Advertisement

ಮೊದಲ ದಿನ ಸಿಹಿಯೊಂದಿಗೆ ಬಿಸಿಯೂಟ

07:57 PM Oct 21, 2021 | Team Udayavani |

ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ವಲಯದ 6ರಿಂದ 10ರ ವರೆಗಿನ ಎಲ್ಲ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಕರ ಮುಂದಾಳತ್ವದಲ್ಲಿ ಅಡುಗೆ ಸಿಬಂದಿಯ ಸಹಕಾರದೊಂದಿಗೆ ಯಾವುದೇ ಸಮಸ್ಯೆಯಾಗದಂತೆ ಬಿಸಿಯೂಟವನ್ನು ಉಣ ಬಡಿಸಲಾಯಿತು.

Advertisement

378 ಅಡುಗೆ ಕೋಣೆ:

ಕುಂದಾಪುರ ಹಾಗೂ ಬೈಂದೂರು ಎರಡೂ ತಾಲೂಕುಗಳಲ್ಲಿ ಒಟ್ಟು 1ರಿಂದ 10ರ ವರೆಗಿನ 378 ಶಾಲೆಗಳಿದ್ದು, ಅದರಲ್ಲಿ 6ರಿಂದ 10ರ ವರೆಗೆ 244 ಶಾಲೆಗಳಿವೆ. ಒಟ್ಟಾರೆ 1-10ರ ವರೆಗೆ 33,773 ಮಕ್ಕಳು ವ್ಯಾಸಂಗ ಮಾಡುತ್ತಿದ್ದರೆ, 6-10ರ ವರೆಗೆ 16,599 ಮಕ್ಕಳಿದ್ದಾರೆ. 550 ಮಂದಿ ಅಡುಗೆ ಸಿಬಂದಿಯಿದ್ದು, 378 ಅಡುಗೆ ಕೋಣೆಗಳಿವೆ.

ವ್ಯವಸ್ಥೆ  ಹೇಗೆ?:

ಶಾಲೆಗಳಲ್ಲಿ ಬಿಸಿಯೂಟ ಆರಂಭಿಸುವುದಾಗಿ ಸರಕಾರ ದಿಢೀರ್‌ ಘೋಷಿಸಿದ್ದರಿಂದ ಆಹಾರ ನಿಗಮದಿಂದ ಅಕ್ಕಿ ಹೊರತುಪಡಿಸಿ ಇತರ ಅಗತ್ಯದ ದಿನಸಿ ವಸ್ತುಗಳ ಪೂರೈಕೆಯಾಗಿರಲಿಲ್ಲ. ಆದರೆ ಈ ಬಗ್ಗೆ ಸಮಸ್ಯೆಯಾಗಬಹುದು ಎಂದರಿತಿದ್ದ ಇಲಾಖೆಯ ಅಧಿಕಾರಿಗಳು ಮುಂಚಿತವಾಗಿ ಆಯಾಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಶಿಕ್ಷಕರೇ ಸ್ವತಃ ಅಕ್ಷರ ದಾಸೋಹ ಯೋಜನೆಯ ಅನುದಾನವನ್ನು ಬಳಸಿ, ಅಂಗಡಿಯಿಂದ ಅಗತ್ಯ ವಸ್ತುಗಳ ಖರೀದಿಗೆ ಸೂಚಿಸಲಾಗಿತ್ತು. ಅದರಂತೆ ಶಿಕ್ಷಕರು ಎಣ್ಣೆ, ಉಪ್ಪು, ಬೇಳೆಕಾಳು, ತರಕಾರಿ ಇನ್ನಿತರ ವಸ್ತುಗಳನ್ನು ಅಂಗಡಿಯಿಂದ ಖರೀದಿಸಿ, ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲಾಗಿದೆ.

