ಹೆಡ್ ಮಾಸ್ಟರ್ ಕಚೇರಿಯಿಂದ ಗೌಡರ್ ಸರ್ ಎಲ್ಲ ತರಗತಿಗಳನ್ನು ವಿಚಾರಿಸುತ್ತ ನಮ್ಮ ತರಗತಿಗೆ ಬಂದರು. ಅವರ ರೌದ್ರಾವತಾರ ನೋಡಿ ನಾವು ಗಪ್‌ಚುಪ್ ಕುಳಿತುಬಿಟ್ಟಿದ್ದೆವು. ನಾವಿಲ್ಲದ ಸಮಯದಲ್ಲಿ ಹೆಡ್ ಮಾಸ್ಟರ್ ರೂಮಿಗೆ ಹೋಗಿ ಶಿಕ್ಷಕರ ಹಾಜರಿ ಪುಸ್ತಕದಲ್ಲಿನ ಈ ತಿಂಗಳ ಪುಟ ಕಿತ್ತಿರುವುದು ಯಾರು?’ ಎಂದು ಗದರಿದರು. ನಾನು ಉಪ್ಪಿಟ್ಟು ತಿಂದ ಹಾಳೆಯನ್ನು ನೆನಪಿಸಿಕೊಂಡೆ, ಅಯ್ಯಯ್ಯೋ, ಆ ಪುಟ ಅದೇ ಆಗಿತ್ತು.
ವಿದ್ಯಾರ್ಥಿ ಜೀವನದಲ್ಲಿ ಅಚ್ಚಳಿಯದೇ ಉಳಿಯುವ ನೆನಪುಗಳೆಂದರೆ ಪ್ರಾಥಮಿಕ ಶಾಲಾ ದಿನಗಳ ಕಾಲದವು. ಮೊದಲು ಕಲಿತ ಶಾಲೆ, ಮೊದಲು ಕಲಿಸಿದ ಟೀಚರ್ ನೆನಪಿನಂಗಳದಲ್ಲಿ ಭದ್ರವಾಗಿ ಉಳಿಯುತ್ತಾರೆ. ನಾನು ಓದಿದ ಪ್ರಾಥಮಿಕ ಶಾಲೆಗೆ ಸ್ವಂತ ಕಟ್ಟಡವಿರಲಿಲ್ಲ. ಜಮಾದಾರ ಎಂಬ ಅಡ್ಡಹೆಸರಿನ ವ್ಯಕ್ತಿಗೆ ಸೇರಿದ ಹಳೆಯ ಕಟ್ಟಡವೇ ನಮ್ಮ ಶಾಲೆ. ಮೇಲ್ಚಾಚವಣಿ ತಗಡಿನ ಶೀಟಿನದ್ದು. ಅಲ್ಲಲ್ಲಿ ಬಿರುಕುಬಿಟ್ಟ ಗೋಡೆಗಳಲ್ಲಿ ಅಳಿಲು,ಗಿಳಿ ಮುಂತಾದ ಪ್ರಾಣಿ-ಪಕ್ಷಿಗಳು ವಾಸವಾಗಿದ್ದವು. ಮಳೆಗಾಲದಲ್ಲಿ ತೂತುಬಿದ್ದ ತಗಡಿನ ಶೀಟು ಮತ್ತು ಬಿರುಕುಬಿಟ್ಟ ಗೋಡೆಗಳಿಂದ ನೀರು ತರಗತಿಯೊಳಗೆ ನುಗ್ಗುತ್ತಿತ್ತು. ಆಗ ನಾವೆಲ್ಲರೂ ಪಾಟಿಚೀಲ ಹಿಡಿದುಕೊಂಡು, ಕುಳಿತಲ್ಲಿಂದ ಎದ್ದುನಿಂತು ಬಿಡುತ್ತಿ¨ªೆವು. ತರಗತಿಯ ಒಳಗೂ ಕೊಡೆ ಏರಿಸಿ ನಿಂತದ್ದೂ ಇದೆ. ಆಗ ನಡೆದ ಕೆಲವು ಮರೆಯಲಾರದ ಘಟನೆಗಳಿವು..
