ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆ ಯುವ ಸಂದರ್ಭದಲ್ಲಿ ಪಬ್ಲಿಕ್ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ಸಿದ್ದಪಡಿಸಿ ವಿತರಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಮಹತ್ವದ ಆದೇಶ ಹೊರಡಿಸಿದ್ದಾರೆ.
ಮಾ.25 ರಿಂದ ಏ.6ರ ವರೆಗೂ ನಡೆಯಲಿದ್ದು, ಈ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯಕ್ಕೆ ಯಾವುದೇ ಅಡಚಣೆ ಆಗದಂತೆ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೂ ಮಧ್ಯಾಹ್ನ ಬಿಸಿಯೂಟ ವಿತರಿಸುವಂತೆ ಸೂಚಿಸಲಾಗಿದೆ.
ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯು, ಪರೀಕ್ಷಾ ಕೇಂದ್ರದ ಶಾಲಾ ಮುಖ್ಯಸ್ಥರಿಗೆ ಹಾಗೂ ಪರೀಕ್ಷಾ ಕಾರ್ಯಕ್ರಮದ ಅನುಷ್ಠಾನಾಧಿಕಾರಿಗಳಿಗೆ ಹಾಗೂ ಮೇಲ್ವಿಚಾರಕ ಸಿಬ್ಬಂದಿಗಳಿಗೆ ಹಲವು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಇಲಾಖೆ ಸೂಚಿಸಿದೆ. ಅಡುಗೆ ಕೇಂದ್ರಗಳಿರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ 1,167 ಸರ್ಕಾರಿ ಹಾಗೂ 884 ಅನುದಾನ ಶಾಲೆಗಳ ಮಧ್ಯಾಹ್ನ ಬಿಸಿಯೂಟ ಸ್ಪೀಕರಿಸಲು ಅಪೇಕ್ಷಿಸಿರುವ ಹಾಗೂ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಹಾಜರಾತಿ ಸಂಖ್ಯೆಗೆ ಅನುಗುಣವಾಗಿ ಬಿಸಿಯೂಟ ಸಿದ್ಧಪಡಿಸಿ ವಿತರಿಸುವಂತೆ ಸೂಚಿಸಿದೆ. ಅಲ್ಲದೇ ಪರೀಕ್ಷಾ ಕೇಂದ್ರಗಳಿರುವ ಶಾಲೆಗಳ ಅಡುಗೆ ಕೇಂದ್ರಗಳಲ್ಲಿ ಅಡುಗೆ ತಯಾರಿಕೆ ಮತ್ತು ಬಡಿಸುವ ನಿರ್ವಹಣೆಗೆ ಅಡುಗೆ ಸಿಬ್ಬಂದಿಯನ್ನು ಹಾಗೂ ಮೇಲ್ವಿಚಾಕರಾಗಿ ವಿಷಯ ಬೋಧಕರಲ್ಲದೇ ಶಿಕ್ಷಕರಾದ ದೈಹಿಕ ಶಿಕ್ಷಣ ಶಿಕ್ಷಕರು,
ವೃತ್ತಿ ಶಿಕ್ಷಕರು ಇದ್ದಲ್ಲಿ ಒಬ್ಬರನ್ನು ನಿಯೋಜಿಸಿ ಯಾವುದೇ ಆರೋಪಗಳಿಗೆ ಅವಕಾಶ ನೀಡದಂತೆ ನಿರ್ವಹಿಸಲು ಸೂಚಿಸಿದೆ.
ತಪ್ಪದೇ ಬಿಸಿಯೂಟ ಪೂರೈಸಿ: ಏಪ್ರಿಲ್ 10ರ ವರೆಗೆ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಅಡುಗೆ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುವ ಸಂದರ್ಭದಲ್ಲಿಯು ಸಹ 1 ರಿಂದ 10ನೇ ತರಗತಿವರೆಗೂ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ತಪ್ಪದೇ ಪೂರೈಸಬೇಕು. ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದರೊಂದಿಗೆ ಸುರಕ್ಷಿತವಾಗಿ ಶುಚಿ ಹಾಗು ರುಚಿಯಾಯಗಿ ಬಿಸಿಯೂಟ ಸಿದ್ಧಪಡಿಸಿ ವಿತರಿಸಬೇಕು. ಶಾಲಾ ಮಕ್ಕಳ ಸುರಕ್ಷರತೆ ಹಾಗೂ ಆರೋಗ್ಯ, ಬಿಸಿಯೂಟ ಆಹಾರದ ಉತ್ತಮ ಗುಣಮಟ್ಟ ಸ್ವತ್ಛತೆ ಮತ್ತು ನೈರ್ಮಲ್ಯ ಮತ್ತಿತರ ಅಂಶಗಳಿಗೆ ಶಾಲಾ ಮುಖ್ಯ ಶಿಕ್ಷಕರು, ನಿರ್ವಾಹಕರು ಹಾಗೂ ಅಡುಗೆ ಸಿಬ್ಬಂದಿಯವರು ಪ್ರಥಮ ಆದ್ಯತೆ ನೀಡಿ ಯಾವುದೇ ತೊಂದರೆ ಆಗದಂತೆ ಎಚ್ಚರಿ ವಹಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಬಿ.ಬಿ.ಕಾವೇರಿ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.
– ಕಾಗತಿ ನಾಗರಾಜಪ್ಪ