ಬೆಂಗಳೂರು: ನಗರದಲ್ಲಿ ಜಾರಿಯಲ್ಲಿರುವ ಕೋವಿಡ್ ರಾತ್ರಿ ಕರ್ಫ್ಯೂ ಸಮಯ ಬದಲಾವಣೆಗೆ ಒತ್ತಾಯಿಸಿರುವ ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಾಹಾರ ಮಂದಿರಗಳ ಸಂಘದ ಪದಾಧಿಕಾರಿಗಳು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ರನ್ನು ಇಂದು ಭೇಟಿ ಮಾಡಿ ಚರ್ಚೆ ನಡೆಸಿದರು.
ಸದಾಶಿವನಗರದ ಸುಧಾಕರ್ ನಿವಾಸಕ್ಕೆ ಭೇಟಿ ನೀಡಿದ ಅವರು, ಕೋವಿಡ್ ರಾತ್ರಿ ಕರ್ಫ್ಯೂನ್ನು ರಾತ್ರಿ ಹತ್ತು ಗಂಟೆ ಬದಲಿಗೆ ತಮಿಳುನಾಡು ಮಾದರಿಯಂತೆ ಹನ್ನೊಂದು ಗಂಟೆಯವರೆಗೆ ವಿಸ್ತರಿಸುವಂತೆ ಒತ್ತಾಯ ಮಾಡಿದರು.
ಇದನ್ನೂ ಓದಿ:ಸುಪ್ರೀಂಕೋರ್ಟ್ ನ 44 ಸಿಬ್ಬಂದಿಗೆ ಕೋವಿಡ್ ದೃಢ: ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ
ರಾತ್ರಿ ಹತ್ತು ಗಂಟೆಗೆ ಹೊಟೇಲ್ ಗಳ ಬಾಗಿಲು ಮುಚ್ಚುವುದು ಕಷ್ಟವಾಗಲಿದೆ. ರಾತ್ರಿಯ ವೇಳೆ ಊಟಕ್ಕೆ ಹೆಚ್ಚು ಜನರು ಬರುತ್ತಾರೆ. ಅಲ್ಲದೆ ಹತ್ತು ಗಂಟೆಯೊಳಗೆ ಹೊಟೇಲ್ ಕಾರ್ಮಿಕರು ತಮ್ಮ ಮನೆಗಳಿಗೆ ಹೋಗಲು ಕಷ್ಟವಾಗುತ್ತದೆ. ಆದ್ದರಿಂದ ಕರ್ಫ್ಯೂ ಸಮಯವನ್ನು ಹನ್ನೊಂದು ಗಂಟೆಗೆ ವಿಸ್ತರಿಸಿ ಬೆಳಗ್ಗೆ ಆರು ಗಂಟೆಯವರೆಗೂ ಮಾಡಿ ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ನಿರಾಕರಿಸಿದ ಸಚಿವರು: ಸಂಘದ ಈ ಮನವಿಗೆ ಸಚಿವ ಸುಧಾಕರ್ ನಿರಾಕರಿಸಿದ್ದಾರೆ. ಆದರೆ, ಇದು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಈಗಿರುವ ಸಮಯ ಬದಲಾವಣೆ ಸಾಧ್ಯವೇ ಇಲ್ಲ. ಕೋವಿಡ್ ನಿಯಂತ್ರಣ ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗುವ ಆತಂಕವಿದೆ. ಹಾಗಾಗಿ ಸಮಯ ಬದಲಾವಣೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಂಧಾನವೊಂದೇ ಮಾರ್ಗ : ಉದಯವಾಣಿ ಸಮೀಕ್ಷೆಯಲ್ಲಿ ಜನಮತ
ಲಾಕ್ ಡೌನ್ ಮಾಡಬೇಡಿ: ಸಭೆಯ ಬಳಿಕ ಮಾತನಾಡಿದ ಕರ್ನಾಟಕ ರಾಜ್ಯ ಹೊಟೇಲ್ ಉಪಹಾರ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್, ಕಳೆದ ವರ್ಷ ಲಾಕ್ ಡೌನ್ ಆದ ಬಳಿಕ ಮುಚ್ಚಿರುವ ಬಹುತೇಕ ಹೊಟೇಲ್ ಪುನಃ ಆರಂಭವಾಗಿಲ್ಲ. ಮತ್ತೆ ಲಾಕ್ ಡೌನ್ ಆದರೆ ಕಷ್ಟ. ಹೀಗಾಗಿ ಲಾಕ್ ಡೌನ್ ಮಾಡಬೇಡಿ ಎಂದು ಮನವಿ ಮಾಡಿದ್ದೇವೆ. ಅಂತಹ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಸಚಿವರು ಹೇಳಿದ್ದಾರೆ ಎಂದರು.