ನವದೆಹಲಿ: ಕೇಂದ್ರ ಸರಕಾರವು ಯಾವುದೇ ಕಾರಣಕ್ಕೂ ಕಾಶ್ಮೀರಿ ನಾಯಕರನ್ನು 18 ತಿಂಗಳುಗಳಿಗಿಂತ ಹೆಚ್ಚು ಗೃಹಬಂಧನದಲ್ಲಿ ಇರಿಸುವುದಿಲ್ಲ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ. ಮತ್ತು ಕಾಶ್ಮೀರಿ ನಾಯಕರು ‘ಗೃಹಬಂಧನ’ದಲ್ಲಿ ಇಲ್ಲ ಬದಲಾಗಿ ಅವರೆಲ್ಲಾ ‘ಗೃಹ ಆತಿಥ್ಯ’ವನ್ನು ಅನುಭವಿಸುತ್ತಿದ್ದಾರೆ ಎಂದೂ ಜಿತೇಂದ್ರ ಸಿಂಗ್ ಅವರು ಹೇಳಿದರು.
‘ಕಾಶ್ಮೀರಿ ರಾಜಕೀಯ ನಾಯಕರನ್ನು ವಿಐಪಿ ಸೌಲಭ್ಯಗಳಿರುವ ಕಟ್ಟಡಗಳಲ್ಲಿ ಇರಿಸಲಾಗಿದೆ. ನಾವು ಅವರಿಗೆ ಹಾಲಿವುಡ್ ಸಿನೇಮಾಗಳ ಸಿಡಿಗಳನ್ನು ನೀಡಿದ್ದೇವೆ. ಮಾತ್ರವಲ್ಲದೇ ಜಿಮ್ ಸೌಲಭ್ಯಗಳನ್ನೂ ಸಹ ಈ ನಾಯಕರಿಗೆ ಒದಗಿಸಲಾಗಿದೆ. ಒಟ್ಟಿನಲ್ಲಿ ಹೇಳಬೆಕೆಂದರೆ ಈ ರಾಜಕೀಯ ನಾಯಕರು ‘ಗೃಹ ಬಂಧನ’ದಲ್ಲಿ ಇಲ್ಲ ಬದಲಾಗಿ ‘ಗೃಹ ಆತಿಥ್ಯ’ ಅನುಭವಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.
ಈ ನಾಯಕರನ್ನು 18 ತಿಂಗಳುಗಳಿಂದ ಹೆಚ್ಚು ಗೃಹಬಂಧನದಲ್ಲಿರಿಸಲಾಗುವುದಿಲ್ಲ ಎಂಬ ಸುಳಿವನ್ನು ಸಹ ಸಚಿವ ಜಿತೇಂದ್ರ ಸಿಂಗ್ ಅವರು ಇದೇ ಸಂದರ್ಭದಲ್ಲಿ ನೀಡಿದರು.
ಕಾಶ್ಮೀರದ ಮಾಜೀ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಸೇರಿದಂತೆ ಹಲವಾರು ಕಾಶ್ಮೀರಿ ರಾಜಕೀಯ ಮುಖಂಡರನ್ನು ಆಗಸ್ಟ್ 5ರಿಂದ ಗೃಹಬಂಧನದಲ್ಲಿ ಇರಿಸಲಾಗಿದೆ. ಇದೇ ದಿನದಂದು ಕೇಂದ್ರ ಸರಕಾರ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿತ್ತು ಹಾಗೂ ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿತ್ತು.
ಇದೀಗ ಸರಿಸುಮಾರು ಎರಡು ತಿಂಗಳುಗಳಿಂದ ಈ ಕಾಶ್ಮೀರಿ ರಾಜಕೀಯ ಮುಖಂಡರು ಬಾಹ್ಯ ಜಗತ್ತಿನ ಸಂಪರ್ಕವಿಲ್ಲದೇ ಪ್ರತ್ಯೇಕ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇನ್ನು ಜಮ್ಮು ಕಾಶ್ಮೀರದ ಮಾಜೀ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಸಾರ್ವಜನಿಕ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಬಂಧನದಲ್ಲಿರಿಸಲಾಗಿದೆ.
‘ಪಾಕಿಸ್ಥಾನ ಆಕ್ರಮಿತ ಕಾಶ್ಮೀರವು ನಮ್ಮದೇ ಆಗಿದೆ ಮತ್ತು ಜಮ್ಮು ಕಾಶ್ಮೀರದ ಗಡಿಭಾಗಗಳನ್ನು ಪುನರ್ ಸೇರಿಸುವ ಕಾರ್ಯಕ್ಕೆ ನಾವು ಬದ್ಧರಾಗಿದ್ದೇವೆ. ಮತ್ತು ಈ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಸಂಸತ್ 1994ರಲ್ಲೇ ನಿಲುವಳಿಯೊಂದನ್ನು ಮಂಡಿಸಿದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.