ನಾಲ್ಕನೇ ತರಗತಿಯಲ್ಲಿ ವೆಂಕನಗೌಡರ್ ಸರ್ ಎಂಬುವರು ನಮ್ಮ ತರಗತಿಯ ಶಿಕ್ಷಕರಾಗಿದ್ದರು. ಬಿಳಿ ಧೋತರ, ಬಿಳಿಯ ನಿಲುವಂಗಿ, ಗಾಂಧಿ ಟೊಪ್ಪಿಗೆ ಧರಿಸಿ, ಕರಿಬಣ್ಣದ ಜುರಕಿ ಚಪ್ಪಲಿ ಹಾಕಿಕೊಂಡು ಅವರು ತರಗತಿಗೆ ಬಂದರೆ ನಾವೆಲ್ಲಾ ಸ್ತಬ್ಧರಾಗುತ್ತಿದ್ದೆವು. ನಮಗೆ ಕೂರಲು ಡೆಸ್ಕ್ಗಳಿರಲಿಲ್ಲ. ನೆಲದ ಮೇಲೆ ಕುಳಿತೇ ಅವರ ಪಾಠಕ್ಕೆ ಕಿವಿಯಾಗುತ್ತಿದ್ದೆವು.
ಗೌಡರ್ ಸರ್‌ಗೆ ಮಧ್ಯಾಹ್ನ ತಡೆಯಲಾರದಷ್ಟು ನಿದ್ರೆ ಬರುತ್ತಿತ್ತು. ಹೀಗಾಗಿ ಅವರು ಬೆಳಗ್ಗೆಯೇ ಎಲ್ಲ ಪಾಠ ಮಾಡಿ ಮುಗಿಸುತ್ತಿದ್ದರು. ಮಧ್ಯಾಹ್ನದ ಮೇಲೆ, ‘ಲೇ, ಚೋಟ್ಯಾ ಬಾರ್ಲೆ ಇಲ್ಲಿ! ತಗೋ ಈ ಬಳಪ. ಬೋರ್ಡ್ ಮ್ಯಾಲ ಮೂವತ್ತರ ಮಟ ಮಗ್ಗಿ ಬರಿ. ಸಾಲಿ ಬಿಡುವರೆಗೂ ಎಲ್ಲರಿಗೂ ಅನ್ನಿಸು’ ಎಂದು ನನಗೆ ಆಜ್ಞೆ ಮಾಡಿ, ತಾವು ತರಗತಿಯ ಬಾಗಿಲು ಹಾಕಿ, ಕುರ್ಚಿ ಮೇಲೆ ಕುಳಿತು ಗೋಡೆಗೆ ಕಾಲು ಚಾಚುತ್ತಿದ್ದರು. ತಲೆಯ ಮೇಲಿನ ಗಾಂಧಿ ಟೊಪ್ಪಿಗೆ ಮುಖದ ಮೇಲೆ ಸರಿದರೆ ಸಾಕು, ಅವರು ಗಾಢ ನಿದ್ರೆಗೆ ಜಾರುತ್ತಿದ್ದರು. ನಾನು ಎಲ್ಲರಿಗೂ ಮಗ್ಗಿ ಅನ್ನಿಸುತ್ತಿದ್ದರೆ, ಗೆಳೆಯನೊಬ್ಬ ಯಾರು ಮಗ್ಗಿ ಹೇಳುವುದಿಲ್ಲವೋ, ಯಾರು ಉಪದ್ಯಾಪ ಕೆಲಸ ಮಾಡುತ್ತಿರುತ್ತಾರೋ ಅಂಥವರ ಹೆಸರುಗಳನ್ನು ಪಾಟಿಯ ಮೇಲೆ ಬರೆದುಕೊಳ್ಳುತ್ತಿದ್ದ. ಗುರುಗಳಿಗೆ ಎಚ್ಚರವಾದಾಗ ಇವರ ಹೆಸರುಗಳನ್ನು ಹೇಳಿ ಶಿಕ್ಷೆ ಕೊಡಿಸುತ್ತಿದ್ದ!
