Advertisement
ಸೀತಮ್ಮ ಅವರಿಗೆ 94ಸಿಸಿ ಹಕ್ಕು ಪತ್ರ ಸಿಗದಿರುವ ಹಿನ್ನಲೆಯಲ್ಲಿ ಮಾ.26 ರಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ನೇತೃತ್ವದಲ್ಲಿ ಪುತ್ತೂರು ಮಿನಿ ವಿಧಾನಸೌಧದ ಮುಂಭಾಗ ಧರಣಿ ನಡೆಯಿತು. ಧರಣಿಗೆ ಮಣಿದ ಕಂದಾಯ ಇಲಾಖೆ ಮಧ್ಯಾಹ್ನ 12 ಗಂಟೆ ವೇಳೆ ಸೀತಮ್ಮ ಅವರಿಗೆ ಹಕ್ಕುಪತ್ರ ನೀಡುವ ಮೂಲಕ ಹಲವು ವರ್ಷಗಳ ಪ್ರಕರಣ ಸುಖಾಂತ್ಯ ಕಂಡಿತು.
ಮಚ್ಚಿಮಲೆ ಸೀತಮ್ಮ ಅವರು ನಗರ ಸಭಾ ವ್ಯಾಪ್ತಿಗೆ ಸೇರಿರುವ ಆರ್ಯಾಪು ಗ್ರಾಮದ ಮಚ್ಚಿಮಲೆಯಲ್ಲಿ 3 ಸೆಂಟ್ಸ್ ಸರಕಾರಿ ಜಾಗದಲ್ಲಿ ಮನೆ ಕಟ್ಟಿದ್ದರು. ಆಧಾರ್, ಪಡಿತರ ಸೌಲಭ್ಯ ಹೊಂದಿರುವ ಕಾರಣ 94ಸಿಸಿ ಅಡಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಕಳೆದ ಏಳು ವರ್ಷಗಳಿಂದ ಕಂದಾಯ ಇಲಾಖೆ ಹಕ್ಕುಪತ್ರ ನೀಡಿರಲಿಲ್ಲ. ಜಾಗದ ಹಕ್ಕಿನ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತು. ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವ ಹಿಸುವ ಸಿಬಂದಿಯೋರ್ವರ ಜಮೀನಿನಲ್ಲಿ ಈ ಮನೆ ಇದೆ ಎಂಬ ನೆಪವೊಡ್ಡಿ ಇಲಾಖೆ ಹಕ್ಕುಪತ್ರ ನಿರಾಕರಿಸುತ್ತಿರುವ ಬಗ್ಗೆ ಮಹಿಳೆ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರ ಗಮನಕ್ಕೆ ತಂದಿದ್ದರು. ಮಾ. 8ರಂದು ಮಹಿಳೆಯ ಸಮಸ್ಯೆಯ ಬಗ್ಗೆ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್, ಸಹಾಯಕ ಆಯುಕ್ತರೊಂದಿಗೆ ಚರ್ಚಿಸಿದ ಶಕುಂತಳಾ ಟಿ. ಶೆಟ್ಟಿ ಮಾ. 25ರೊಳಗೆ ಹಕ್ಕುಪತ್ರ ನೀಡದೆ ಇದ್ದಲ್ಲಿ ಧರಣಿ ಕೂರುವ ಎಚ್ಚರಿಕೆ ನೀಡಿದ್ದರು.
Related Articles
ಹಕ್ಕುಪತ್ರ ವಿತರಣೆ ಬಳಿಕ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಸೀತಮ್ಮ ಅವರ ಮನೆ ಸಂಪರ್ಕ ರಸ್ತೆ ಮುಚ್ಚುವ ಹುನ್ನಾರ ನಡೆಯುತ್ತಿರುವ ಮಾಹಿತಿ ಇದೆ. ಪೊಲೀಸ್, ಕಂದಾಯ ಇಲಾಖೆ ಅವರಿಗೆ ರಕ್ಷಣೆ ನೀಡಬೇಕು. ಒಂದು ವೇಳೆ ತೊಂದರೆ ಉಂಟಾದಲ್ಲಿ ಮತ್ತೆ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು. ತೊಂದರೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ರಮೇಶ್ ಬಾಬು ಭರವಸೆ ನೀಡಿದರು.
Advertisement