ವೈವಿಧ್ಯಮಯ ಚಾಟ್‌ಗಳು, ಐಸ್ ಕ್ರೀಂಗಳನ್ನು ಪರಿಚಯಿಸಿದ ಹೋಟೆಲ್ ಅಂದರೆ ಅದು ಮಯೂರ. ಈಗ ಇದು ಸದ್ದಿಲ್ಲದೇ 45 ವರ್ಷಗಳನ್ನು ಪೂರೈಸಿದೆ. ಆರಂಭದಲ್ಲಿ ಸಾಂಪ್ರದಾಯಿಕ ತಿಂಡಿ, ವೈವಿಧ್ಯಮಯ ದೋಸೆಗಳು, ಮೃದುವಾದ ಇಡ್ಲಿ, ರುಚಿಯಾದ ಖಾರಾಬಾತ್, ಕೇಸರಿಬಾತ್, ಗರಿಗರಿಯಾದ ವಡೆ, ಘಮ, ಘಮ ಕಾಫಿಯಿಂದ ಹೆಸರಾಗಿತ್ತು. ನಂತರ 1981ರಲ್ಲಿ ಬಳ್ಳಾರಿಯಲ್ಲಿ
ಮೊದಲ ಬಾರಿಗೆ ಉತ್ತರ ಭಾರತದ ಪಾನಿಪೂರಿ, ಮಸಾಲಾ ಪುರಿ ಮುಂತಾದ ಚಾಟ್ ತಿನಿಸುಗಳನ್ನು ಪರಿಚಯಿಸಿತು.
Advertisement
ಇತ್ತೀಚೆಗೆ ಆರಂಭವಾದ ಸ್ಟಾರ್ ಹೋಟೆಲ್‌ಗಳ ಭರಾಟೆಯ ನಡುವೆಯೂ ತನ್ನ ಬೇಡಿಕೆ ಕಳೆದು ಕೊಳ್ಳದಿರುವುದುಈ ಹೋಟೆಲಿನಹೆಗ್ಗಳಿಕೆ. ಈ ಹೋಟೆಲ್‌ಗೆ ಮಯೂರ ಅಂತ ಹೆಸರಿಟ್ಟಿದ್ದರ ಹಿಂದೆ ನಟ ರಾಜ್‌ಕುಮಾರರ ಬಗೆಗಿನ ಅಭಿಮಾನವೇ ಕಾರಣವಂತೆ. ಇವರು ಹೋಟೆಲ್ ಪ್ರಾರಂಭಿಸುವಾಗ ಮಯೂರ ಚಿತ್ರ ಬಿಡುಗಡೆಯಾಗಿತ್ತು. ಜೊತೆಗೆ ಈ ಹೋಟೆಲ್ ಮಾಲೀಕರಾದ ಕುಂದಾಪುರ ಮೂಲದ ಹೋಟೆಲ್ ಉದ್ಯಮಿಗಳಾದ ದಿ.ಎಚ್.ಶ್ರೀನಿವಾಸ ರಾವ್ ಹಾಗೂ ಎಚ್.ವಿ.ಶಾಂತಾರಾಮ್ ಬನವಾಸಿಯ ಮಯೂರ ವರ್ಮನ ಅಭಿಮಾನಿಗಳಾಗಿದ್ದರು. ಹೀಗಾಗಿ ಹೋಟೆಲ್‌ಗೆ ಮಯೂರ ಅನ್ನೋ ಹೆಸರು ಇಟ್ಟರಂತೆ.