ಇನ್ನೊಂದು ಸ್ವಾರಸ್ಯಕರ ಘಟನೆ ಮನದಾಳದಲ್ಲಿ ಇನ್ನೂ ಹಾಗೇ ಇದೆ. ಆಗ ಶಾಲೆಗೆ, ಅಂಗನವಾಡಿಯಿಂದ ಮಧ್ಯಾಹ್ನ ಸಿಂಟೆಕ್ಸ್ ಟ್ಯಾಂಕ್ ತುಂಬಾ ಗೋಧಿ ಉಪ್ಪಿಟ್ಟು ಬಂಡಿಯಲ್ಲಿ ಬರುತ್ತಿತ್ತು. ಮೊದಲೇ ಹಸಿದಿದ್ದ ನಾವು, ಆ ಉಪ್ಪಿಟ್ಟಿನ ಬಂಡಿ ಬಂದರೆ ಸಾಕು, ತಕ್ಷಣಕ್ಕೆ ಕೈಗೆ ಸಿಕ್ಕಿದ ಪುಸ್ತಕ, ಶಾಲೆಗೆ ತರಿಸುತ್ತಿದ್ದ ದಿನಪತ್ರಿಕೆಯ ಹಾಳೆಯನ್ನು ಪರ್ ಪರ್ ಅಂತ ಹರಿದು, ಅದರ ಮೇಲೆ ಉಪ್ಪಿಟ್ಟು ಹಾಕಿಸಿಕೊಂಡು ತಿನ್ನುತ್ತಿದ್ದೆವು. ಆ ಉಪ್ಪಿಟ್ಟು ಬಹಳ ರುಚಿಯಾಗಿರುತ್ತಿತ್ತು. ಪ್ರತಿ ದಿನದಂತೆ ಅವತ್ತೂ ಉಪ್ಪಿಟ್ಟನ್ನು ಹೊತ್ತುಕೊಂಡ ಆ ಬಂಡಿ ಬಂದು ನಿಂತಿತು. ಅಂದು ಬಿಇಓ ಕಚೇರಿಯಲ್ಲಿ ಮೀಟಿಂಗ್ ಇದ್ದಿದ್ದರಿಂದ, ಎಲ್ಲ ಶಿಕ್ಷಕರೂ ಅಲ್ಲಿಗೆ ಹೋಗಿದ್ದರು. ಅವತ್ತು ಎಲ್ಲರೂ ಹಾಳೆ ಹರಿದುಕೊಂಡು ಬಂಡಿಯತ್ತ ಓಡಿದರು. ನನಗೆ ಮತ್ತು ಗೆಳೆಯ ಭೀಮನಿಗೆ ಯಾವುದೇ ಕಾಗದ ಸಿಗಲಿಲ್ಲ. ಆತ ಓಡುತ್ತ ಹೆಡ್ ಮಾಸ್ಟರ್ ರೂಮ್‌ಗೆ ಹೋಗಿ, ಅಲ್ಲಿಂದ ಒಂದು ಹಾಳೆ ತಂದ. ನಾವು ಆ ಕಾಗದವನ್ನು ಹರಿದು ಎರಡು ಭಾಗ ಮಾಡಿ ಅದರಲ್ಲಿ ಉಪ್ಪಿಟ್ಟು ಹಾಕಿಸಿಕೊಂಡು ತಿಂದೆವು. ಅಷ್ಟೊತ್ತಿಗಾಗಲೇ ಮೀಟಿಂಗ್ ಮುಗಿಸಿ ಎಲ್ಲ ಶಿಕ್ಷಕರು, ಹೆಡ್ ಮಾಸ್ಟರ್ ಮರಳಿ ಶಾಲೆಗೆ ಬಂದರು. ನಾವೆಲ್ಲ ತರಗತಿಗೆ ಓಡಿ ಹೋಗಿ ಕುಳಿತೆವು.
