ರಾಜಾಜಿನಗರದ ನವರಂಗ್ ಥಿಯೇಟರ್‌ನಿಂದ ಮೋದಿ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿನ “ಹೊಟ್ಟೆ ತುಂಬಾ’ ಎನ್ನುವ ಹೋಟೆಲ್ ಹೆಸರು ನೋಡಿದಾಗ ಮೊದಲಿಗೆ ಹೊಟ್ಟೆ ತುಂಬಾ ನಗು ಬಂದಿದ್ದು ನಿಜ! ‘ಇದೆಂಥ ಹೆಸರು ಮಾರಾಯ್ರೆ ’ ಎನ್ನುತ್ತ ಅಚ್ಚರಿಗೊಳಗಾದೆ. ಅದರ ಜೊತೆಗೆ, ಬೋರ್ಡ್‌ನಲ್ಲಿ ಕನ್ನಡದಲ್ಲಿ ಹೆಸರನ್ನು ತಪ್ಪಿಲ್ಲದಂತೆ ಬರೆದಿದ್ದರೂ, ಇಂಗ್ಲಿಷಿನಲ್ಲಿ
”Otte tumba‘ ಅಂತ ತಪ್ಪಾಗಿ ಬರೆದಿದ್ದರಿಂದ, ಈ ಹೋಟೆಲ್ ಇನ್ನಷ್ಟು ಗಮನ ಸೆಳೆಯಿತು.
ಕನ್ನಡದಲ್ಲಿ ಸರಿ ಬರೆದಿದ್ದರಿಂದ, ಕನ್ನಡಾಭಿಮಾನಿಯಾದ ನಾನು ಅವರ ತಪ್ಪನ್ನು ಅಲ್ಲಿಯೇ ಹೊಟ್ಟೆಗೆ ಹಾಕಿಕೊಂಡೆ! ಹೋಟೆಲ್ ಒಳಗೆ ಅಡಿಯಿಡುವ ಮುನ್ನವೇ ಹೊರಗೆ ಹಾಕಿದ್ದ ಪೋಸ್ಟರ್‌ನಲ್ಲಿನ ಐಟಮ್ಮುಗಳ ಹೆಸರು ನೋಡಿಯೇ ಇಲ್ಲಿ ನಾನ್‌ವೆಜ್ ಫೇಮಸ್ ಇರಬೇಕು ಅಂತನ್ನಿಸಿತು. ಊಟದ ಸಮಯ ಮೀರಿದ್ದರೂ ಅಲ್ಲಲ್ಲಿ ಕುಳಿತ ಒಂದೆರಡು ಗುಂಪು ಊಟ ಮಾಡುತ್ತಾ ಕುಳಿತಿದ್ದಿದ್ದು ಕಂಡಿತು. ಕ್ಯಾಷ್ ಕೌಂಟರಿನಲ್ಲಿ ಸ್ವಲ್ಪ ನೆಮ್ಮದಿಯಾಗಿ, ನಿರಾಳವಾಗಿ ಕುಳಿತಿದ್ದ ವ್ಯಕ್ತಿ ನನ್ನನ್ನು, ಮತ್ತೂಬ್ಬ ಗಿರಾಕಿ ಎಂದುಕೊಂಡು ಸ್ವಾಗತಿಸಿದರು. ಆದರೆ, ನಾನು ಅವರನ್ನು ಮಾತನಾಡಿಸಲು ಮಾತ್ರ ಬಂದವಳು ಎಂದು ತಿಳಿದಾಗ ಅಚ್ಚರಿ, ಖುಷಿ ಎರಡೂ ಆಯಿತು. ನಂತರ ಹೋಟೆಲ್ಲಿನ ಬಗ್ಗೆ ಮಾತಾಡುತ್ತಾ ಕುಳಿತೆವು.
