Advertisement

ಆರೋಪ ಹೊತ್ತಿರುವವರನ್ನೇ ಲೋಕಾಕ್ಕೆ ಶಿಫಾರಸು ಯಾಕೆ?

03:50 AM Jan 19, 2017 | Team Udayavani |

ಬೆಂಗಳೂರು: ಲೋಕಾಯುಕ್ತ ಸಂಸ್ಥೆಗೆ ಉದ್ದೇಶ ಪೂರ್ವಕವಾಗಿಯೇ ವಿವಾದಗಳಿರುವ ನಿವೃತ್ತ ಹೈಕೋರ್ಟ್‌
ನ್ಯಾಯಮೂರ್ತಿಗಳನ್ನು ರಾಜ್ಯ ಸರ್ಕಾರ ಶಿಫಾರಸು ಮಾಡುತ್ತಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು,ಲೋಕಾಯುಕ್ತ ಸ್ಥಾನಕ್ಕೆ ಆರೋಪ ಹೊತ್ತಿರುವವರನ್ನೇ ಶಿಫಾರಸು ಮಾಡುವುದು ಯಾಕೆ ಎಂದು ಖಾರವಾಗಿ ಪ್ರಶ್ನಿಸಿದರು. ರಾಜ್ಯಪಾಲರು ವಾಪಸ್‌ ಕಳುಹಿಸುವುದು ಗೊತ್ತಿದ್ದೂ ಇದೇ ರೀತಿ ಮಾಡಲಾಗುತ್ತಿದೆ ಎಂದರೆ ಈ ಬಗ್ಗೆ ಅನುಮಾನ ಉಂಟಾಗುತ್ತದೆ ಎಂದು ಹೇಳಿದರು. ಲೋಕಾಯುಕ್ತ ಸಂಸ್ಥೆ ಬಲಪಡಿಸುವ ಇಚ್ಛಾಶಕ್ತಿ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳಿಗಿಲ್ಲ. ಲೋಕಾಯುಕ್ತ ಹಾಗೂ ಕೆಪಿಎಸ್‌ಸಿ
ಸಂಸ್ಥೆಯನ್ನು ಸರ್ವನಾಶ ಮಾಡಿದ ಕೀರ್ತಿ ಈ ಎರಡೂ ಪಕ್ಷಗಳಿಗೆ ಸಲ್ಲುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
**
ಪರಿಶೀಲಿಸಿ ನಿರ್ಧಾರ: ಸಿದ್ದು
ಬೆಂಗಳೂರು: “ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾಡಿದ್ದ ಶಿಫಾರಸನ್ನು ರಾಜ್ಯಪಾಲರು ವಾಪಸ್‌
ಕಳುಹಿಸಿರುವುದನ್ನು ನಾನಿನ್ನೂ ನೋಡಿಲ್ಲ. ಈ ಬಗ್ಗೆ ಪರಿಶೀಲಿಸಿ ನಂತರ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದ ಜವಾಹರಲಾಲ್‌ ನೆಹರು ತಾರಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹೈಬ್ರಿಡ್‌ ಪ್ರೊಜೆಕ್ಷನ್‌ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರವು ಲೋಕಾಯುಕ್ತಕ್ಕೆ ನ್ಯಾ| ವಿಶ್ವನಾಥ ಶೆಟ್ಟಿ ಅವರನ್ನು ಶಿಫಾರಸು ಮಾಡಿತ್ತು. ಆದರೆ, ರಾಜ್ಯಪಾಲರು ಈಗ ವಾಪಸ್‌ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

**

ಒಮ್ಮತದಿಂದಲೇ ಶೆಟ್ಟಿ ಆಯ್ಕೆ
ಬೀದರ್‌: ಸುಪ್ರೀಂಕೋರ್ಟ್‌ನ ನಿಯಮಾನುಸಾರವೇ ಲೋಕಾಯುಕ್ತಕ್ಕೆ ನ್ಯಾ|ವಿಶ್ವನಾಥ ಶೆಟ್ಟಿ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಆದರೆ ರಾಜ್ಯಪಾಲರು ಮರುಪರಿಶೀಲನೆಗೆ ಸರ್ಕಾರದ ಪ್ರಸ್ತಾವನೆ ವಾಪಸ್‌ ಕಳುಹಿಸಿದ್ದಾರೆ. ಅವರು ಕೇಳಿರುವ ಸ್ಪಷ್ಟನೆಗಳ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಳುಹಿಸಿದ್ದ ಪ್ರಸ್ತಾವನೆಯನ್ನು ರಾಜ್ಯಪಾಲರು ಮರು ಪರಿಶೀಲನೆಗಾಗಿ ವಾಪಸ್‌ ಕಳುಹಿಸಿರುವ ಮಾಹಿತಿಯೂ
ಮಾಧ್ಯಮಗಳಿಂದಲೇ ಗೊತ್ತಾಗಿದೆ. ರಾಜ್ಯಪಾಲರು ಕೇಳಿರುವ ಸ್ಪಷ್ಟನೆಗಳ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next