ್ಯೆಯಿದೆ. ತಡೆಗೋಡೆ ರಚನೆಯ ಬೇಡಿಕೆಯಿದ್ದು ಇದುವರೆಗೂ ಪೂರ್ಣವಾಗಿಲ್ಲ.
- ಒಳ ರಸ್ತೆಗಳು ಡಾಮರು ಕಾಮಗಾರಿ, ಮಳೆ ನೀರು ಹರಿಯಲು ವ್ಯವಸ್ಥೆಯಾಗಬೇಕಿದೆ.
- ಈ ಭಾಗದಲ್ಲಿ ಮುಡಾ ವತಿಯಿಂದ ಅಭಿವೃದ್ಧಿಗೊಳ್ಳಬೇಕಾದ ಬಡಾವಣೆ ಇನ್ನೂ ಮೂಲಸ್ಥಿತಿಯಲ್ಲಿಯೇ ಇದೆ.
- ತ್ಯಾಜ್ಯ ವಿಲೇವಾರಿ ಸಂಗ್ರಹ ಘಟಕ ಇದುವರೆಗೂ ಆರಂಭವಾಗಿಲ್ಲ. ಈ ಯೋಜನೆ ಆರಂಭಿಸುವ ಅಗತ್ಯವಿದೆ.
-ಲಕ್ಷ್ಮೀನಾರಾಯಣ ರಾವ್