ಬಳ್ಳಾರಿಯವರಾದ ಭಾನುಪ್ರಕಾಶ್ ಈ ಹೋಟೆಲ್ ಅನ್ನು ಆರಂಭಿಸುವ ಮುನ್ನ, ಎಲ್ಲರನ್ನೂ ಸೆಳೆಯುವ ಹೆಸರಿಗಾಗಿ ಹುಡುಕಾಡಿದರಂತೆ. ತುಂಬಾ ವಿಚಿತ್ರವಾದ, ಕ್ಯಾಚಿ ಎನಿಸುವಂಥ ಹೆಸರನ್ನು ಇಡದೇ ಹೋದರೆ, ಗಿರಾಕಿಗಳು ಬರೋದಿಲ್ಲ ಅಂತನ್ನಿಸಿ, ನಾನಾ ಹೆಸರುಗಳನ್ನು ತಡಕಾಡಿದರಂತೆ. “ಬಕಾಸುರ’, “ಕೈರುಚಿ’ ಎನ್ನುವ ಹೆಸರುಗಳೂ ಮುಗಿದುಹೋಗಿದ್ದರಿಂದ “ಹೊಟ್ಟೆತುಂಬಾ’ ಎನ್ನುವ ವಿಶಿಷ್ಟ ಹೆಸರನ್ನಿಟ್ಟರಂತೆ. ಏನನ್ನಾದರೂ ತಿಂದು, ತೇಗು ಹೊಮ್ಮಿಸುವಾಗ “ಅಬ್ಟಾ, ಹೊಟ್ಟೆ ತುಂಬೋಯ್ತು’, “ಹೊಟ್ಟೆ ತುಂಬಾ ತಿಂದೆ’ ಅಂತೆಲ್ಲ ಸುಮ್ಮನೆ ಮಾತಾಡಿಕೊಂಡಾಗಲೂ ಥಟ್ಟನೆ ಮನಸ್ಸಿನಲ್ಲಿ ತಮ್ಮ ಹೋಟೆಲ್ ನೆನಪಾಗಬಹುದು ಎನ್ನುವ ದೃಷ್ಟಿಯಿಂದ ಈ ಹೆಸರನ್ನಿಟ್ಟರಂತೆ. ಇನ್ನೂ ಎರಡು ಕ್ರೇಜಿ ಎನಿಸುವಂಥ ಹೆಸರುಗಳು ಅವರ ಬಳಿ ಇವೆಯಂತೆ. ಕೇಳಿದರೂ ಹೇಳಲಿಲ್ಲ, ಪುಣ್ಯಾತ್ಮ… ಮುಂದೆ ಎರಡು ಹೋಟೆಲ್ ಸ್ಥಾಪಿಸಿದಾಗಲೇ ಅದು ಎಲ್ಲರಿಗೂ ಜಾಹೀರಾಗಬೇಕಂತೆ!
“ನಿಮ್ ಹೋಟೆಲ್ ಹೆಸ್ರು ಫೇಸ್‌ಬುಕ್‌ನಲ್ಲಿ ವರ್ಲ್xಫೇಮಸ್ ಆಗಿದೆ’ ಎಂದಾಗ ಅವರಿಗೆ ನಿಜಕ್ಕೂ ಖುಷಿ ಆಯಿತು. “ನಿಮ್ಮ ಹೋಟೆಲ್ ಹೆಸರು ಇಂಗ್ಲಿಷಿನಲ್ಲಿ ತಪ್ಪಾಗಿ ಬರೆದಿರೋ ಕಾರಣಕ್ಕೆ ತುಂಬಾ ಚರ್ಚೆ ಆಯ್ತು’ ಅಂದೆ. ಅದಕ್ಕೆ ಅವರು, ‘ಅಯ್ಯೋ, ನಾನು ಅದನ್ನು ತಪ್ಪಾಗಿ ಬರೆದಿದ್ದಲ್ಲ ಮೇಡಂ. ‘O’ ಅನ್ನುವುದು ಹೊಟ್ಟೆಯಾಕಾರದಲ್ಲಿ ಇರುವುದರಿಂದ ಹಾಗೆ ಮೊದಲಕ್ಷರ ಬರೆದರೆ ಕ್ಯಾಚಿ ಇರುತ್ತೆ ಅಂತನ್ನಿಸಿಯೇ ಬರೆಸಿದ್ದು! ಅಲ್ಲದೆ, ಮನೆಯಲ್ಲಿ ಮಾತಾಡೋವಾಗ ಯಾರೂ ಹೊಟ್ಟೆ ತುಂಬ್ತು ಅಂತೇನೂ ಒತ್ತಿ ಹೇಳಲ್ಲ, ಅಲ್ವಾ ಮೇಡಂ? “ಒಟ್ಟೆ ತುಂಬಾ’ ಅಂತ ತಾನೇ ಹೇಳ್ತೀವಿ. ನಮ್ ಕನ್ನಡದಲ್ಲಿ ಸರಿಯಾಗಿ ಬರೆಸಿದ್ದೀನೋ, ಇಲ್ವೋ? ನೀವೇ ಹೇಳಿ. ಹಾಗೇ ಇನ್ನೊಂದ್ ವಿಚಾರ… ಎರಡು ಸ್ಪೂನ್ ನಡುವೆ ಒಂದು ಬಾರ್ ಹಾಕಿಬಿಟ್ಟರೆ ಅದು ‘H’ ಥರಾನೇ ಕಾಣುತ್ತೆ, ಹೌದೋ ಇಲ್ವೋ? ಹಾಗೆ ಮಾಡಿಬಿಡಬಹುದು, ಆದರೆ O ಅಂತ ಉದ್ದೇಶದಿಂದ ಬರೆಸಿದ ಮೇಲೆ ಅದು ಹಾಗೇ ಇರಲಿ ಅಂತ ಬಿಟ್ಟಿದ್ದೇನೆ’ ಎನ್ನುತ್ತಾ ಕಂಠಪಾಠ ಮಾಡಿದ ಹಾಗೆ ಹೇಳಿದರು. ಆ ವಾಯ್ಸು ನನ್ನನ್ನು ಕನ್ವಿನ್ಸ್ ಮಾಡಿಸಿತ್ತು!
