Advertisement

ಶುಚಿತ್ವ ಕಾಪಾಡದಿದ್ದರೆ ಹೋಟೆಲ್‌ ಬಂದ್‌: ಡಿಸಿ

09:26 AM Jan 23, 2019 | Team Udayavani |

ಚಿತ್ರದುರ್ಗ: ಶುಚಿತ್ವ ಕಾಪಾಡದ ಹೋಟೆಲ್‌ಗ‌ಳನ್ನು ಕೂಡಲೇ ಬಂದ್‌ ಮಾಡುವಂತೆ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಸೂಚನೆ ನೀಡಿದರು.

Advertisement

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಶತಮಾನೋತ್ಸವದ ಪ್ರಯುಕ್ತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಪೊಲೀಸ್‌ ಇಲಾಖೆ, ವಕೀಲರ ಸಂಘ ಹಾಗೂ ವಿವಿಧ ಸಂಘ, ಸಂಸ್ಥೆಗಳ ಆಶ್ರಯದಲ್ಲಿ ನಗರದ ವಿವಿಧೆಡೆ ಹೋಟೆಲ್‌ಗ‌ಳಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

ಹೋಟೆಲ್‌ಗ‌ಳ ಪಾತ್ರೆ, ತಟ್ಟೆ, ಬಾಂಡ್ಲಿ, ಅಡುಗೆ ಮನೆ, ಕುಡಿಯುವ ನೀರಿನ ವ್ಯವಸ್ಥೆ, ತಟ್ಟೆಗಳು, ಕುಡಿಯುವ ನೀರಿನ ಲೋಟ ಪ್ರತಿಯೊಂದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಗಾಂಧಿ ವೃತ್ತದ ಸಮೀಪ ಇರುವ ದೀಪಾ ಹೋಟೆಲ್‌, ಚನ್ನಗಿರಿ ಹೋಟೆಲ್‌ಗ‌ಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ತೀವ್ರ ತರದ ಗಲೀಜು ಕಂಡು ಆಶ್ಚರ್ಯ ವ್ಯಕ್ತಪಡಿಸಿದರಲ್ಲದೆ ಯಾವುದೇ ಕಾರಣಕ್ಕೂ ರಿನವೇಷನ್‌ ಮಾಡದೆ ಹೋಟೆಲ್‌ ಆರಂಭಿಸದಂತೆ ಸೂಚಿಸಿದರು.

ಜನಗಳು ನೀವು ನೀಡುವಂತ ಗಲೀಜು ತಿನ್ನಬೇಕೆ? ಅವರು ಹಣ ನೀಡುವುದಿಲ್ಲವೇ? ಈ ರೀತಿಯಾದರೆ ಹೇಗೆ ಎಂದು ಹೋಟೆಲ್‌ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.

Advertisement

ಪ್ರತಿ ಹೋಟೆಲ್‌ನಲ್ಲಿ ಶುಚಿತ್ವ ಕಾಪಾಡಬೇಕು. ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ರುಚಿಯಾದ, ಸುಚಿಯಾದ ತಿಂಡಿ, ಊಟದ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಇದೇ ಸಂದರ್ಭದಲ್ಲಿ ನಗರಸಭೆಯ ಪರಿಸರ ಇಂಜಿನಿಯರ್‌ಗಳ ವಿರುದ್ಧ ಬೇಸರ ವ್ಯಕ್ತ ಪಡಿಸಿದ ಜಿಲ್ಲಾಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಹೋಟೆಲ್‌, ಬೀದಿ ಬದಿಯ ತಿಂಡಿ, ತಿನುಸು ಅಂಗಡಿಗಳು, ಇತರೆ ಆಹಾರ ಪದಾರ್ಥ ಮಾರಾಟ ಮಾಡುವಂತ ಕಡೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಕಾಪಾಡದಿದ್ದರೆ ಕೂಡಲೇ ನೋಟಿಸ್‌ ನೀಡಿ ಬಂದ್‌ ಮಾಡಿಸಬೇಕು. ಇದರಲ್ಲಿ ಲೋಪ ಕಂಡು ಬಂದರೆ ಕಾನೂನಾತ್ಮಕ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು.

ನಗರಸಭೆ ಆಯುಕ್ತ ಚಂದ್ರಪ್ಪನವರಿಗೂ ಸೂಚನೆ ನೀಡಿ ಪರಿಸರ ಇಂಜಿನಿಯರ್‌ಗಳು ಏನು ಮಾಡುತ್ತಿದ್ದಾರೆ ಎನ್ನುವ ಮೇಲ್‌ ಉಸ್ತುವಾರಿ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಹಿರಿಯ ಸಿವಿಲ್‌ ನ್ಯಾಯಾಧಿಧೀಶರಾದ ಎಸ್‌.ಆರ್‌. ದಿಂಡಲಕೊಪ್ಪ ಅವರು ಹೋಟೆಲ್‌ಗ‌ಳ ಅವ್ಯವಸ್ಥೆ ಪರಿಶೀಲಿಸಿ, ಹೋಟೆಲ್‌ಗ‌ಳ ಪರಿಸ್ಥಿತಿ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು. ಅತಿ ಹೆಚ್ಚು ಬೆಲೆ ಪಡೆದರೂ ಗ್ರಾಹಕರಿಗೆ ಸರಿಯಾದ ತಿಂಡಿ, ಊಟ ನೀಡುವುದಿಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ಈ ರೀತಿಯ ಅವ್ಯವಸ್ಥೆ ಸರಿಪಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ನೋಟಿಸ್‌ ಜಾರಿ: ನಗರದ ಮೆದೇಹಳ್ಳಿ ರಸ್ತೆ ಬದಿಯ ಅಂಗಡಿಗಳು ಹಾಗೂ ಸಂತೆ ಹೊಂಡದ ಬಳಿಯ ತರಕಾರಿ ಮಾರುಕಟ್ಟೆಗೆ ಡಿಸಿ ಆರ್‌. ವಿನೋತ್‌ ಪ್ರಿಯಾ ನೇತೃತ್ವದಲ್ಲಿ ಭೇಟಿ ನೀಡಿ ಪ್ಲಾಸ್ಟಿಕ್‌ ಬಳಸುತ್ತಿದ್ದ ಅಂಗಡಿ ಮಾಲೀಕರಿಗೆ ನೋಟಿಸ್‌ ನೀಡಲಾಯಿತು. ಅಂಗಡಿ ಮುಂಭಾಗವೇ ಕಸ ಹಾಕುತ್ತಿದ್ದ ಬಹುತೇಕರಿಗೆ ಎಚ್ಚರಿಕೆ ನೀಡಲಾಯಿತು.

ತಮ್ಮ ವ್ಯಾಪಾರ ಮುಗಿದ ಬಳಿಕ ಈ ಗಾಡಿಗಳನ್ನು ರಸ್ತೆ ಮೇಲೆ ಬಿಡದೆ ತೆಗೆದುಕೊಂಡು ಹೋಗಬೇಕು. ಇಲ್ಲವಾದಲ್ಲಿ ಮಾರಾಟ ಮಾಡಲು ಅವಕಾಶ ಕೊಡುವುದಿಲ್ಲ ಎಂದು ತಳ್ಳುವ ಗಾಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು. ನಗರಸಭೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next