Advertisement

ಇನ್ನು ಕೆಲವು ಕಡೆಗಳಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ  ಅಕ್ಷರ ದಾಸೋಹದಿಂದ ಸರಬರಾಜಾದ ಅಕ್ಕಿ ಮತ್ತು ಬೇಳೆ ವಿದ್ಯಾರ್ಥಿಗಳ ಪೋಷಕರಿಗೆ ನೀಡಿಯೂ, ಉಳಿದಿದ್ದು, ಅದನ್ನು ಬಳಸಿಕೊಳ್ಳಲಾಗಿದೆ. ಇದಲ್ಲದೆ ಅನುದಾನ ಸಕಾಲದಲ್ಲಿ ಸಿಗದಿದ್ದರೆ, ಸಮೀಪದ ಪಡಿತರ ಅಂಗಡಿಗಳಲ್ಲಿ ಪಡೆದು, ನಿಗಮದಿಂದ ಪೂರೈಕೆಯಾದ ಬಳಿಕ ಅವರಿಗೆ ಹಿಂದಿರುಗಿಸಲು ಸಹ ಸೂಚಿಸಲಾಗಿತ್ತು. ಆದರೆ ಕುಂದಾ ಪು ರ ಹಾಗೂ ಬೈಂದೂರು ವಲಯದಲ್ಲಿ ಅಂತಹ ಯಾವುದೇ ನಿದರ್ಶನ ಕಂಡು ಬಂದಿಲ್ಲ.

ಕಂಬದಕೋಣೆ: ನೀರಿನ ಸಮಸ್ಯೆ :

ಕಂದಬಕೋಣೆ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಬಿಸಿಯೂಟ ತಯಾರಿಗೆ ನೀರಿನ ಸಮಸ್ಯೆ ಎದುರಾಯಿತು. ಅಗತ್ಯ ವಸ್ತುಗಳ ಸಮಸ್ಯೆ ಏನು ಕಾಣಿಸದಿದ್ದರೂ, ರಿಂಗ್‌ ಬಾವಿ ಕುಸಿದಿದ್ದರಿಂದ ನೀರು ಬಳಕೆಗೆ ಅಷ್ಟೇನು ಯೋಗ್ಯವಲ್ಲ ಅನ್ನುವ ಕಾರಣಕ್ಕೆ ಆ ನೀರನ್ನು ಬಳಸಲಾಗಿಲ್ಲ. ಈಗ ಸಮಸ್ಯೆ ಬಗೆಹರಿದಿದ್ದು, ಶುಕ್ರವಾರದಿಂದ ಮಕ್ಕಳಿಗೆ ಬಿಸಿಯೂಟ ಎಂದಿನಂತೆ ನಡೆಯಲಿದೆ.

ಅಕ್ಕಿ ಬೇಳೆ ಖರೀದಿ :

ತೆಕ್ಕಟ್ಟೆ:  ಬಿದ್ಕಲ್‌ಕಟ್ಟೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌, ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಸ.ಮಾ.ಹಿ.ಪ್ರಾ. ಶಾಲೆ, ಯಡಾಡಿ ಮತ್ಯಾಡಿ ಸರಕಾರಿ ಶಾಲೆ, ಹುಣ್ಸೆಮಕ್ಕಿ ಶಾಲೆ, ಹೆಸ್ಕಾತ್ತೂರು ಸ.ಪ್ರಾ. ಶಾಲೆ, ಹೆಸ್ಕಾತ್ತೂರು ಪ್ರೌಢಶಾಲೆ ವಿದ್ಯಾರ್ಥಿಗಳು ಬಿಸಿಯೂಟ ಸವಿ ದರು. ಬಿಸಿಯೂಟಕ್ಕೆ ಬೇಕಾಗುವ ಅಗತ್ಯ ವಸ್ತುಗಳಾದ ಬೇಳೆಕಾಳು, ಎಣ್ಣೆ, ತರಕಾರಿ, ಉಪ್ಪು, ಸಕ್ಕರೆ, ತರಕಾರಿ, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳನ್ನು ಶಾಲಾ ಸಮೀಪದ ದಿನಸಿ ಅಂಗಡಿಯಲ್ಲಿ ಖರೀದಿಸಲಾಗಿದೆ.

