Advertisement

ಕುಕ್ಕುಟೋದ್ಯಮಕ್ಕೆ ಹೊಡೆತ ನೀಡಿದ ಬಿರು ಬಿಸಿಲು: ಶೆಡ್‌ಗಳಲ್ಲೇ ಸಾಯುತ್ತಿವೆ ಕೋಳಿಗಳು

12:58 AM Apr 03, 2024 | Team Udayavani |

ಬಂಟ್ವಾಳ: ದಿನೇದಿನೆ ಏರುತ್ತಿರುವ ಬಿಸಿಲ ಕಾವು ಕುಕ್ಕುಟೋದ್ಯಮದ ಮೇಲೆ ದೊಡ್ಡ ಹೊಡೆತ ನೀಡುತ್ತಿದೆ. ಪ್ರತಿನಿತ್ಯ ಶೆಡ್‌ಗಳಲ್ಲಿ ನೂರಾರು ಕೋಳಿಗಳು ಸಾಯುತ್ತಿರುವ ಪರಿಣಾಮ ಸಾಕಣೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಕೋಳಿಯ ಧಾರಣೆಯೂ ಏರಿಕೆಯಾಗುವ ಆತಂಕ ಎದುರಾಗಿದೆ.

Advertisement

ಬಿಸಿಲ ಝಳದ ನಡುವೆ ಕೋಳಿಗಳನ್ನು ಉಳಿಸಿಕೊಳ್ಳಲು ಸಾಕಣೆದಾರರು ವಿವಿಧ ರೀತಿಯ ಸರ್ಕಸ್‌ ಮಾಡುತ್ತಿದ್ದರೂ ಎಲ್ಲ ಉಪಾಯಗಳೂ ವಿಫಲವಾಗಿ ಸತ್ತ ಕೋಳಿಗಳನ್ನು ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಈ ಸಮಯದಲ್ಲಿ ಕೋಳಿಗಳ ಗಾತ್ರ ಹೆಚ್ಚಾದಂತೆ ಅವುಗಳ ಒತ್ತಡ ಹೆಚ್ಚಾಗಿ ಸಾಯುತ್ತವೆ. ಆದ್ದರಿಂದ ತೂಕ ನಿಯಂತ್ರಣದ ಕುರಿತು ಕೂಡ ಗಮನಹರಿಸಬೇಕಿದೆ.

ಬೇಸಗೆಗೆ ಸಾಕಷ್ಟು
ಶೆಡ್‌ಗಳು ಖಾಲಿ
ದ.ಕ., ಉಡುಪಿ ಜಿಲ್ಲೆಗಳನ್ನು ಒಳಗೊಂಡಂತೆ ಕರಾವಳಿ ಭಾಗದಲ್ಲಿ ಸುಮಾರು 1,500 ಸಾಕಣೆದಾರರು 20ರಿಂದ 25 ಲಕ್ಷದಷ್ಟು ಕೋಳಿಗಳನ್ನು ಸಾಕುತ್ತಿದ್ದಾರೆ. ಆದರೆ ಈಗ ಅದರಲ್ಲಿ ಬಹುತೇಕ ಕೋಳಿಗಳು ಸತ್ತೇ ಹೋಗುತ್ತಿವೆ. ಇನ್ನು ಕೆಲವರು ಹಿಂದಿನ ವರ್ಷಗಳ ಅನುಭವದ ಆಧಾರದಲ್ಲಿ ಬೇಸಗೆಯಲ್ಲಿ ಕೋಳಿ ಸಾಕುವುದನ್ನೇ ಬಿಟ್ಟಿದ್ದಾರೆ. ಆದ್ದರಿಂದ ಬೇಸಗೆ ಅವಧಿಯಲ್ಲಿ ಒಂದು ಬ್ಯಾಚ್‌ ಬಹುತೇಕ ಶೆಡ್‌ಗಳು ಖಾಲಿಯಾಗಿಯೇ ಇರುತ್ತವೆ. ಈ ಸಮಯದಲ್ಲಿ ಕೋಳಿ ಮರಿಗಳ ಧಾರಣೆ ಕೂಡ ಹೆಚ್ಚಿರುವುದರಿಂದ ಇನ್ನು ಮಳೆ ಬಿದ್ದ ಬಳಿಕವೇ ಸಾಕಣೆ ಆರಂಭಿಸುತ್ತಾರೆ. ಇದು ಕೋಳಿ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಜತೆಗೆ ಧಾರಣೆಯ ಏರಿಕೆಗೂ ಕಾರಣವಾಗುತ್ತದೆ.

ಫ್ಯಾನ್‌ನಿಂದ ಬದುಕುವ ಸಾಧ್ಯತೆ
ಕರಾವಳಿ ಭಾಗದಲ್ಲಿ ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ ದಾಟಿದರೆ ಕೋಳಿಗಳು ಬದುಕುವ ಸಾಧ್ಯತೆಯೇ ಕಡಿಮೆ ಇದ್ದು, ಬಯಲು ಸೀಮೆಗಳಲ್ಲಿ ನೀರು ಚಿಮ್ಮಿಸುವ ಅವಕಾಶವಿದ್ದರೆ 40 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿದರೂ ಕೋಳಿಗಳು ಬದುಕುತ್ತವೆ ಎಂದು ತಜ್ಞರು ಅಭಿಪ್ರಾಯಿಸುತ್ತಾರೆ. ಈ ಭಾಗದಲ್ಲಿ ನೀರು ಚಿಮ್ಮಿಸಿದರೂ ಕೋಳಿಗಳಿಗೆ ಉಪಯೋಗವಾಗುವುದಿಲ್ಲ. ಅದರ ಬದಲು ಫ್ಯಾನ್‌ನ ಗಾಳಿ ಹಾಯಿಸಿದರೆ ಬದುಕುವ ಸಾಧ್ಯತೆ ಇರುತ್ತದೆ. ಆದರೆ ಬೇಸಗೆಯಲ್ಲಿ ಪದೇಪದೆ ವಿದ್ಯುತ್‌ ಕೈಕೊಡುವುದರಿಂದ ನಿರಂತರವಾಗಿ ಫ್ಯಾನ್‌ ಉಪಯೋಗಿವುದು ಕೂಡ ಅಸಾಧ್ಯ. ಆದರೆ ದೊಡ್ಡ ಶೆಡ್‌ಗಳನ್ನು ಹೊಂದಿರುವವರು ಸೋಲಾರ್‌ ಫ್ಯಾನ್‌ ಉಪಯೋಗಿಸಿಕೊಂಡು ಕೋಳಿ ಸಾಕಣೆ ನಡೆಸುತ್ತಿದ್ದಾರೆ.

ತೀವ್ರ ಬಿಸಿಲಿನ ಕಾರಣ ಕೋಳಿಗಳ ಮರಣ ಪ್ರಮಾಣ ಹೆಚ್ಚಿದ್ದು, ಕರಾವಳಿಯಲ್ಲಿ ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ ದಾಟಿದರೆ ಅವುಗಳ ಒತ್ತಡ ಹೆಚ್ಚಾಗಿ ಸಾಯುತ್ತವೆ. ಫ್ಯಾನ್‌ ಗಾಳಿಯಿಂದ ಕೆಲವೊಂದೆಡೆ ಕೋಳಿಗಳನ್ನು ಬದುಕಿಸುವ ಪ್ರಯತ್ನಗಳು ನಡೆಯುತ್ತಿದೆ.
– ಡಾ| ವಸಂತ ಕುಮಾರ್‌ ಶೆಟ್ಟಿ,
ಪ್ರಾದೇಶಿಕ ಸಂಶೋಧನಾಧಿಕಾರಿ ಪಶುರೋಗ ತಪಾಸಣಾ ಕೇಂದ್ರ, ಮಂಗಳೂರು

Advertisement

ಕೆಲವು ದಿನಗಳಿಂದ ನಿರಂತರ ಕೋಳಿಗಳು ಸಾಯುತ್ತಿದ್ದು, ಸಾಯುವ ಪ್ರಮಾಣ 30-40ರಿಂದ ಪ್ರಸ್ತುತ 100 ದಾಟಿದೆ. ಇದು ನಮ್ಮಂತಹ ಸಣ್ಣ ಪ್ರಮಾಣದ ಶೆಡ್‌ ಹೊಂದಿರುವವರಿಗೆ ಬಲುದೊಡ್ಡ ನಷ್ಟವೆನಿಸುತ್ತದೆ. ಯಾವ ಪ್ರಯತ್ನ ಮಾಡಿದರೂ ಕೋಳಿಗಳನ್ನು ಬದುಕಿಸಲು ಸಾಧ್ಯವಾಗುತ್ತಿಲ್ಲ.
 - ಚೇತನ್‌ ಅಮೀನ್‌ ಬಜ, ಕೋಳಿ ಸಾಕಣೆದಾರ

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next