Advertisement

ಹೋರಾಟದ ಫಲವಾಗಿ ಸೂರು ಲಭ್ಯ: ವಸಂತ ಆಚಾರಿ

10:20 AM May 21, 2018 | |

ಮಹಾನಗರ: ಸಮಾಜದಲ್ಲಿ ಆದಿವಾಸಿ ಸಮುದಾಯ ಅತ್ಯಂತ ಕೆಳ ಸಮುದಾಯವಾಗಿದ್ದು, ರಾತ್ರಿ ಹಗಲಿನ ಹೋರಾಟದ ಫಲವಾಗಿ ಅವರಿಗೆ ಸೂರು ಸಿಕ್ಕಂತಾಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಹೇಳಿದರು. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಆದಿವಾಸಿ ಅಧಿಕಾರ್‌ ಮಂಚ್‌, ಹೊಸದಿಲ್ಲಿ ಸಂಯುಕ್ತಾಶ್ರಯದಲ್ಲಿ ನಗರದ ಕುಲಶೇಖರದ ಕೋಟಿ ಮುರ ವಾಟರ್‌ ಟ್ಯಾಂಕ್‌ ಬಳಿ ರವಿವಾರ ಹಮ್ಮಿಕೊಂಡಿದ್ದ ಹೆದ್ದಾರಿ ನಿರ್ಮಾಣ ಪ್ರಕ್ರಿಯೆಯಿಂದ ನಿರ್ವಸಿತಗೊಂಡ ಎಂಟು ಆದಿವಾಸಿ ಕುಟುಂಬಗಳಿಗೆ ರವಿವಾರ ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಹತ್ತು ವರ್ಷಗಳ ಕನಸು ನನಸು
ಹತ್ತು ವರ್ಷಗಳ ಕನಸು ಇದೀಗ ಈಡೇರಿದೆ. 2009ರಲ್ಲಿ ಹೆದ್ದಾರಿ ನಿರ್ಮಾಣಕ್ಕಾಗಿ ವಾಸವಿದ್ದ ಎಂಟು ಆದಿವಾಸಿ ಕುಟುಂಬಗಳು ಮನೆ ಮತ್ತು ಭೂಮಿಯನ್ನು ಕಳೆದುಕೊಂಡಿದ್ದವು. ಆ ಸಮಯದಲ್ಲಿ ಆ ಕುಟುಂಬದ ಪರವಾಗಿ ನಮ್ಮ ಸಂಘಟನೆ ವತಿಯಿಂದ ಹೋರಾಟ ನಡೆಸಿದ್ದೆವು. ಇದೀಗ ಆ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದರು.

ಸರ್ವಧರ್ಮ ಒಂದಾಗಲಿ
ಕೃಷಿಕರು, ಅಲ್ಪಸಂಖ್ಯಾಕ ಮುಸಲ್ಮಾನರು, ಕ್ರೈಸ್ತರು ಸೇರಿದಂತೆ ಅನೇಕ ಸಮುದಾಯದ ಪರವಾಗಿ ನಾವು ಹಗಲಿರುಳು ಹೋರಾಟ ನಡೆಸಿದ್ದೇವೆ. ಆದರೆ ಆ ಸಮುದಾಯವಿಂದು ನಮ್ಮನ್ನು ಕೈಬಿಟ್ಟಿರುವುದು ಬೇಸರ ತಂದಿದೆ. ಈ ದೇಶದಲ್ಲಿ ಸರ್ವಧರ್ಮ ಒಂದಾದರೆ ಮಾತ್ರ ಬದಲಾವಣೆಯಾಗಲು ಸಾಧ್ಯ ಎಂದು ತಿಳಿಸಿದರು.

ಸ್ವಂತ ಮನೆ ಕನಸಾಗಿದೆ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರೋಯ್‌ ಕ್ಯಾಸ್ಟಲಿನೋ ಮಾತನಾಡಿ, ಊಟ, ಬಟ್ಟೆ ಇಲ್ಲದಿದ್ದರೂ ಮನುಷ್ಯ ಕಷ್ಟಪಟ್ಟು ದುಡಿದು ಸಂಪಾದಿಸಬಹುದು. ಆದರೆ ಸ್ವಂತ ಮನೆ ನಿರ್ಮಾಣ ಮಾಡುವುದು ಎಲ್ಲರ ಕನಸಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸಮಾಜವು ಸಣ್ಣ ಸಣ್ಣ ಸಮುದಾಯವಾಗಿವೆ. ಇದರಿಂದಾಗಿ ಎಲ್ಲರೂ ಒಟ್ಟು ಸೇರಿ ಕೆಲಸ ಮಾಡುವುದು ಕಷ್ಟವಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಲಿತ ಚಿಂತಕ ಸೀತಾರಾಮ ಎಸ್‌., ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಹಸಂಚಾಲಕ ಎಸ್‌.ವೈ. ಗುರುಶಾಂತ್‌, ಸಂಚಾಲಕ ವೈ.ಕೆ. ಗಣೇಶ್‌, ಸಹಸಂಚಾಲಕ ಡಾ| ಕೃಷ್ಣಪ್ಪ ಕೊಂಚಾಡಿ, ಅಖಿಲ ಭಾರತ ವಿಚಾರವಾದಿ ಸಂಘ ಅಧ್ಯಕ್ಷ ಪ್ರೊ| ನರೇಂದ್ರ ನಾಯಕ್‌, ವಾಸುದೇವ ಉಚ್ಚಿಲ್‌, ತಿಮ್ಮಯ್ಯ ಕೆ., ಸುನೀಲ್‌ ಕುಮಾರ್‌ ಬಜಾಲ್‌ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Advertisement

3 ಲಕ್ಷ ರೂ. ಸಹಾಯ ಧನ 
ಸಮಿತಿ ಸಂಚಾಲಕ ಜಯಕುಮಾರ್‌ ಮಾತನಾಡಿ, ಆಧುನಿಕ ಆವಶ್ಯಕತೆಗಳೊಂದಿಗೆ ಸರಕಾರದ ವಿವಿಧ ಇಲಾಖೆಗಳಿಂದ ಪ್ರತಿ ಮನೆಗೆ 3 ಲಕ್ಷ ರೂ. ಸಹಾಯ ಧನ ದೊರೆತಿದ್ದು, ಅದರಂತೆ ಮನೆಗೆ ಸುಮಾರು ಮೂರೂವರೆ ಲಕ್ಷ ರೂ. ದಾನಿಗಳು ಮತ್ತು ಫಲಾನುಭವಿಗಳ ಜಂಟಿ ಸಹಕಾರದೊಂದಿಗೆ ಆದಿವಾಸಿ ಮನೆ ನಿರ್ಮಾಣ ಸಮಿತಿಯಿಂದ ನಿರ್ಮಿಸಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next