Advertisement

ಬಿಸಿಲೂರು ಮತ್ತೆ ಬರಗಾಲದ ದವಡೆಗ

01:36 PM Jul 28, 2018 | Team Udayavani |

ಕಲಬುರಗಿ: ಕಳೆದೆರಡು ವರ್ಷದಿಂದ ಉತ್ತಮ ಮಳೆಯಾಗಿದ್ದ ಬಿಸಿಲೂರು ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತವಾಗಿ ಮಳೆ ಕೊರತೆ ಅಪಾರ ಪ್ರಮಾಣದಲ್ಲಿ ಎದುರಾಗಿ ಶೇ. 42ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಮತ್ತೆ ಬರಗಾಲವೇ? ಎನ್ನುವಂತಾಗಿದೆ.

Advertisement

ರಾಜ್ಯದ ದಕ್ಷಿಣ ಭಾಗ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗಿ ಜಲಾಶಯಗಳೆಲ್ಲ ಭರ್ತಿಯಾಗಿದ್ದರೆ ಇತ್ತ ಕಲಬುರಗಿ ವಿಭಾಗದಲ್ಲಿ ಮಳೆಯಾಗದೇ ಇರುವುದರಿಂದ ನದಿ-ಹಳ್ಳ ಕೊಳ್ಳಗಳು ಬತ್ತಿ ಹೋಗಿದ್ದಲ್ಲದೇ ಬಿತ್ತನೆಯಾದ ಬೆಳೆಗಳು ಒಣಗುತ್ತಿದ್ದರೆ, ಮಳೆ ಕೊರತೆಯಿಂದ ಇನ್ನೂ ಶೇ. 22ರಷ್ಟು ಭೂಮಿಯಲ್ಲಿ ಮುಂಗಾರು ಬಿತ್ತನೆಯಾಗಿಲ್ಲ.

ಕಳೆದ ಮೂರು ವಾರದಿಂದ ಬರೀ ಗಾಳಿ ಅದರಲ್ಲೂ ತಣ್ಣನೇ ಗಾಳಿ ಬೀಸುತ್ತಿದೆಯಾದರೂ ಮಳೆ ಸುರಿಯುತ್ತಿಲ್ಲ. ಮಳೆಗಾಲ ಪ್ರಾರಂಭವಾಗಿ ಎರಡು ತಿಂಗಳಾಗುತ್ತಿದ್ದರೂ ಜಿಲ್ಲೆಯಾದ್ಯಂತ ಒಂದೇ ಒಂದು ಸಲ ಮಳೆ ಸಂಪೂರ್ಣವಾಗಿ ಬಿದ್ದಿಲ್ಲ. ಕೆಲವೊಂದು ಭಾಗದಲ್ಲಂತೂ ಭೂಮಿ ಇನ್ನೂ ಬೇಸಿಗೆ ಕಾಲದಲ್ಲಿಯೇ ಇದ್ದಂತಿದೆ. ಕಲಬುರಗಿ ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ಸರಾಸರಿ 120 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಕೇವಲ 70 ಮಿ.ಮೀ ಮಳೆಯಾಗಿದೆ. ಅಂದರೆ ಶೇ. 42ರಷ್ಟು ಕೊರತೆಯಾಗಿದೆ. 

ಕಲಬುರಗಿ ತಾಲೂಕಿನಲ್ಲಿ ಶೇ. 45ರಷ್ಟು, ಜೇವರ್ಗಿ ತಾಲೂಕಿನಲ್ಲಿ ಶೇ. 47ರಷ್ಟು ಹಾಗೂ ಸೇಡಂದಲ್ಲಿ ಶೇ. 50ರಷ್ಟು ಕೊರತೆಯಾಗಿದೆ. ಜೂನ್‌ ಹಾಗೂ ಜುಲೈ ತಿಂಗಳಿನ ಸರಾಸರಿ 234 ಮಿ.ಮೀ ಮಳೆ ಪೈಕಿ 191 ಮಿ.ಮೀ ಮಳೆಯಾಗಿ ಶೇ. 18ರಷ್ಟು ಕೊರತೆಯಾಗಿದೆ.

ಶೇ. 85ರಷ್ಟು ಬಿತ್ತನೆ: ಜಿಲ್ಲೆಯಲ್ಲಿ ಜೂನ್‌ ತಿಂಗಳಿನ ಆರಂಭದಲ್ಲಿ ಜಿಲ್ಲೆಯ ಸೇಡಂ, ಚಿಂಚೋಳಿ, ಆಳಂದ ತಾಲೂಕು ಹಾಗೂ ಚಿಂಚೋಳಿ ತಾಲೂಕಿನ ಭಾಗಶಃ ಭಾಗದಲ್ಲಿ ಮಳೆ ಸುರಿಯಿತು. ಆದರೆ ಕಲಬುರಗಿ ತಾಲೂಕು, ಜೇವರ್ಗಿ ಹಾಗೂ ಅಫಜಲಪುರ ತಾಲೂಕುಗಳಲ್ಲಿ ಮಳೆ ಸುರಿಯಲಿಲ್ಲ. ಮಳೆಯಾದ ತಾಲೂಕುಗಳಲ್ಲಿ ರೈತ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು ಹಾಗೂ ಸೋಯಾಬಿನ್‌ ಬಿತ್ತನೆ ಮಾಡಿದ. ಬೆಳೆಗಳೆಲ್ಲ ಸಮೃದ್ದವಾಗಿ ಮೇಲೆದ್ದಿದ್ದವು.

Advertisement

ನಂತರ ಜುಲೈ ತಿಂಗಳಿನಲ್ಲಿ ಮಳೆ ಬಾರದೇ ಇದ್ದುದ್ದಕ್ಕೆ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿತು. ಈಗಂತು ಒಂದು ವಾರ ಮಳೆ ಬಾರದಿದ್ದರೆ ಬೆಳೆಗಳೆಲ್ಲ ಸಂಪೂರ್ಣ ಒಣಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ. ಇನ್ನೊಂದೆಡೆ ಬಿದ್ದ ಅಲ್ಪ ಮಳೆಗೆ ಜುಲೈ ಎರಡನೇ ವಾರದಲ್ಲಿ ಕಲಬುರಗಿ, ಜೇವರ್ಗಿ ಹಾಗೂ ಅಫಜಲಪುರ ತಾಲೂಕಿನಲ್ಲಿ ಇರುವ ಸ್ವಲ್ಪ ಹಸಿ ನಡುವೆ ಮಳೆ ಮೇಲೆ ಭಾರ ಹಾಕಿ ಬಿತ್ತನೆ ಮಾಡಲಾಗಿದೆ. ಮೊಳಕೆಯೊಡೆದು ಮೇಲೆ ಬರುತ್ತಿವೆ. ಆದರೆ ಮಳೆ ಅತ್ಯವಶ್ಯಕವಾಗಿದೆ.

ಮುಂಗಾರು ಹಂಗಾಮಿನ ಅಂದಾಜು ಆರು ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಒಟ್ಟಾರೆ 5 ಲಕ್ಷ ಎಕರೆ ಸಮೀಪ ಬಿತ್ತನೆಯಾಗಿದೆ. ಇದರಲ್ಲಿ 3.70 ಲಕ್ಷ ಹೆಕ್ಟೇರ್‌ ತೊಗರಿ ಬಿತ್ತನೆಯಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ. 15ರಷ್ಟು ಕಡಿಮೆಯಾಗಿದೆ.

ಒಣಗಿದ ಭೀಮೆ: ಮಳೆ ಬಾರದಿದ್ದಕ್ಕೆ ಜಿಲ್ಲೆಯ ಜೀವನಾಡಿ ಭೀಮಾ ನದಿ ಸಂಪೂರ್ಣ ಬತ್ತಿ ಹೋಗಿದೆ. ಕಲಬುರಗಿ ಮಹಾನಗರ ಸೇರಿದಂತೆ ನದಿ ದಂಡೆಯ ಪಟ್ಟಣ ಹಾಗೂ ಗ್ರಾಮಗಳಿಗೂ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದರಿಂದ ನಾರಾಯಣಪುರ ಜಲಾಶಯದಿಂದ ನೀರು ಹರಿಯ ಬಿಟ್ಟು ರಾಂಪೂರ ಜಲಾಶಯ ಕಾಲುವೆ ಮುಖಾಂತರ ಭೀಮಾ ನದಿಗೆ ಗುರುವಾರದಿಂದ ನೀರು ಹರಿದು ಬಿಡಲಾಗಿದೆ. ಇಂದು ಅಥವಾ ನಾಳೆ ನೀರು ಭೀಮಾ ನದಿಗೆ ನಿಇರು ಹರಿದು ಬಂದು ಸೊನ್ನ, ದೇವಲ್‌ಗಾಣಾಪುರ ಬ್ಯಾರೇಜ್‌ನಲ್ಲಿ ಸಂಗ್ರಹವಾಗಲಿದೆ.

ಉಳಿದಂತೆ ಹೈದ್ರಾಬಾದ ಕರ್ನಾಟಕದ ಪ್ರಮುಖ ಜಲಾಶಯಗಳಾದ ಬೆಣ್ಣೆತೋರಾ, ಅಮರ್ಜಾ, ಭೀಮಾ ಏತ ನೀರಾವರಿ, ಕಾರಂಜಾ ಸೇರಿದಂತೆ ಇತರ ಜಲಾಶಯಗಳು ಬತ್ತಿವೆ. ನೀರಿನ ಮಟ್ಟ ಕೊನೆ ಹಂತಕ್ಕೆ ತಲುಪಿದೆ. ಭೀಮಾ ಏತ ನೀರಾವರಿ ಜಲಾಯಶದ ನೀರಿನ ಕಳೆದ ವರ್ಷ ಇದೇ ಸಮಯಕ್ಕೆ ಜಲಾಶಯಗಳೆಲ್ಲ ಭರ್ತಿಯಾಗಿದ್ದವು. 3.16 ಟಿಎಂಸಿ ಅಡಿ ನೀರು ಸಾಮಾರ್ಥ್ಯವಿರುವ ಭೀಮಾ ಏತ ನೀರಾವರಿ ಜಲಾಶಯದಲ್ಲಿ ಈಗ ಡೆಡ್‌ ಸ್ಟೋರೇಜ್‌ ನೀರು ಮಾತ್ರವಿದೆ. ಹೀಗಾಗಿ ನೀರು ಹರಿಯ ಬಿಡಲಾಗಿದೆ.

ಇದೇ ಪರಿಸ್ಥಿತಿ ಕೆಳದಂಡೆ ಮುಲ್ಲಾಮಾರಿ, ಚುಳುಕಿನಾಲಾ, ಅಮರ್ಜಾ, ಗಂಡೋರಿ ನಾಲಾ ಜಲಾಶಯದಲ್ಲೂ ಇದೆ. ಅದೇ ರೀತಿ ಬೀದರ್‌ ಜಿಲ್ಲೆಯ ಪ್ರಮುಖ ಕಾರಂಜಾ ಜಲಾಶಯದಲ್ಲಿ 7.69 ಟಿಎಂಸಿ ಅಡಿ ನೀರಿನ ಸಂಗ್ರಹಣಾ ಸಾಮಾರ್ಥ್ಯದಲ್ಲಿ 3.49 ಅಡಿ ನೀರಿಗೆ ತಲುಪಿದೆ. ಅರ್ಧಕ್ಕರ್ಧ ಖಾಲಿಯಾಗಿದೆ. ಯಾದಗಿರಿ ಜಿಲ್ಲೆಯ ಹತ್ತಿಕುಣಿ ಜಲಾಶಯದಲ್ಲೂ 0.352 ಟಿಎಂಸಿ ಅಡಿ ನೀರಿನ ಅಡಿ ಪೈಕಿ ಒಂದು ಹನಿ ನೀರಿಲ್ಲದೇ ಸಂಪೂರ್ಣ ಬತ್ತಿ ಹೋಗಿದೆ.

„ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next