ಪಾಟ್ನಾ: ಕೇಂದ್ರ ಸಂಪುಟದಲ್ಲಿ ನಿರೀಕ್ಷಿತ ಸ್ಥಾನ ಸಿಗದೆ ಇದ್ದ ಕಾರಣಕ್ಕೆ ಬಿಜೆಪಿ ಜತೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕ್ರುದ್ಧರಾಗಿರುವುದು ಈಗ ಬಹಿರಂಗ ಸತ್ಯ. ಮಂಗಳವಾರ ನಡೆದ ಬೆಳವಣಿಗೆಯಲ್ಲಿ ನಿತೀಶ್ ಕುಮಾರ್ ಮಹಾಮೈತ್ರಿಕೂಟಕ್ಕೆ ಸೇರ್ಪಡೆಯಾಗುವುದಿದ್ದರೆ ಸ್ವಾಗತವಿದೆ ಎಂಬ ಆಹ್ವಾನ ರವಾನೆಯಾಗಿದೆ. ಆರ್‌ಜೆಡಿಯ ಹಿರಿಯ ನಾಯಕ ರಘುವಂಶ ಪ್ರಸಾದ್ ಸಿಂಗ್ ಮತ್ತು ಬಿಹಾರದ ಮಾಜಿ ಸಿಎಂ ರಾಬ್ಡಿ ದೇವಿ ಈ ಆಹ್ವಾನ ನೀಡಿದ್ದಾರೆ.
“ಬಿಜೆಪಿಯೇತರ ಪಕ್ಷಗಳು ಅದು ನಿತೀಶ್ ಕುಮಾರ್ ಅಥವಾ ಇನ್ನು ಯಾರೇ ಇರಲಿ, ಅವರು ಒಂದೇ ವೇದಿಕೆಯಲ್ಲಿ ಸೇರಿಕೊಳ್ಳಬೇಕು. ಈ ಮೂಲಕ ದೇಶಕ್ಕೆ ಬದಲಿ ಆಯ್ಕೆ ನೀಡಬೇಕು. ನಾವು ಇಂಥವರು ಬೇಕು ಬೇಡ ಎಂಬ ಪಥ್ಯ ಹೊಂದಿಲ್ಲ’ ಎಂದಿದ್ದಾರೆ ರಘುವಂಶ ಸಿಂಗ್. 2020ರಲ್ಲಿ ಬಿಹಾರ ವಿಧಾನಸಭೆ ಚುನಾವಣೆ ಇರುವ ಹಿನ್ನೆಲೆಯಲ್ಲಿ ಈ ಅಂಶ ಮಹತ್ವದ್ದಾಗಿದೆ.
ಜೈಲಲ್ಲಿರುವ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ನಿತೀಶ್ ಕುಮಾರ್ ಮೈತ್ರಿಕೂಟಕ್ಕೆ ಬರುವಾದರೆ ಸೇರ್ಪಡೆಗೆ ಒಪ್ಪಿದ್ದಾರೆಯೇ ಎಂಬ ಪ್ರಶ್ನೆಗೆ, ಅವರು ತಮ್ಮ ಅಭಿಪ್ರಾಯವನ್ನು ಈಗಾಗಲೇ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ. ಆರ್‌ಜೆಡಿ ನಾಯಕಿ ರಾಬಿx ದೇವಿ, ಹಿಂದುಸ್ತಾನ್ ಅವಾಮ್ ಮೋರ್ಚಾ (ಎಚ್‌ಎಎಂ) ನಾಯಕ ಜಿತನ್ ರಾಮ್ ಮಾಂಝಿ ಕೂಡ ನಿತೀಶ್ ಪರ ನಿಲುವು ವ್ಯಕ್ತಪಡಿಸಿದ್ದಾರೆ.
ಜೆಡಿಯು ನಾಯಕರು ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಂ ಮಾಂಝಿ ಭಾಗವಹಿಸಿದ್ದು ಮಹತ್ವದ ಬೆಳವಣಿಗೆಯಾಗಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಆರ್‌ಜೆಡಿ ನಾಯಕರಾದ ತೇಜ್ ಪ್ರತಾಪ್ ಯಾದವ್, ರಾಬಿx ದೇವಿ ಅವರು ಜಿತನ್ ರಾಂ ಮಾಂಝಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು.
ಬಿಹಾರ ಸರ್ಕಾರದ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿ ನಾಯಕರಿಗೆ ಅವಕಾಶ ಕೊಡದೇ ಇರುವುದು ಮತ್ತು ಜಿತನ್‌ರಾಂ ಮಾಂಝಿ, ರಾಬ್ಡಿ ದೇವಿ ನಿತೀಶ್ ಪರವಾಗಿ ವಾದ ಮಂಡನೆ ಮಾಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ನಿತೀಶ್‌ಕುಮಾರ್‌ರನ್ನು ಮನವೊಲಿಸಲು ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮುಂದಾಗುವ ವರೆಗೆ ಬಿಹಾರದ ಬಗ್ಗೆ ಏನನ್ನೂ ಹೇಳುವಂತಿಲ್ಲ.
ಮೈತ್ರಿ ಬಿಡಲು ನಾವೂ ರೆಡಿ: ಅಖೀಲೇಶ್
ಉತ್ತರಪ್ರದೇಶದಲ್ಲಿ ಪ್ರತಿಪಕ್ಷಗಳ ಮಹಾಮೈತ್ರಿ ಬಹುತೇಕ ಮುರಿದುಬೀಳುವ ಹಂತಕ್ಕೆ ತಲುಪಿದೆ. ಮುಂಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಬಿಎಸ್‌ಪಿ ನಾಯಕಿ ಮಾಯಾವತಿ ಘೋಷಿಸಿದ ಬೆನ್ನಲ್ಲೇ ಮಂಗಳವಾರ ಎಸ್‌ಪಿ ನಾಯಕ ಅಖೀಲೇಶ್ ಯಾದವ್ ಅವರೂ ಇದೇ ಮಾದರಿಯಲ್ಲಿ ಮಾತನಾಡಿದ್ದಾರೆ. ಬಿಎಸ್‌ಪಿ ಮೈತ್ರಿ ಮುರಿದುಕೊಂಡರೆ, ನಾವು ಕೂಡ ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧ ಎಂದು ಅವರು ತಿಳಿಸಿದ್ದಾರೆ. ಈ ನಡುವೆ, ಮಂಗಳವಾರ ತಮ್ಮ ನಿಲುವು ಸ್ವಲ್ಪಮಟ್ಟಿಗೆ ಸಡಿಲಿಸಿರುವ ಮಾಯಾವತಿ, “ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ, ಎಸ್‌ಪಿ ಜತೆಗಿನ ಮೈತ್ರಿಯನ್ನು ಶಾಶ್ವತವಾಗಿ ಕಡಿದುಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.