Advertisement

ಕಣ್ಮುಂದೆ ಕ್ಷಣದಲ್ಲಿ ಹೋಟೆಲ್‌ ಸ್ಮಶಾನ

09:32 AM Apr 24, 2019 | Team Udayavani |

ಬೆಂಗಳೂರು: ಕಾಫಿ ಕುಡಿಯುತ್ತಿದ್ದ ಹೋಟೆಲ್‌ ಭಾರಿ ಸ್ಫೋಟಕ್ಕೆ ಅಕ್ಷರಶಃ ಸ್ಮಶಾನವಾಗಿ ಹೋಯಿತು. ಕ್ಷಣದ ಹಿಂದೆ ಮುಂದಿನ ಟೇಬಲ್‌ನಲ್ಲಿ ಕುಳಿತು ನಗುನಗುತ್ತಾ ಚಹಾ ಕುಡಿಯುತ್ತಿದ್ದ ಇಂಡೋನೇಷಿಯಾ ದಂಪತಿ ಶವವಾಗಿದ್ದರು. ಸ್ಫೋಟದಿಂದ ಚೆಲ್ಲಾಪಿಲ್ಲಿಯಾಗಿದ್ದ ಜನರ ದೇಹಗಳು, ಪ್ರಾಣ ಉಳಿಸಿಕೊಳ್ಳಲು ಶವಗಳನ್ನು ದಾಟಿಕೊಂಡು ಬಂದೆವು, ವಿಮಾನ ಏರುವರೆಗೆ ಪ್ರಾಣ ಭಯ ಇನ್ನಿಲ್ಲದಂತೆ ಕಾಡಿತ್ತು, ದೇವರ ದಯೆಯಿಂದ ಜೀವ ಉಳಿಯಿತು.

Advertisement

ಶ್ರೀಲಂಕಾದ ಈಸ್ಟರ್‌ನಲ್ಲಿ ಇತ್ತೀಚೆಗೆ ಬಾಂಬ್‌ ಸ್ಫೋಟವನ್ನು ಕಣ್ಣಾರೆ ಕಂಡು ಪ್ರಾಣಾಪಾಯದಿಂದ ಪಾರಾಗಿ ಬಂದಿರುವ ಬೆಂಗಳೂರಿನ ಡಾಲರ್ ಕಾಲೋನಿ ನಿವಾಸಿ ರಾಜಗೋಪಾಲ್‌ ಶ್ರೀಲಂಕಾದಲ್ಲಿ ತಾವು ಕಂಡದ್ದನ್ನು ವಿವರಿಸಿದ್ದು ಹೀಗೆ.

ವ್ಯವಹಾರ ನಿಮಿತ್ತ ಸ್ನೇಹಿತರೊಂದಿಗೆ ಶ್ರೀಲಂಕಾಗೆ ಹೋಗಿದ್ದ ಉದ್ಯಮಿ ರಾಜಗೋಪಾಲ್‌ ಬಾಂಬ್‌ ಸ್ಫೋಟ ಸಂಭವಿಸಿದ ಈಸ್ಟರ್‌ನ ಶಾಂಗ್ರಿಲಾ ಹೋಟೆಲ್‌ನಲ್ಲಿಯೇ ತಂಗಿದ್ದರು. ಘಟನೆಯ ದಿನ ಬಾಂಬ್‌ ಸ್ಫೋಟಿಸಿದ ಜಾಗದಿಂದ ಕೇವಲ 10 ಅಡಿ ದೂರದಲ್ಲಿದ್ದ ರಾಜಗೋಪಾಲ್‌ ಹಾಗೂ ಸ್ನೇಹಿತರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುರಕ್ಷಿತವಾಗಿ ಬೆಂಗಳೂರಿನಗೆ ಮರಳಿದ ಬಳಿಕ “ಉದಯವಾಣಿ’ ಯೊಂದಿಗೆ ತಮ್ಮ ಅನುಭವ ಹಂಚಿಕೊಂಡರು.