ಶಿಕ್ಷಕರೇ ಸಾಮಗ್ರಿ ತಂದರು… :

ಬಸ್ರೂರು: ಬಸ್ರೂರು, ಬಳ್ಕೂರು, ಕಂಡೂÉರು, ಆನಗಳ್ಳಿ, ಕೋಣಿ, ಕಂದಾವರ, ಗುಲ್ವಾಡಿ, ಜಪ್ತಿ ಮುಂತಾದ ಪ್ರದೇಶಗಳ ಶಾಲೆಗಳಲ್ಲಿ ಕೆಲವೆಡೆ ಅಕ್ಕಿ ಸ್ವಲ್ಪ ಮಾತ್ರ ಉಳಿದಿತ್ತು. ಇನ್ನೊಂದೆಡೆ ಬೇಳೆಯೇ ಇರಲಿಲ್ಲ. ಇಂತಹ ಶಾಲೆಗಳಲ್ಲಿ ಇಲಾಖೆಯ ಆದೇಶದಂತೆ ಶಾಲೆಗಳಿಗೆ ಶಿಕ್ಷಕರೇ ಹಣ ತೆತ್ತು ಅಕ್ಕಿ, ಬೇಳೆ, ಎಣ್ಣೆ ಮತ್ತು ತರಕಾರಿಗಳನ್ನು ಅಂಗಡಿಯಿಂದ ಖರೀದಿಸಿ, ಮಕ್ಕಳಿಗೆ ಬಿಸಿಯೂಟ ತಯಾರಿಸಿ, ಉಣ ಬಡಿಸಿದ್ದಾರೆ.

ದಾನಿಗಳಿಂದ ಪಾಯಸ :

ಸಿದ್ದಾಪುರ:  ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಬಿಸಿಯೂಟ  ಪ್ರಾರಂಭಗೊಂಡವು.  ಹೆಚ್ಚಿನ ಶಾಲೆಗಳಲ್ಲಿ ಬಿಸಿಯೂಟ ಪ್ರಾರಂಭೋತ್ಸವಕ್ಕೆ ದಾನಿಗಳು ಪಾಯಸವನ್ನು ನೀಡಿದ್ದಾರೆ.

ಮನೆಯಿಂದ ಕ್ಯಾರಿಯರ್‌… :

ಕೋಟೇಶ್ವರ: ಅನೇಕ ವಿದ್ಯಾರ್ಥಿಗಳಿಗೆ ಬಿಸಿಯೂಟದ ಬಗ್ಗೆ ಪೂರ್ಣ ಮಾಹಿತಿ ಇಲ್ಲ ದಿರುವುದರಿಂದ ಅ.21ರಂದು ಮನೆಯಿಂದ ಕ್ಯಾರಿಯರ್‌ನಲ್ಲಿ ತಿಂಡಿ-ತಿನಿಸುಗಳನ್ನು ತಂದಿದ್ದರು.  ಬಿಸಿಯೂಟಕ್ಕಾಗಿ ಅಕ್ಕಿ ಹೊರತುಪಡಿಸಿ ಇತರ ವಸ್ತುಗಳನ್ನು ದಿನಸಿ ಅಂಗಡಿಯಿಂದ ಖರೀದಿಸಲಾಗಿದೆ. ಅ. 22ರಿಂದ ಕಡ್ಡಾಯ ಬಿಸಿ ಯೂಟ ಆರಂಭಿಸಲಾಗುತ್ತದೆ.

ಮೊದಲ ದಿನ ಸುಸೂತ್ರ ಅಕ್ಷರ ದಾಸೋಹ ಅನುದಾನ ಬಳಕೆ ಸರಕಾರದ ಸುತ್ತೋಲೆಯಂತೆ ಅಕ್ಷರ ದಾಸೋಹ ಯೋಜನೆಯಡಿ ಸುಮಾರು 2 ಕೋ.ರೂ. ಅನುದಾನ ಲಭ್ಯವಿದ್ದು, ಅದನ್ನು ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ. ಮೊದಲ ದಿನ ಯಾವುದೇ ಸಮಸ್ಯೆಗಳಿಲ್ಲದೆ, ಸುಸೂತ್ರವಾಗಿ ಕುಂದಾಪುರ, ಬೈಂದೂರಿನ ಎಲ್ಲ ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲಾಗಿದೆ.ಅರುಣ್‌ ಕುಮಾರ್‌,  ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಯೋಜನೆ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next