ಮೈಸೂರು: ಜಿಲ್ಲೆಯಲ್ಲಿ ಸೋಮವಾರದಿಂದ ಹೋಟೆಲ್, ಮಾಲ್‌ಗಳು ಪುನಾರಂಭಗೊಂಡು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ನಗರದಲ್ಲಿರುವ ಮಾಲ್ ಆಫ್ ಮೈಸೂರು, ಜಯಲಕ್ಷ್ಮೀಪುರಂನ ಬಿ.ಎಂ. ಹೆಬಿಟೇಟ್ ಮಾಲ್, ನಜರ್ ಬಾದ್‌ನ ಫೋರಂ ಮಾಲ್‌ಗಳು ಸೇರಿದಂತೆ ನಗರದಲ್ಲಿರುವ 750 ಹೋಟೆಲ್, ರೆಸ್ಟೋರೆಂಟ್, ವಸತಿ ಗೃಹ, ಲಾಡ್ಜ್ಗಳು ಕಾರ್ಯಾರಂಭ ಮಾಡಿವೆ. ಜಿಲ್ಲೆಯಲ್ಲಿ ಮತ್ತೆ ಪ್ರವಾಸೋದ್ಯಮ ಚಟುವಟಿಕೆ ನಿಧಾನಗತಿಯಲ್ಲಿ ಗರಿಗೆದರಲಿವೆ.
ಗ್ರಾಹಕರ ಕೊರತೆ: ಶಾಲಾ- ಕಾಲೇಜು, ಬಾರ್, ಈಜುಕೊಳ, ಜಿಮ್, ಕ್ಲಬ್ ಚಿತ್ರಮಂದಿರ, ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳ ಮೇಲಿನ ನಿರ್ಬಂಧ ಮುಂದುವರಿದಿದೆ. ಮೊದಲ ದಿನ ಮಾಲ್‌ಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜನ ಜಂಗುಳಿ ಕಾಣಲಿಲ್ಲ. ಇನ್ನು ಕೆಲ ಹೋಟೆಲ್‌ಗಳು ಕೂಡ ಗ್ರಾಹಕರ ಕೊರತೆ ಎದುರಿಸಿದವು.
ಎಲ್ಲ ಮಾಲ್ ಮತ್ತು ಹೋಟೆಲ್ ಗಳಲ್ಲಿ ಮುಂಜಾಗ್ರತೆಯಿಂದ ಗ್ರಾಹಕರು, ಉದ್ಯೋಗಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜತೆಗೆ ಮಾಸ್ಕ್ ಧರಿಸಬೇಕು. ಆಗಾಗ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಸುವ, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಕೋವಿಡ್-19 ವೈರಾಣು ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಶಾಶ್ವತ ಫಲಕ ಅಳವಡಿಸಲಾಗಿದೆ.
ಹೋಟೆಲ್‌ಗಳಿಗೆ ಬರುವವರು ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಪಾಲಿಸಲಾಗುತ್ತದೆ.
-ನಾರಾಯಣಗೌಡ, ಅಧ್ಯಕ್ಷರು, ಹೋಟೆಲ್ ಮಾಲೀಕರ ಸಂಘ