ಬಳ್ಳಾರಿ ಜಿಲ್ಲೆಯಲ್ಲಿ ದೊರೆಯುವ ಉತ್ಕೃಷ್ಟ ಗುಣ ಮಟ್ಟದ ಕಬ್ಬಿಣದ ಅದಿರನ್ನು ಬಳಸಿ ಜಿಲ್ಲೆಯ ತೋರಣಗಲ್ಲು ಗ್ರಾಮದಲ್ಲಿ ವಿಜಯ ನಗರ ಉಕ್ಕು ಕಾರ್ಖಾನೆಗೆ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಶಂಖು ಸ್ಥಾಪನೆ ಮಾಡಿದರು. ಜಿಲ್ಲೆಯಲ್ಲಿ ಔದ್ಯಮಿಕ ಚಟುವಟಿಕೆಗಳು ಮತ್ತು ಉದ್ಯಮಗಳ ವಿಸ್ತರಣೆಯಿಂದ ಇಲ್ಲಿ ಹೋಟೆಲ್ ಉದ್ಯಮಕ್ಕೆ ಉತ್ತಮ ವೇದಿಕೆ
ನಿರ್ಮಾಣವಾಗಬಹುದು ಎಂಬ ಕನಸಿನೊಂದಿಗೆ ದಾವಣಗೆರೆಯಲ್ಲಿಹೋಟೆಲ್ ನಡೆಸುತ್ತಿದ್ದ ಶ್ರಿನಿವಾಸ ರಾವ್ ಹಾಗೂ ಎಚ್.ವಿ. ಶಾಂತಾರಾಮ್ ಬಳ್ಳಾರಿಯಲ್ಲಿ ಈ ಹೋಟೆಲ್ ಪ್ರಾರಂಭಿಸಿದರು. ಹೋಟೆಲ್ ಮಯೂರ ಕಳೆದ ನಾಲ್ಕೂವರೆ ದಶಕಗಳಿಂದ
ಯಶಸ್ವಿಯಾಗಿ ಹೋಟೆಲ್ ನಡೆಸಿಕೊಂಡು ಬರುತ್ತಿರುವುದರ ಗುಟ್ಟೇನು ಅಂದರೆ- ನಗುಮೊಗದ ಸೇವೆ, ರಾಜಿ ಇಲ್ಲದ ಮನೋಭಾವ.
ಹೋಟೆಲ್ ಕಾರ್ಮಿಕರನ್ನು ಮನೆಯ ಮಕ್ಕಳಂತೆ ನೋಡಿ ಕೊಳ್ಳುತ್ತಿರುವುದು ನಮ್ಮ ಹೋಟೆಲ್‌ನ ಯಶಸ್ಸಿಗೆ ಕಾರಣ ಎನ್ನುತ್ತಾರೆ ಈಗಿನ ಮಾಲೀಕರಾದ ಮಧುಸೂದನ್ -ಮುರಳೀಧರ್. ಗೋಕಾಕ್ ಚಳುವಳಿ ನಂಟು
1980ರದಶಕದಲ್ಲಿ ರಾಜ್ಯಾದ್ಯಂತ ಗೋಕಾಕ್ ಚಳವಳಿ ತೀವ್ರಗೊಂಡು ಬಳ್ಳಾರಿಯನ್ನು ಪ್ರವೇಶಿಸಿದಾಗ ಡಾ.ರಾಜಕುಮಾರ್ ನೇತೃತ್ವದಲ್ಲಿ ಕನ್ನಡ ಚಲನಚಿತ್ರ ರಂಗದ ಪ್ರಮುಖರು ಆಶ್ರಯ ಪಡೆದಿದ್ದು ಹೋಟೆಲ್ ಮಯೂರದಲ್ಲಿ. ಇಲ್ಲಿನ ಶುಚಿ-ರುಚಿಯಾದ ಆಹಾರ ಮತ್ತು ಸ್ವತ್ಛತೆಯಿಂದ ಕೂಡಿದ ಲಾಡಿjಂಗ್ ಸೇವೆಗಳನ್ನು ಚಿತ್ರರಂಗದ ಗಣ್ಯರೆಲ್ಲಾ ಮುಕ್ತ ಕಂಠದಿಂದ ಕೊಂಡಾಡಿದ್ದರು.
Related Articles
ಪತ್ರಕರ್ತರಾಗಿ ಬಳ್ಳಾರಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಮತ್ತು ಬೇರೆಡೆಯಿಂದ ಆಗಮಿಸುವ ನೂರಾರು ಪತ್ರಕರ್ತರಿಗೆ ಹೋಟೆಲ್ ಮಯೂರ ಆಶ್ರಯ ತಾಣ. ಇಲ್ಲಿ ಪ್ರತಿ ರಾತ್ರಿ ಕಳೆದ 25 ವರ್ಷಗಳಿಂದ ಹೋಟೆಲ್ ಮಾಲೀಕರು ಪತ್ರಕರ್ತರಿಗೆ ಉಚಿತವಾಗಿ
ಬಿಸಿಯಾದ ಅನ್ನ, ರುಚಿಯಾದ ಸಾರು, ಗಟ್ಟಿಯಾದ ಮೊಸರಿನ ಸರಳ ಭೋಜನವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನೀಡುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ಹೋಟೆಲ್ ಮಯೂರದ ಆವರಣ ಇಂದಿಗೂ ಅನೇಕ ಸುದ್ದಿಗೋಷ್ಠಿ, ರಾಜಕೀಯ, ಸಾಮಾಜಿಕ,
ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೇಂದ್ರ ಬಿಂದುವಾಗಿದೆ.
Advertisement