ಮಂಡ್ಯ: ಪಿಂಚಣಿ ಸೌಲಭ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯದ ಜಿಲ್ಲಾ ಅಕ್ಷರ ದಾಸೋಹ ನೌಕರರು ಗುರುವಾರ ಜಿಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲಾ ಪಂಚಾಯಿತಿವರೆಗೆ ಮೆರವಣಿಗೆ ನಡೆಸಿ ಧರಣಿ ನಡೆಸಿದರು. ಬಳಿಕ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡರ ಮೂಲಕ ರಾಜ್ಯ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಸೌಲಭ್ಯ ನೀಡಿಲ್ಲ: 17 ವರ್ಷಗಳಿಂದ ನೌಕರರಿಗೆ ಸೂಕ್ತ ವೇತನ, ಪಿಂಚಣಿ ಹಾಗೂ ಇತರೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಹಲವು ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದೆ ಹೋರಾಟ ಮಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. 2600 ರಿಂದ 2700 ರೂ. ವೇತನ ಬಿಟ್ಟರೆ ಬೇರ್ಯಾವ ಸೌಲಭ್ಯ ನೀಡುತ್ತಿಲ್ಲ. ರಾಜ್ಯದಲ್ಲಿ
ಒಟ್ಟು 1,18,000 ಮಹಿಳೆಯರು ಈ ಯೋಜನೆಯಡಿ ದುಡಿಯುತ್ತಿದ್ದಾರೆ. ನೌಕರರ ಭವಿಷ್ಯ ನಿಧಿ (ಪಿಂಚಣಿ)ಗಾಗಿ 2016ರ ಜೂ.13, 2017ರ ಸೆ.14 ಮತ್ತು 2018ರ ಅ.4ರಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಎಲ್‌ಐಸಿ ಪಿಂಚಣಿ ವಿಭಾಗದ ಅಧಿಕಾರಿಗಳು, ಸಂಘಟನಾ ಮುಖಂಡರೊಂದಿಗೆ ಸಭೆ ನಡೆಸಿ ಎಲ್‌ಐಸಿ ಮೂಲಕ ಪಿಂಚಣಿ ಯೋಜನೆ ರೂಪಿಸಲು ಒಪ್ಪಿಗೆ ಸೂಚಿಸಲಾಗಿತ್ತು. ಆದರೆ, ಇದುವರೆಗೂ ಸೌಲಭ್ಯ ನೀಡಿಲ್ಲ ಎಂದು ಆರೋಪಿಸಿದರು.
ದಿನಾಂಕ ನಿಗದಿಪಡಿಸಿಲ್ಲ: ಸೆ.19ರಂದು ಸಚಿವ ಸುರೇಶ್‌ಕುಮಾರ್ ಅವರನ್ನು ಭೇಟಿ ಮಾಡಿ ಬೇಡಿಕೆಗಳ ಮನವಿ ನೀಡಿ ಮೌಖೀಕವಾಗಿ ಚರ್ಚಿಸಲಾಗಿದೆ. ಸೆ.30ರ ನಂತರ ದಿನಾಂಕ ನಿಗದಿ ಮಾಡಿ ಮಾತುಕತೆ ನಡೆಸುವುದಾಗಿ ತಿಳಿಸಿದ್ದರು. ಆದರೆ, ಇದುವರೆಗೂ ದಿನಾಂಕ ನಿಗದಿ ಮಾಡಿಲ್ಲ ಎಂದು ದೂಷಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷೆ ಮಹದೇವಮ್ಮ, ಪ್ರಧಾನ ಕಾರ್ಯದರ್ಶಿ ಸುನೀತಾ, ಖಜಾಂಚಿ ಪುಟ್ಟಮ್ಮ, ಸುನಂದಾ, ಯಶೋಧ, ಎಸ್.ಪಿ.ಶಾರದಮ್ಮ, ಎಸ್ .ಜಿ.ಸರಸ್ವತಿ, ಎಂ.ಲಲಕ್ಷ್ಮೀ, ವೆಂಕಟಲಕ್ಷ್ಮೀ, ವಿ.ಡಿ.ಮಂಜುಳಾ ಭಾಗವಹಿಸಿದ್ದರು.