ಸ್ವಲ್ಪ ಹೊತ್ತಿನಲ್ಲಿ ಹೆಡ್ ಮಾಸ್ಟರ್ ಕಚೇರಿಯಿಂದ ಗೌಡರ್ ಸರ್, ಎಲ್ಲ ತರಗತಿಗಳನ್ನು ವಿಚಾರಿಸುತ್ತ ನಮ್ಮ ತರಗತಿಗೆ ಬಂದರು. ಅವರ ರೌದ್ರಾವತಾರ ನೋಡಿ ನಾವು ಗಪ್‌ಚುಪ್ ಆದೆವು. ನಾವಿಲ್ಲದ ಸಮಯದಲ್ಲಿ ಹೆಡ್ ಮಾಸ್ಟರ್ ರೂಮಿಗೆ ಹೋಗಿ ಶಿಕ್ಷಕರ ಹಾಜರಿ ಪುಸ್ತಕದಲ್ಲಿನ ಈ ತಿಂಗಳ ಪುಟ ಕಿತ್ತಿರುವುದು ಯಾರು?’ ಎಂದು ಗದರಿದರು. ನಾನು ಉಪ್ಪಿಟ್ಟು ತಿಂದ ಹಾಳೆಯನ್ನು ನೆನಪಿಸಿಕೊಂಡೆ, ಅಯ್ಯಯ್ಯೋ, ಆ ಪುಟ ಅದೇ ಆಗಿತ್ತು. ನಾನು ಮತ್ತು ಭೀಮ ಹೆದರಿದೆವಾದರೂ, ಬಾಯಿ ಬಿಡದೆ ಸುಮ್ಮನೆ ಕುಳಿತಿದ್ದೆವು. ಯಾರು ಅಂತ ಹೇಳದಿದ್ದರೆ ಎಲ್ಲರಿಗೂ ಶಿಕ್ಷೆ ಕೊಡುವೆ ಎಂದು ಗೌಡರ್ ಸರ್ ಮತ್ತೂಮ್ಮೆ ಗದರಿದರು. ಇದನ್ನು ಕೇಳಿದ್ದೇ ತಡ ಉಳಿದ ಹುಡುಗರೆಲ್ಲ, ನೀವೇ ಹಾಳೆ ಹರಿದು, ಉಪ್ಪಿಟ್ಟು ತಿಂದದ್ದು. ನಾವೆಲ್ಲ ನೋಡಿದ್ದೇವೆ. ಸರ್‌ಗೆ ನಿಜ ಹೇಳಿ. ಇಲ್ಲದಿದ್ದರೆ ನಾವೇ ಹೇಳುತ್ತೇವೆ ಎಂದು ಹೆದರಿಸಿದರು. ನಾವು ಒಪ್ಪಿಕೊಳ್ಳದಿದ್ದರೆ ಇಡೀ ತರಗತಿಗೆ ಏಟು ಬೀಳುತ್ತಿತ್ತು. ಕೊನೆಗೂ ವಿಧಿಯಿಲ್ಲದೆ ನಾವಿಬ್ಬರೂ ತಪ್ಪೊಪ್ಪಿಕೊಂಡೆವು. ಅವರು ನಮ್ಮನ್ನು ದರದರನೆ ಎಳೆದುಕೊಂಡು ಹೋಗಿ, ಹೆಡ್ ಮಾಸ್ಟರ್ ಎದುರು ನಿಲ್ಲಿಸಿ ಎರಡು ಬೆತ್ತ ಮುರಿದು ಹೋಗುವವರೆಗೂ ಬಾರಿಸಿದ್ದರು. ಆವತ್ತು ಮೈಮೇಲೆ ಮೂಡಿದ ಬಾಸುಂಡೆಯ ಗಾಯ ಮಾಸಿ ಹೋಗಿದ್ದರೂ, ಘಟನೆಯ ನೆನಪು ಹಸಿಯಾಗಿಯೇ ಇದೆ.
ಎಲ್.ಪಿ.ಕುಲಕರ್ಣಿ, ಬಾದಾಮಿ