ಬೆಂಗಳೂರು: ಕಾರ್ಮಿಕರಿದ್ದಾರೆ, ಕೆಲಸವಿಲ್ಲ, ಕೆಲಸವಿದೆ ಕಾರ್ಮಿಕರಿಲ್ಲ. ಇದು ಸದ್ಯ ಹೋಟೆಲ್ ಗಳು ಎದುರಿಸುತ್ತಿರುವ ಸ್ಥಿತಿ. ಅಗತ್ಯ ಸುರಕ್ಷತಾ ನಿಯಮಗಳೊಂದಿಗೆ ಜೂ. 8ರಿಂದ ಹೋಟೆಲ್ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಹಾಗೆಯೇ ಬಹುತೇಕ ಹೋಟೆಲ್ ಸೇವೆ ಆರಂಭಿಸಿವೆ. ಆದರೆ, ಹೋಟೆಲ್‌ಗಳಿಗೆ ಬರುವ ಗ್ರಾಹಕರ ಸಂಖ್ಯೆ ತೀರ ಕಡಿಮೆಯಿದೆ. ಹೀಗಾಗಿ ಕೆಲವೊಂದು ಹೋಟೆಲ್‌ಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ರಾಜ್ಯದ ಕಾರ್ಮಿಕರು ವಾಪಾಸ್ ಆಗಿದ್ದಾರೆ.
ಆದರೆ, ಅವರಿಗೆ ನೀಡಲು ಹೋಟೆಲ್ ನಲ್ಲಿ ಮೊದಲಿದಷ್ಟು ಕೆಲಸ ಇಲ್ಲ. ಇನ್ನು ಕೆಲವು ಹೋಟೆಲ್ ಗಳಲ್ಲಿ (ಹೊರ ರಾಜ್ಯದ ಕಾರ್ಮಿಕರನ್ನು ಅವಲಂಬಿಸಿಕೊಂಡಿದ್ದ ಹೋಟೆಲ್‌ಗಳು) ಕೆಲಸವಿದೆ. ಆದರೆ, ಹಿಂದೆ ಅನುಭವ ಹೊಂದಿದ್ದ ಕಾರ್ಮಿಕರು ಈಗ ಸಿಗುತ್ತಿಲ್ಲ ಎಂಬುದು ಹೋಟೆಲ್ ಉದ್ಯಮಿಗಳೇ ಹೇಳುತ್ತಿದ್ದಾರೆ. ಬೆಂಗಳೂರಿನ ಹೋಟೆಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸುಮಾರು 3 ಲಕ್ಷ ಕಾರ್ಮಿಕರು ಸಹಿತ ರಾಜ್ಯದಲ್ಲಿ 15 ಸಾವಿರ ಹೋಟೆಲ್ ಕಾರ್ಮಿಕರಿದ್ದಾರೆ.
ಆದರೆ, ಬೆಂಗಳೂರಿಗೆ ಮಂಡ್ಯ, ಮೈಸೂರು ಮೊದಲಾದ ಜಿಲ್ಲೆಗಳಿಂದ ಕಾರ್ಮಿಕರು ಬಂದಿದ್ದಾರೆ. ಆದರೆ, ಉಳಿದ ಜಿಲ್ಲೆಗಳಿಂದ ಹೋಟೆಲ್ ಕಾರ್ಮಿಕರು ಬರಲು ಸಿದರಿದ್ದಾರೆ. ಆದರೆ, ಕೆಲಸವೇ ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಮಾಲೀಕರೇ ಕರೆಸಿಕೊಳ್ಳಲು ಹಿಂದೇಟುಹಾಕುತ್ತಿದ್ದಾರೆ. ಕರೆಸಿಕೊಂಡರೂ ಕೆಲಸ ಕೊಡಲಾಗದ ಸ್ಥಿತಿ ಈಗ ನಿರ್ಮಾಣವಾಗಿದೆ ಎಂದು ಹೋಟೆಲ್ ಮಾಲೀಕರೊಬ್ಬರು ಮಾಹಿತಿ ನೀಡಿದರು.
