ಬೆಳಗಾವಿ: ಭೀಕರ ಬರ ಸಂಕಷ್ಟದಿಂದ ಮನೆ ನಿರ್ವಹಣೆಗೆ ರೈತನೊಬ್ಬ ಪಡೆದಿದ್ದ ಸಾಲವನ್ನು ಮರು ಪಾವತಿ ಮಾಡುವಲ್ಲಿ ವಿಳಂಬವಾಗಿತ್ತು. ಹೀಗಾಗಿ, ಬಡ್ಡಿ ರೂಪದಲ್ಲಿ ಸಾಲ ಕೊಟ್ಟ ಮಹಿಳೆ ತನ್ನ ಪತ್ನಿ ಮತ್ತು ಪುತ್ರನನ್ನು ಗೃಹಬಂಧನದಲ್ಲಿ ಇರಿಸಿಕೊಂಡಿದ್ದರಿಂದ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಹುಕ್ಕೇರಿ ತಾಲೂಕಿನ ಇಸ್ಲಾಂಪುರದಲ್ಲಿ ನಡೆದಿದೆ.
ರಾಜು ಖೋತಗಿ (51) ಆತ್ಮಹತ್ಯೆ ಮಾಡಿಕೊಂಡವರು. ಬಡ್ಡಿ ರೂಪದಲ್ಲಿ ಸಾಲ ನೀಡಿದ್ದ ಸಿದ್ದವ್ವ ಬಯ್ಯನವರ ಎಂಬ ಮಹಿಳೆ ಮೃತ ರೈತ ರಾಜು ಖೋತಗಿ, ಪತ್ನಿ ದುರ್ಗವ್ವ ಮತ್ತು ಮಗ ಬಸವರಾಜನನ್ನು ಗೃಹಬಂಧನದಲ್ಲಿ ಇರಿಸಿದ್ದ ಆರೋಪ ಕೇಳಿ ಬಂದಿದೆ.
ಭೀಕರ ಬರದಿಂದ ಬೆಳೆ ನಷ್ಟ ಅನುಭವಿಸಿದ್ದ ರಾಜು ಜೀವನ ನಿರ್ವಹಣೆಗೆ ಸಿದ್ದವ್ವ ಅವರ ಬಳಿ ಐದು ತಿಂಗಳ ಹಿಂದೆ 1.50 ಲಕ್ಷ ರೂ. ಸಾಲ ಪಡೆದಿದ್ದರು. ಪಡೆದಿದ್ದ ಸಾಲಕ್ಕೆ ಪ್ರತಿ ತಿಂಗಳು ಶೇ. 10 ಬಡ್ಡಿ ಪಾವತಿಸುತ್ತ ಬಂದಿದ್ದರು. ಸಾಲಕ್ಕೆ ಬಡ್ಡಿ ತುಂಬುತ್ತಿದ್ದರೂ, 2 ದಿನಗಳ ಹಿಂದೆ ಏಕಾಏಕಿ ರಾಜು ಅವರನ್ನು ಮನೆಗೆ ಕರೆಯಿಸಿಕೊಂಡು ಕೊಟ್ಟ ಸಾಲ ಮರಳಿಸುವಂತೆ ಸಿದ್ದವ್ವ ತಾಕೀತು ಮಾಡಿದ್ದಳು. ಅನಂತರ ಈ ಎಲ್ಲ ಬೆಳವಣಿಗೆಗಳು ನಡೆದಿದೆ.
ಪೊಲೀಸರ ನಿರ್ಲಕ್ಷ್ಯ
ಈ ಸಂಬಂಧ ಸಿದ್ದವ್ವಳ ವಿರುದ್ಧ ದೂರು ಕೊಡಲು ಹೋದಾಗ ದೂರು ದಾಖಲಿಸಿಕೊಳ್ಳದೆ ಪೊಲೀಸರು ಸತಾಯಿಸಿದ್ದಾರೆಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.