Advertisement

ಸಂತ್ರಸ್ತರಿಗೆ ಸೂರು; ಪ್ರಾಮಾಣಿಕ ಪ್ರಯತ್ನ!

12:13 PM Aug 16, 2019 | Suhan S |

ಗದಗ: 73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದಿಂದ ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಧ್ವಜಾರೋಹಣ ನೆರವೇರಿಸಿ, ಗೌರವ ಸಲ್ಲಿಸಿದರು.

Advertisement

ಬಳಿಕ ವಿವಿಧ ದಳಗಳ ವೀಕ್ಷಣೆ ಮಾಡಿ, ಆಕರ್ಷಕ ಪಥ ಸಂಚಲನದಲ್ಲಿ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮೂಲಕ ದೇಶದ ಏಕತೆ ಹಾಗೂ ಸಮಗ್ರತೆಗೆ ಹೊಸ ಆಯಾಮ ನೀಡಿರುವ ಸನ್ನಿವೇಶದಲ್ಲಿ ಕರ್ತವ್ಯಗಳ ನಿರ್ವಹಣೆಗೆ ದೇಶಕ್ಕಾಗಿ ದುಡಿಯಲು ದೇಶಭಕ್ತಿಯೇ ಪ್ರೇರಣೆಯಾಗಿದೆ ಎಂದು ನುಡಿದರು.

ಭಾರತದ ರಾಷ್ಟ್ರೀಯ ಚಳವಳಿಯ ಘನ ಇತಿಹಾಸವನ್ನು ಅರಿತು, ಅದನ್ನು ನಿರಂತರವಾಗಿ ಭಾರತೀಯರಲ್ಲಿ ಪ್ರಜ್ವಲಿಸುವಂತೆ ಮಾಡಿದ ಹಿರಿಯ ನಾಯಕರು, ಸ್ವಾತಂತ್ರ್ಯ ಸೇನಾನಿಗಳು ಹಾಗೂ ಅಸಂಖ್ಯಾತ ಭಾರತೀಯರ ತ್ಯಾಗ, ಬಲಿದಾನಗಳ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯು ತನ್ನದೇ ಆದ ಕೊಡುಗೆ ನೀಡಿದೆ ಎಂದರು.

ಗ್ರಾಮೀಣ ಉದ್ಯೋಗ ಯೋಜನೆಯಡಿ 17.67 ಲಕ್ಷ ಮಾನವ ದಿನಗಳ ಉದ್ಯೋಗ ಸೃಜಿಸಲಾಗಿದೆ. ಸ್ವಚ್ಛ ಭಾರತ ಮಿಷನ್‌ ಅಡಿ ಜಿಲ್ಲೆಯು 1.35 ಲಕ್ಷ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಲಾಗಿದೆ. 9 ಸ್ಥಳೀಯ ಸಂಸ್ಥೆ ಹಾಗೂ ಆಯ್ದ 25 ಗ್ರಾಪಂಗಳಲ್ಲಿ ಘನ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಗೆ ಕೈಗೆತ್ತಿಕೊಳ್ಳಲಾಗಿದೆ. ಮುಖ್ಯ ಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳ 37 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ಪುರಸ್ಕಾರ ಹಾಗೂ ಜಲಶಕ್ತಿ ಅಭಿಯಾನದಡಿ ದೇಶದ ಆಯ್ದ 256 ಜಿಲ್ಲೆಗಳ ಯೋಜನಾನುಷ್ಠಾನದಲ್ಲಿ ಗದಗ ಜಿಲ್ಲೆ ಮೊದಲ 10 ಜಿಲ್ಲೆಗಳಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು.

ಆಗಸ್ಟ್‌ ತಿಂಗಳಲ್ಲಿ ಜಿಲ್ಲೆಯ ನರಗುಂದ, ರೋಣ ತಾಲೂಕುಗಳು ಮಲಪ್ರಭಾ ಮತ್ತು ಬೆಣ್ಣೆಹಳ್ಳಗಳ ಪ್ರವಾಹದಿಂದಾಗಿ ಹಾಗೂ ತುಂಗಭದ್ರಾ, ವರದಾ ನದಿಗಳ ನೆರೆಯಿಂದಾಗಿ ಶಿರಹಟ್ಟಿ ಹಾಗೂ ಮುಂಡರಗಿ ಗ್ರಾಮಗಳ ಜನರು ಸಂಕಷ್ಟದಲ್ಲಿದ್ದಾರೆ. ಒಟ್ಟು 40 ಗ್ರಾಮಗಳ ಪ್ರವಾಹ ಪೀಡಿತವಾಗಿದ್ದು 44 ಪರಿಹಾರ ಕೇಂದ್ರಗಳನ್ನು ತೆರೆದು 13,200 ಕುಟುಂಬಗಳ 48,282 ಜನರಿಗೆ ಆಶ್ರಯ ಒದಗಿಸಿ ಊಟ, ವಸತಿ, ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ನೆರೆ ಸಂತ್ರಸ್ತರಿಗೆ ಅಗತ್ಯ ಸೂರು ಕಲ್ಪಿಸಲು ಇತರೆ ಮೂಲ ಸೌಕರ್ಯ ಒದಗಿಸಲು ಜಿಲ್ಲಾಡಳಿತವು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದರು. ಶಾಸಕ ಎಚ್.ಕೆ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ಎಸ್‌.ಪಿ. ಬಳಿಗಾರ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ, ಜಿ.ಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಜಿಪಂ ಸಿಇಒ ಮಂಜುನಾಥ ಚವ್ಹಾಣ, ಎಸ್ಪಿ ಶ್ರೀನಾಥ ಜೋಶಿ, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

ಆಕರ್ಷಕ ಪಥ ಸಂಚಲನ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಗಳ ವಿವಿಧ ತುಕುಡಿಗಳೊಂದಿಗೆ ಶಾಲಾ- ಕಾಲೇಜು ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ವಿವಿಧ ದಳಗಳ ವೀಕ್ಷಣೆ ಮಾಡಿದರು. ನಂತರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿ.ಎಸ್‌.ಧನಗರ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನದ ಗೌರವ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next