ಪಾರ್ಸೆಲ್‌ಗೆ ಅವಕಾಶ ನೀಡಿದ್ದ ಸಂದರ್ಭದಲ್ಲಿ ಶೇ.15ರಷ್ಟು ವ್ಯಾಪಾರ ವಹಿವಾಟು ಆಗುತಿತ್ತು. ಈಗ ಶೇ.25ರಿಂದ 30ರಷ್ಟು ವ್ಯಾಪಾರವಾಗುತ್ತಿದೆ. ವ್ಯಾಪಾರ ಕಡಿಮೆ ಇರುವುದರಿಂದ ಹೆಚ್ಚು ಕಾರ್ಮಿಕರ ಅಗತ್ಯವೂ ಇರುವುದಿಲ್ಲ. ಅಲ್ಲದೆ, ಪಾರ್ಸೆಲ್ ಸೇವೆ ಹೆಚ್ಚಾಗಿದೆಯೇ ಹೊರತು, ಹೋಟೆಲ್‌ನಲ್ಲಿ ಕುಳಿತು ಊಟ, ತಿಂಡಿ ಮಾಡುವುದು ಕಡಿಮೆಯಾಗಿದೆ. ಹೊರ ರಾಜ್ಯದ ಕಾರ್ಮಿಕರು ಬರುವುದೇ ಬೇಡ ಎಂಬ ಸ್ಥಿತಿಯಿದೆ ಎಂದು ಹೋಟೆಲ್ ಉದ್ಯಮಿ ವಿವರಿಸಿದರು.
ಬೆಂಗಳೂರಿಗೆ ಬಂದು ವಾರ ಕಳೆದಿದೆ. ಸರಿಯಾದ ಕೆಲಸವಿಲ್ಲ. ಹೋಟೆಲ್‌ಗೆ ಬರುವವರು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಾರೆ. ಹೀಗಾಗಿ ಪಾರ್ಸೆಲ್ ಮತ್ತು ಅಡಿಗೆ ತಯಾರಿಸಲು ಐದಾರು ಜನ ಸಾಕಾಗುತ್ತದೆ. ಉಳಿದವರಿಗೆ ಕೆಲಸವೇ ಇಲ್ಲ. ಸುಮ್ಮನೆ ರೂಂನಲ್ಲಿ ಕುಳಿತಿರಬೇಕಾಗಿದೆ.
-ರಾಜೇಶ್, ಹೋಟೆಲ್ ಕಾರ್ಮಿಕ
ಹೋಟೆಲ್‌ನಲ್ಲಿ ಈಗ ವ್ಯಾಪಾರ ತುಂಬ ಕಡಿಮೆಯಿದೆ. ಅಲ್ಲದೆ, ಜನರು ಕೂಡ ಹೋಟೆಲ್‌ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನಾವು ಎಲ್ಲ ರೀತಿಯ ಸುರಕ್ಷತಾ ಕ್ರಮ ತೆಗೆದುಕೊಂಡಿದ್ದೇವೆ. ಆದರೂ, ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರು ಬರುತ್ತಿಲ್ಲ. ಹೀಗಾಗಿ ಕಾರ್ಮಿಕರನ್ನು ಪೂರ್ಣ ಪ್ರಮಾಣದಲ್ಲಿ ಕರೆಸಿಕೊಂಡಿಲ್ಲ. ಮುಂದೇನು ಎಂಬುದೇ ಚಿಂತೆ.
-ಸುಬ್ರಹ್ಮಣ್ಯ ಹೆಬ್ಬಾರ್, ಕಾರ್ಯದರ್ಶಿ, ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ
ಸರ್ಕಾರ ಹೋಟೆಲ್ ಕಾರ್ಮಿಕರನ್ನು ಸಂಪೂರ್ಣವಾಗಿ ಮರೆತುಬಿಟ್ಟಿದೆ. ಯಾವುದೇ ಸೌಲಭ್ಯವನ್ನು ಘೋಷಣೆ ಮಾಡಿಲ್ಲ. ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಗ್ರಾಹಕರ ಸಂಖ್ಯೆಯು ಕಡಿಮೆ ಇರುವುದರಿಂದ ಕಾರ್ಮಿಕರಿಗೆ ಕೆಲಸ ನೀಡಲು ಸಾಧ್ಯವಾಗುತ್ತಿಲ್ಲ. ಹೋಟೆಲ್ ಉದ್ಯಮ ಈಗ ಸಂಪೂರ್ಣ ನೆಲಕಚ್ಚಿದೆ. ಸರ್ಕಾರವೇ ಅಗತ್ಯ ಸೌಲಭ್ಯ ನೀಡಬೇಕಿದೆ. ಕಾರ್ಮಿಕರಿಗೆ ಕೆಲಸ ಇಲ್ಲದಾಗಿದೆ.
-ಚಂದ್ರಶೇಖರ್ ಹೆಬ್ಬಾರ್, ಅಧ್ಯಕ್ಷ, ಕರ್ನಾಟಕ ಪ್ರಾದೇಶಿಕ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಸಂಘ