Advertisement
ಗುಬ್ಬಿ ಬಸ್ ನಿಲ್ದಾಣದ ಎದುರಿಗೆ ನಿಂತು ನೋಡಿದ್ರೆ ನಿಮಗೆ “ಅರಳಿಮರದ ಹೋಟೆಲ್’ ಎಂಬ ದೊಡ್ಡ ನಾಮಫಲಕ ಕಾಣುತ್ತದೆ. ಅರಳಿಮರದ ಕಟ್ಟೆಯ ಪಕ್ಕದಲ್ಲೇ ಈ ಹೋಟೆಲ್ ಇದ್ದಿದ್ರಿಂದ, ಜನರೂ ಹೆಚ್ಚಾಗಿ ಆ ಮರದ ಹೆಸರಿಂದ ಗುರುತಿಸುತ್ತಿದ್ದ ಕಾರಣ ಹೋಟೆಲ್‌ಗೆ ಅರಳಿಮರದ ಹೆಸರನ್ನೇ ನಾಮಕರಣ ಮಾಡಲಾಗಿದೆ. ಮೂಲತಃ ಚಿಕ್ಕನಾಯಕನಾಯಕಹಳ್ಳಿ ತಾಲೂಕಿನ ಕಾತ್ರಿಕೆಹಾಳ್‌ನಿಂದ ಕೆಲಸ ಅರಸಿ ಗುಬ್ಬಿಗೆ ಬಂದ ರೇಣುಕಾರಾಧ್ಯ ಅವರು, 1978ರಲ್ಲಿ ಬಸ್ ನಿಲ್ದಾಣದ ಬಳಿಯೇ ಚಿಕ್ಕದಾಗಿ ಪೆಟ್ಟಿಗೆ ಇಟ್ಟುಕೊಂಡು ಟೀ, ಕಾಫಿ ಜೊತೆ ಮನೆಯಲ್ಲೇ ತಿಂಡಿ ಮಾಡಿಕೊಂಡು ತಂದು ಮಾರಾಟ ಮಾಡುತ್ತಿದ್ದರು. ಇವರಿಗೆ ಪತ್ನಿ ಉಮಾದೇವಿ ಹಾಗೂ ಸಹೋದರ ಕಾಂತರಾಜು ಸಾಥ್ ನೀಡುತ್ತಿದ್ದರು. ಆಗ ಹೋಟೆಲ್ ನೇರಳೆಮರದ ಕೆಳಗೆ ಇದ್ದ ಕಾರಣ ಇದನ್ನು ನೇರಳೆಮರದ ಹೋಟೆಲ್ ಎಂದು ಕರೆಯುತ್ತಿದ್ದರು. ನಾಲ್ಕೈದು ವರ್ಷಗಳ ನಂತರ ರೇಣುಕಾರಾಧ್ಯ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಆಗಿ ಸೇರಿದರು. ನಂತರ ಕಾಂತರಾಜು ನೌಕರರನ್ನು ಇಟ್ಟುಕೊಂಡು ಹೋಟೆಲ್ ಮುಂದುವರಿಸಿಕೊಂಡು ಬಂದರು. 15 ವರ್ಷಗಳ ಹಿಂದೆ ರಸ್ತೆ ವಿಸ್ತರಣೆ ಮಾಡಿದ ಕಾರಣ, ಹೋಟೆಲ್‌ಅನ್ನು ತೆರವು ಮಾಡಲಾಯಿತು. ನಂತರ ಬಸ್ ನಿಲ್ದಾಣದ ಎದುರಿಗೆ ಹೋಟೆಲ್‌ಅನ್ನು ಮತ್ತೆ ಪ್ರಾರಂಭಿಸಲಾಯಿತು. ಆಗ ಹೋಟೆಲ್ ಪಕ್ಕದಲ್ಲಿ ಅರಳಿಮರವಿದ್ದ ಕಾರಣ ಅದನ್ನೇ ನಾಮಕರಣ ಮಾಡಲಾಯಿತು. ಈಗ ಹೋಟೆಲ್ ಅನ್ನು ಕಾಂತರಾಜು ಅಣ್ಣನ ಮಗ ವಿವೇಕ್ ನೋಡಿಕೊಳ್ಳುತ್ತಿದ್ದಾರೆ. ಇವರು ಬೆಂಗಳೂರಿನಲ್ಲಿ 8 ವರ್ಷ ಬಿಪಿಒ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಚಿಕ್ಕಪ್ಪನ ಹೋಟೆಲ್ ನೋಡಿಕೊಳ್ಳಲು ಉದ್ದೇಶದಿಂದ, ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೋಟೆಲ್ ನಡೆಸಿಕೊಂಡು ಹೋಗುತ್ತಿದ್ದಾರೆ. ಉಸ್ತುವಾರಿ ಬದಲಾಗಿರಬಹುದು. ಆದ್ರೆ, 40 ವರ್ಷಗಳ ರುಚಿ ಹಾಗೇ ಇದೆ. ಈಗಲೂ ಗ್ರಾಹಕರು, ತಟ್ಟೆ ಇಡ್ಲಿ, ಬಟಾಣಿ ಉಸ್ಲಿ, ಚಿತ್ರಾನ್ನ ಹೀಗೆ ಹೋಟೆಲ್‌ನ ನಾಲ್ಕೈದು ತಿಂಡಿಗೆ ಹೊಂದಿಕೊಂಡಿದ್ದಾರೆ. ಆದ ಕಾರಣ ಬೇರೆ ತಿಂಡಿಗಳನ್ನು ಮಾಡಲು ಹೋಗಿಲ್ಲ ಎನ್ನುತ್ತಾರೆ ವಿವೇಕ. ಅಡುಗೆ ಕೆಲಸ ಮಾಡುತ್ತಿದ್ದವರು ಹೋಟೆಲ್ ಪ್ರಾರಂಭವಾದಾಗಿನಿಂದಲೂ ಇಲ್ಲೇ ಇರುವುದು ಈ ಹೋಟೆಲ್ ತನ್ನ ಹಳೇ ರುಚಿ ಉಳಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ. ಈಶ್ವರಯ್ಯ, ರಾಜಣ್ಣ ಹೀಗೆ ಹಲವು ಮಂದಿ ನೌಕರರು ಈ ಹೋಟೆಲ್‌ನಲ್ಲೇ 25 ವರ್ಷ ಕಳೆದಿದ್ದಾರೆ.
ತಟ್ಟೆ ಇಡ್ಲಿ, ಚಿತ್ರಾನ್ನ, ಬಟಾಣಿ ಉಸ್ಲಿ ಈ ಹೋಟೆಲ್‌ನ ವಿಶೇಷ. ಕೆಂಪ್ ಚಟ್ನಿ ರುಚಿ ಬಾಯಿಚಪ್ಪರಿಸುವಂತೆ ಮಾಡುತ್ತೆ. ಮಿಕ್ಸ್ ತಿಂಡಿಯಾಗಿ ತಟ್ಟೆ ಇಡ್ಲಿ, ವಡೆ ಅಥವಾ ಪೂರಿ ಜೊತೆ ವಡೆ ಕೊಡ್ತಾರೆ. ದರ 30 ರೂ. ಇತರೆ ತಿಂಡಿ, ಊಟ:
ಬೆಳಗ್ಗೆ ಇಡ್ಲಿ, ಪೂರಿ, ವಡೆ, ಟೊಮೆಟೋ ರೈಸ್‌ಬಾತ್, ಮಧ್ಯಾಹ್ನ ಊಟಕ್ಕೆ ಮೊಸರನ್ನ, ಚಿತ್ರಾನ್ನ, ಅನ್ನ, ಸಂಬಾರ್ ಜತೆ ಎರಡು ಈರುಳ್ಳಿ ಬೋಂಡಾ ಸಿಗುತ್ತದೆ. ದರ 30 ರೂ.. ಇನ್ನು 3.30 ರಿಂದ ಸಂಜೆ 7ರವರೆಗೆ ಮಸಾಲೆ ದೋಸೆ(40 ರೂ.), ಸೆಟ್, ಖಾಲಿ ದೋಸೆ (30 ರೂ.), ಪೇಪರ್ ದೋಸೆ (50 ರೂ.) ಸಿಗುತ್ತದೆ. ಅವರೇಕಾಯಿ ಸಿಜನ್‌ನಲ್ಲಿ ಅವರೇಕಾಳು ಉಸ್ಲಿ ಮಾಡ್ತಾರೆ. ವಾರದಲ್ಲಿ ನಾಲ್ಕೈದು ದಿನ ನುಗ್ಗೇಕಾಯಿ ಸಾಂಬಾರ್ ಕಾಯಂ ಇರುತ್ತದೆ.
Related Articles
ಬೆಳಗ್ಗೆ 5ರಿಂದ ರಾತ್ರಿ 7.15ರವರೆಗೆ, ಭಾನುವಾರ ಮತ್ತು ಹಬ್ಬಗಳಲ್ಲಿ ಮಧ್ಯಾಹ್ನ 11.30ವರೆಗೆ ಮಾತ್ರ ತೆರೆದಿರುತ್ತೆ.
Advertisement
ಹೋಟೆಲ್ ವಿಳಾಸ:ಬೆಂಗಳೂರು -ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಪಕ್ಕ, ಬಸ್ ನಿಲ್ದಾಣದ ಎದುರು. ಗುಬ್ಬಿ ಪಟ್ಟಣ. ಭೋಗೇಶ ಆರ್. ಮೇಲುಕುಂಟೆ/ಕೆಂಪರಾಜು ಜಿ.ಆರ್.