ಈಸ್ಟರ್‌ನಲ್ಲಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಕಾಫಿ ಕುಡಿಯಲು ಮೂವರು ಸ್ನೇಹಿತರು ಹೋದೆವು. ಈ ವೇಳೆ ನಮ್ಮ ಎದುರಿನ ಟೇಬಲ್‌ನಲ್ಲಿ ಇಂಡೋನೇಷಿಯಾ ದಂಪತಿಯೂ ಕಾಫಿ ಕುಡಿಯುತ್ತಿದ್ದರು. ಬೆಳಗ್ಗೆ 8.55 ಸುಮಾರಿಗೆ ಸಿಲಿಂಡರ್‌ ಸ್ಫೋಟಗೊಂಡಂತೆ ಭಾರಿ ಸದ್ದಾಯಿತು. ಗಾಬರಿಯಿಂದ ಕಣ್ಣುಮುಚ್ಚಿಕೊಂಡೆವು. ಕಣ್ಣು ತೆರೆದು ನೋಡಿದಾಗ ಸುಮಾರು 50-60 ಮಂದಿ ಶವಗಳಾಗಿದ್ದರು. ಇನ್ನು ಕೆಲವರು ಗಾಯಗಳಿಂದ ನರಳಾಡುತ್ತಿದ್ದರು ದೃಶ್ಯಗಳನ್ನು ಭಯ ಆಘಾತವಾಯಿತು ಎಂದರು.

ನಾವು ಮೂರು ಜನರು ಕಂಬಕ್ಕೆ ಹೊಂದಿಕೊಂಡಿದ್ದ ಟೇಬಲ್‌ನಲ್ಲಿ ಕುಳಿತಿದ್ದರಿಂದ ಘಟನೆಯಲ್ಲಿ ನಮಗೇನು ಆಗಲಿಲ್ಲ. ಭಯದಿಂದ ಹೋಟೆಲ್‌ ಕಡೆಗೆ ಹೋಗಲು ಮುಂದಾದರೆ, ಗಾಯಗೊಂದು ನರಳಾಗುತ್ತಿದ್ದ ಬೆಂಗಳೂರಿನವರನ್ನು ಆ್ಯಂಬುಲೆನ್ಸ್‌ಗೆ ಸಾಗಿಸಿದೆವು. ಎಲ್ಲಿ ನೋಡಿದರೂ ರಕ್ತ, ಮಕ್ಕಳು ಸೇರಿದಂತೆ ಹತ್ತಾರು ಜನರು ಸತ್ತಿರುವುದು ನೋಡಿ ದುಃಖ ಹುಮ್ಮಲಿಸಿ ಬಂತು. ಘಟನೆಯಿಂದ ಶಾಕ್‌ಗೆ ಒಳಗಾಗಿದ್ದ ನಮಗೆ ಮಾತುಗಳು ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಮನಸ್ಸಿನಲ್ಲಿ ಭಯ ದುಗುಡ: ಐದಾರು ನಿಮಿಷಗಳಲ್ಲಿ ನಾವಿದ್ದ ಸ್ಥಳದಿಂದ 15-16 ಅಡಿಯಲ್ಲಿ ಮತ್ತೂಂದು ಸ್ಫೋಟವಾಗಿತ್ತು. ಹೋಟೆಲ್‌ನಲ್ಲಿದ್ದ ನಮ್ಮಿಬ್ಬರು ಸ್ನೇಹಿತರಿಗೂ ತೊಂದರೆಯಾಗಿಬಹುದೆಂದು ಆತಂಕವಾಯಿತು. ಆದರೆ, ಅದೃಷ್ಟವಶಾತ್‌ ಅವರಿಗೂ ಏನು ಆಗಿರಲಿಲ್ಲ.

ಹೋಟೆಲ್‌ನಲ್ಲಿ ಬದುಕುಳಿದವರೆಲ್ಲರೂ ಸಂಜೆ 7.30ರವರೆಗೆ ಲಾಬಿಯಲ್ಲಿ ಕಳೆದವು. ಭದ್ರತೆಯ ದೃಷ್ಟಿಯಿಂದ ಯಾರಿಗೂ ಕೊಠಡಿಗೆ ಹೋಗಲು ಅವಕಾಶ ಕೊಡಲಿಲ್ಲ. ಸಂಜೆ 7.30ಕ್ಕೆ ಶಾಂಗ್ರಿಲಾ ಹೋಟೆಲ್‌ನಿಂದ ಸಮೀಪದ ತಾಜ್‌ ಹೋಟೆಲ್‌ಗೆ ಭದ್ರತೆಯೊಂದಿಗೆ ನಮ್ಮನ್ನು ಸಾಗಿಸಲಾಯಿತು. ಬೆಳಗ್ಗೆಯೂ ಭದ್ರತೆಯೊಂದಿಗೆ ವಿಮಾನ ನಿಲ್ದಾಣಕ್ಕೆ ತಂದು ಬಿಟ್ಟರು.

