ಮಹಾರಾಷ್ಟ್ರ/ತೆಲಂಗಾಣ: ಒಂದೇ ಮನೆಯ ಕುಟುಂಬ ಸದಸ್ಯರು ಎರಡು ರಾಜ್ಯಗಳ ಗಡಿಯಲ್ಲಿ ವಾಸಿಸುತ್ತಿರುವುದನ್ನು ಕಂಡಿದ್ದೀರಾ? ಒಂದು ಅಪರೂಪದ ಪ್ರಕರಣದಲ್ಲಿ ಚಂದ್ರಾಪುರ ಜಿಲ್ಲೆಯ ಸೀಮಾವರ್ತಿ ಜೀವತಿ ತೆಹಸಿಲ್ ನ ಮಹಾರಾಜಗುಡಾ ಗ್ರಾಮದಲ್ಲಿ ಪವಾರ್ ಕುಟುಂಬ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದಲ್ಲಿ ವಾಸವಾಗಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇದನ್ನೂ ಓದಿ:ಸೇಫ್ ಲಾಕರ್‌ನಲ್ಲಿದ್ದ ಅರ್ಧ ಕೇಜಿ ಚಿನ್ನ ಮಾಯ; 30 ಲಕ್ಷ ರೂ. ಮೌಲ್ಯದ ಚಿನ್ನ ಕಳೆದುಕೊಂಡ ವೃದ್ಧ
13 ಸದಸ್ಯರನ್ನು ಹೊಂದಿರುವ ಪವಾರ್ ಕುಟುಂಬವು ಎರಡೂ ರಾಜ್ಯದ ಗಡಿಯಲ್ಲಿರುವ 14 ಹಳ್ಳಿಗಳ ಜಟಾಪಟಿ ನಡುವೆ ವಾಸಿಸುತ್ತಿವೆ. ಮಹಾರಾಷ್ಟ್ರ-ತೆಲಂಗಾಣ ಗಡಿಯಲ್ಲಿರುವ 14 ಹಳ್ಳಿಗಳು ತಮಗೆ ಸೇರಿವೆ ಎಂದು ಎರಡೂ ರಾಜ್ಯಗಳು ಕಿತ್ತಾಡುತ್ತಿರುವುದಾಗಿ ವರದಿ ವಿವರಿಸಿದೆ.
ಪವಾರ್ ಕುಟುಂಬ ಎರಡೂ ರಾಜ್ಯಗಳ ಪಡಿತರ ಸೇರಿದಂತೆ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯಗಳನ್ನು ಪಡೆಯುತ್ತಿದೆ. ಅಷ್ಟೇ ಅಲ್ಲ ತಮ್ಮ ವಾಹನಗಳಿಗೆ ಮಹಾರಾಷ್ಟ್ರ-ತೆಲಂಗಾಣ ರಾಜ್ಯದ ನಂಬರ್ ಪ್ಲೇಟ್ ಗಳನ್ನು ಹೊಂದಿರುವುದಾಗಿ ವರದಿ ಹೇಳಿದೆ.
ಪವಾರ್ ಕುಟುಂಬ ಎರಡೂ ರಾಜ್ಯಗಳಿಗೆ ತೆರಿಗೆ ಪಾವತಿಸುತ್ತಿದೆ. ಮಹಾರಾಜಗುಡದಲ್ಲಿರುವ 10 ಕೋಣೆಯುಳ್ಳ ಮನೆಯ ನಾಲ್ಕು ಕೋಣೆ ತೆಲಂಗಾಣ ರಾಜ್ಯಕ್ಕೆ ಸೇರಿದ್ದು, ಇನ್ನುಳಿದ ನಾಲ್ಕು ಕೋಣೆಗಳು ಮಹಾರಾಷ್ಟ್ರಕ್ಕೆ ಸೇರಿದೆ. ಮನೆಯ ಅಡುಗೆ ಕೋಣೆ ತೆಲಂಗಾಣ ಪ್ರದೇಶದಲ್ಲಿದ್ದು, ಬೆಡ್ ರೂಂ ಮತ್ತು ಹಾಲ್ ಮಹಾರಾಷ್ಟ್ರ ಪ್ರದೇಶಕ್ಕೆ ಸೇರಿದೆ. ಪವಾರ್ ಕುಟುಂಬ ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿರುವುದಾಗಿ ವರದಿ ತಿಳಿಸಿದೆ.
ಮನೆ ಮಾಲೀಕ ಉತ್ತಮ್ ಪವಾರ್ ಎಎನ್ ಐ ಜೊತೆ ಮಾತನಾಡುತ್ತ, ನಮ್ಮ ಮನೆ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದ ನಡುವೆ ಹಂಚಿಹೋಗಿದೆ. ಆದರೆ ಈವರೆಗೂ ನಮಗೆ ಯಾವುದೇ ಸಮಸ್ಯೆಯಾಗಿಲ್ಲ. ನಾವು ಎರಡೂ ರಾಜ್ಯಗಳಿಗೆ ಆಸ್ತಿ ತೆರಿಗೆಯನ್ನು ಪಾವತಿಸುತ್ತಿದ್ದು, ಎರಡೂ ರಾಜ್ಯಗಳ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
1969ರಲ್ಲಿ ಗಡಿ ವಿವಾದ ಇತ್ಯರ್ಥವಾದ ನಂತರ ಪವಾರ್ ಕುಟುಂಬ ಎರಡು ರಾಜ್ಯಗಳಲ್ಲಿ ಹಂಚಿ ಹೋಗಿದೆ. ನಂತರ ಕುಟುಂಬ ಸದಸ್ಯರ ಒಮ್ಮತದ ಮೇರೆಗೆ ಮನೆಯೂ ಇಬ್ಬಾಗವಾಗಿತ್ತು. ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ಕಾನೂನು ಬದ್ಧವಾಗಿ ಈ ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಿವೆ. ಆದರೂ ತೆಲಂಗಾಣ ಸರ್ಕಾರ ನಿರಂತರವಾಗಿ ವಿವಿಧ ಯೋಜನೆಗಳ ಮೂಲಕ ಈ ಹಳ್ಳಿಗಳ ಜನರನ್ನು ತನ್ನತ್ತ ಸೆಳೆಯುತ್ತಿರುವುದಾಗಿ ತಿಳಿಸಿದೆ.