ಈ ಹೋಟೆಲ್ಲಿನಲ್ಲಿ ಕಬಾಬ್, ಬಿರಿಯಾನಿ ಸಖತ್ ಫೇಮಸ್ಸು. ದೂರದ ಏರಿಯಾಗಳಿಂದ ಬಂದು ಪಾರ್ಸೆಲ್ ತೆಗೆದುಕೊಂಡು ಹೋಗ್ತಾರೆ ಎನ್ನುವ ಖುಷಿ ಭಾನುಪ್ರಕಾಶ್‌ರದು. ಎರಡು ತಿಂಗಳ ಕೆಳಗೆ ಹೋಟೆಲ… ತೆರೆದಾಗ ಗಿರಾಕಿಗಳನ್ನು ಆಕರ್ಷಿಸಲು 80 ರೂ.ಗೆ ಬಿರಿಯಾನಿ, ಒಂದು ತಿಂದರೆ ಇನ್ನೊಂದು ಫ್ರೀ ಅಂತೆಲ್ಲ ಆಫರ್ ಕೊಟ್ಟಾಗ, ನೂಕುನುಗ್ಗಲು ಆಗುತ್ತಿತ್ತಂತೆ. ಹೀಗೆಯೇ ಮಾತಾಡುತ್ತಾ, ಹೋಟೆಲ್ಲಿನ ಒಳಗೆ ಓಡಾಡಿದೆ. ಕಿಚನ್ ತುಂಬಾ ಸ್ವತ್ಛವಿತ್ತು.
ಮಧ್ಯಾಹ್ನ 12 ಗಂಟೆಗೆ ತೆರೆಯುವ ಈ ಹೋಟೆಲ್, ಊಟದಿಂದಲೇ ಬ್ಯುಸಿನೆಸ್‌ಅನ್ನು ಆರಂಭಿಸುತ್ತದೆ. “ಬ್ರಾಹ್ಮಣರು ಸ್ವಲ್ಪ ಜಾಸ್ತಿ ಮೇಡಂ ಇಲ್ಲಿ. ಒಂದೊಂದ್ಸಲ ಬಿಸಿನೆಸ್ ಕೈಕೊಡೋದೂ ಉಂಟು’ ಎಂಬ ಸಣ್ಣ ಆರೋಪವನ್ನು ಹೊರಹಾಕಿ, ನೋವು ತೋಡಿಕೊಂಡರು ಭಾನುಪ್ರಕಾಶ್. ಅಂದು ಯಾವತ್ತೋ, “ಬೂತಯ್ಯನ ಮಗ ಅಯ್ಯು’ವಿನ ಸಿನಿಮಾ ಕಾಲದಲ್ಲಿ ಪ್ಲೇಟ್ ಊಟಕ್ಕೆ ಜಿಗಿದ ಇದೇ ಬೆಂಗಳೂರಿನಲ್ಲಿ “ಹೊಟ್ಟೆ ತುಂಬಾ’ ಎನ್ನುವ ಹೆಸರಿಗೆ ನಾನು ಮನಸೋತಿದ್ದು ನಿಜ!
ಎಲ್ಲಿ?: ಹೋಟೆಲ್ ಹೊಟ್ಟೆ ತುಂಬಾ, ನವರಂಗ್ ಟಾಕೀಸ್ ಹತ್ತಿರ, ಮೋದಿ ಆಸ್ಪತ್ರೆ ರಸ್ತೆ
ಸ್ಪೆಷಾಲಿಟಿ: ಬಿರಿಯಾನಿ, ಕಬಾಬ್
– ಭಾರತೀ ಬಿ.ವಿ.