ವಿಮಾನ ಏರುವವರೆಗೂ ಮನಸ್ಸಿನಲ್ಲಿ ಒಂದು ರೀತಿಯ ಭಯ. ನಮ್ಮ ಕಣ್ಣ ಮುಂದೆಯೇ ಹತ್ತಾರು ಜನ ಸತ್ತರೂ ಸಹಾಯ ಮಾಡಲಾಗಲಿಲ್ಲ ಎಂಬ ಬೇಸರ ನಡುವೆ ವಿಮಾನ ಹತ್ತಿದೆವು. ಬೆಂಗಳೂರು ತಲುಪಿದಾಗ ಭಯ ದೂರವಾಯಿತಾದರೂ, ಹತ್ತಾರು ಸಾವು ಕಂಡ ಆಘಾತದಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ ಎಂದು ರಾಜಗೋಪಾಲ್‌ ವಿವರಿಸಿದರು.

ಶ್ರೀಲಂಕಾದಿಂದ ಬೆಂಗಳೂರಿಗೆ ಆಗಮಿಸಿದ ಕನ್ನಡಿಗರು
ದೇವನಹಳ್ಳಿ: ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಏರ್‌ ಇಂಡಿಯಾ ವಿಮಾನದ ಮೂಲಕ ಮಧ್ಯರಾತ್ರಿ 2.30ರ ಸಮಯದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿಗಳಾದ ಮಯೂರ್‌, ಅಮೂಲ್ಯ ದಂಪತಿ ಹಾಗೂ ನಿತೀಶ್‌ ನಾಯ್ಕ ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ಶ್ರೀಲಂಕಾದಿಂದ ಕ್ಷೇಮವಾಗಿ ಆಗಮಿಸಿದ್ದಾರೆ.

ನೆರೆಯ ಆಂಧ್ರದ ಕರ್ನೂಲು ಮೂಲದ 30 ಮಂದಿಯೂ ಇದೇ ವೇಳೆ ಏರ್‌ ಇಂಡಿಯಾ ವಿಮಾನದಲ್ಲಿ ನಗರಕ್ಕೆ ಬಂದಿಳಿದರು. ಶ್ರೀಲಂಕಾದ ಘಟನಾವಳಿಯ ಬಗ್ಗೆ ಮಾಧ್ಯಮಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡರು. ನಿತೀಶ್‌ ನಾಯ್ಕ ಮಾತನಾಡಿ “ಬಾಂಬ್‌ ಸ್ಫೋಟಗೊಂಡ ಸ್ಥಳದ ಪಕ್ಕದ ಹೋಟೆಲ್‌ನಲ್ಲಿ ನಾವು ಉಳಿದುಕೊಂಡಿದ್ದೆವು. ಅದೃಷ್ಟವಶಾತ್‌ ಘಟನೆ ನಡೆದ ದಿನ ಬೇರೊಂದು ಸ್ಥಳಕ್ಕೆ ತೆರಳಿದ್ದೆವು.

ನಾವು ತಂಗಿದ್ದ ಸ್ಥಳದ ಪಕ್ಕದಲ್ಲಿದ್ದ ಶಾಂಗ್ರೀಲಾ ಹೋಟೆಲ್‌ನಲ್ಲಿ ಸ್ಫೋಟ ಸಂಭವಿಸಿದ ವಿಷಯ ತಿಳಿದು ಆಘಾತವಾಯಿತು. ದೇವರ ದಯೆಯಿಂದ ನಾವು ಬೆಂಗಳೂರಿಗೆ ಮರಳಿದ್ದೇವೆ’ ಎಂದರು. “ಅಲ್ಲಿನ ಘಟನೆಗಳನ್ನು ನೆನಪಿಸಿಕೊಂಡರೆ ಮೈ ನಡುಗುತ್ತದೆ. ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಮಯೂರ್‌ ಆತಂಕದಿಂದ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next