ಬೆಂಗಳೂರು: ಖಾಸಗಿ ವ್ಯವಹಾರ, ವರ್ಗಾವಣೆ ದಂಧೆ ನಡೆಸಲು ಐಷಾರಾಮಿ ಹೋಟೆಲ್ ಬಳಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಯಾವುದೇ ಚಿಂತೆ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪ ಮಾಡಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿಯೂ ಐಷಾರಾಮಿ ಹೋಟೆಲ್‌ನಲ್ಲಿ ಕುಳಿತು ಆಡಳಿತ ನಡೆಸಿದ ಉದಾಹರಣೆ ಇಲ್ಲ. ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ವಿಧಾನಸೌಧವಿದ್ದು, ಅಲ್ಲೇ ಕೆಲಸ ಮಾಡಬೇಕು. ಅದೇ ದೇಶದ ಸಂಪ್ರದಾಯ. ಆದರೆ ಕುಮಾರಸ್ವಾಮಿ ಅವರು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಗುತ್ತಿಗೆದಾರರು ಹಾಗೂ ಇತರರನ್ನು ರಹಸ್ಯವಾಗಿ ಭೇಟಿಯಾಗಿ ಖಾಸಗಿ ವ್ಯವಹಾರ ನಡೆಸಲು ನಗರದ ತಾಜ್ ವೆಸ್ಟ್‌ಎಂಡ್ ಹೋಟೆಲ್‌ನಲ್ಲಿ ಕೊಠಡಿ ಮಾಡಿಕೊಂಡಿದ್ದಾರೆ. ವರ್ಗಾವಣೆ ದಂಧೆ ನಡೆಸಲು ಹೋಟೆಲ್ ಬಳಸಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿಯವರಿಗೆ ಖಾಸಗಿ ಬದುಕು ಬೇಕೆನಿಸಿದ್ದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಏಕಿರಬೇಕು. ರಾಜೀನಾಮೆ ನೀಡಿ ಖಾಸಗಿ ಬದುಕು ನಡೆಸಬಹುದು ಎಂದು ತಿಳಿಸಿದರು.
ಆಡಳಿತ ನಡೆಸಲಾಗದೆ ಹತಾಶೆಗೊಂಡಿರುವ ಕುಮಾರಸ್ವಾಮಿಯವರು, ರೈತರು ಹಾಗೂ ಮಾಧ್ಯಮದವರನ್ನು ಅವಮಾನ ಮಾಡುತ್ತಿದ್ದಾರೆ. ಅವಮಾನದ ಮೇಲೆ ಅವಮಾನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.
ಪಾಪದ ಕೂಸು: “ನೈಸ್’ ಯೋಜನೆ ಅಕ್ರಮ ಸಂಬಂಧ ಕ್ರಮ ಕೈಗೊಳ್ಳುವ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾತನಾಡಿದ್ದಾರೆ. ಆ ಯೋಜನೆ ಅವರದೇ ಪಾಪದ ಕೂಸು. ಅದನ್ನು ಅವರು ಮರೆತಂದಿದೆ. ಹಾಗೆಯೇ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ ಎಂದು ದೇವೇಗೌಡರು ಹೇಳಿದ್ದಾರೆ. ಆದರೆ ಅದಕ್ಕೆ ಸ್ಪಷ್ಟನೆ ನೀಡಿಲ್ಲ. ಅವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಇಡೀ ವಿಶ್ವವೇ ಹೊಗಳುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಸಂಕಷ್ಟದಲ್ಲಿ ಇಲ್ಲ. ಬದಲಿಗೆ ಎಚ್.ಡಿ.ಕುಮಾರಸ್ವಾಮಿ ಆಡಳಿತವಿರುವ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸಂಕಷ್ಟಕ್ಕೆ ಸಿಲುಕಿದೆ ಎಂದು ತಿಳಿಸಿದರು.